ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದಲ್ಲಿ ಮುಂಗಾರು ಮಳೆ ಮತ್ತೆ ಚುರುಕಾಗಿದೆ. ಶಿವಮೊಗ್ಗ ಜಿಲ್ಲೆಯ ಶೃಂಗೇರಿಯಲ್ಲಿ ಭಾರೀ ಮಳೆಯಾಗಿದ್ದು ನದಿಗಳು ತುಂಬಿ ಹರಿಯುತ್ತಿವೆ. ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಕೆಲವು ತಾಲೂಕುಗಳಲ್ಲಿ ಮಳೆ ಅಬ್ಬರಿಸುವ ಮುನ್ಸೂಚನೆ ಸಿಕ್ಕಿರುವ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಪುರ ಬಳಿ ಜಲಪಾತವೊಂದರಲ್ಲಿ ಏಕಾಏಕಿ ನೀರು ಹೆಚ್ಚಿದ್ದರಿಂದ ಪ್ರವಾಸಿಗರು ಸಿಲುಕಿ ಸಂಕಷ್ಟಕ್ಕೆ ಈಡಾದ ಘಟನೆ ನಡೆದಿದೆ.ಪುನರ್ವಸು ಮಳೆಯು ರಾಜ್ಯದಲ್ಲಿ ಬುಧವಾರದಿಂದ ಚುರುಕುಗೊಂಡಿದೆ. ಶಿವಮೊಗ್ಗ ಜಿಲ್ಲೆಯ ಶೃಂಗೇರಿ
ತಾಲೂಕಿನಾದ್ಯಂತ ಮಳೆಯ ಆರ್ಭಟ ಮುಂದುವರಿದಿದೆ. ಬುಧವಾರ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದೆಲ್ಲೆಡೆ ಭಾರೀ ಮಳೆ ಸುರಿಯಿತು. ಮಂಗಳವಾರ ರಾತ್ರಿಯಿಡೀ ಆರ್ಭಟಿಸಿದ ಮಳೆಯಿಂದ ನದಿಗಳೆಲ್ಲ ತುಂಬಿ ಹರಿಯುತ್ತಿದೆ. ತುಂಗಾ ನದಿ, ನಂದಿನಿ, ನಳಿನಿ ನದಿಗಳಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಶೃಂಗೇರಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಸಂದರ್ಭದಲ್ಲಿ ಮಣ್ಣು ತೆಗೆದ ಕಡೆಯೆಲ್ಲಾ ಗುಡ್ಡ ಕುಸಿತ, ಭೂಕುಸಿತ ಉಂಟಾಗುತ್ತಿದ್ದು ಮನೆಗಳು ಕುಸಿದು ಬೀಳುತ್ತಿವೆ. ಇನ್ನು ಕೆಲವು ಅಪಾಯದಂಚಿನಲ್ಲಿದೆ.ಇನ್ನು ಉಡುಪಿ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇವುಗಳ ಜೊತೆಗೆ ಕೊಡಗಿನಲ್ಲಿ ಪದವಿ ಪೂರ್ವ ಕಾಲೇಜುಗಳಿಗೂ ರಜೆ ನೀಡಲಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಬಹುತೇಕ ಕಡೆ ಉತ್ತಮ ಮಳೆಯಾಗಿತ್ತು. ಸಂಜೆವರೆಗೆ ಮಳೆ ಕ್ಷೀಣವಾಗಿದ್ದು, ಸಂಜೆಯ ಬಳಿಕ ಬಿರುಸುಗೊಂಡಿತ್ತು. ಆರೇಂಜ್ ಅಲರ್ಟ್ ಇದ್ದರೂ ನಿರೀಕ್ಷೆಯಷ್ಟು ಮಳೆಯಾಗಿಲ್ಲ. ಕೇಂದ್ರ ಹವಾಮಾನ ಇಲಾಖೆ ಗುರುವಾರ ಜಿಲ್ಲೆಗೆ ಹಳದಿ ಅಲರ್ಟ್ ಘೋಷಿಸಿದೆ. ಕೊಡಗಿನಲ್ಲಿ ಸಾಧಾರಣ ಮಳೆಯಾಗಿದ್ದು, ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದ ಬುಡದಲ್ಲಿ ಸುಮಾರು 1.5 ಕಿ.ಮೀ. ದೂರದಲ್ಲಿ ಜಲಪಾತದಲ್ಲಿ ಏಕಾಏಕಿ ನೀರು ಏರಿಕೆ ಆಗಿತ್ತು. ವೀಕ್ಷಣೆಗೆ ಬಂದಿದ್ದ ಪ್ರವಾಸಿಗರ ಪೈಕಿ ಹುಬ್ಬಳ್ಳಿಯ ಎಸ್‌ಡಿಎಂ ಕಾಲೇಜಿನಿಂದ ಬಂದಿದ್ದ ಐವರು ವಿದ್ಯಾರ್ಥಿಗಳು ಸಿಲುಕಿದ್ದರು. ವಿಷಯ ತಿಳಿದ ಅರಣ್ಯ ಇಲಾಖೆ, ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ.