ಕನ್ನಡಪ್ರಭ ವಾರ್ತೆ ಮೇಲುಕೋಟೆ
ಕ್ರಿ.ಶ.1017ರ ಬಹುದಾನ್ಯ ಸಂವತ್ಸರದ ಮಕರ ಶುಕ್ಲಪುನರ್ವಸು ನಕ್ಷತ್ರದಂದು ತೊಂಡನೂರಿನಿಂದ ಸಾವಿರ ಶಿಷ್ಯರೊಂದಿಗೆ ಯದುಗಿರಿಗೆ ಆಗಮಿಸಿದ ಭಗವದ್ ರಾಮಾನುಜರು ಬೆಟ್ಟದ ಮಧ್ಯೆ ಕಾಡಿನ ನಡುವೆಯಿದ್ದ ಹುತ್ತಕಂಡು ಹಿಡಿದು ಕಲ್ಯಾಣಿ ತೀರ್ಥ ಮತ್ತು ಹಾಲಿನಿಂದ ಹುತ್ತಕರಗಿಸಿ ಮೊದಲ ಅಭಿಷೇಕ ಮಾಡಿ ಶ್ರೀಚೆಲುವನಾರಾಯಣನ ದರ್ಶನ ಪಡೆದ ಕಾರಣ ಪ್ರತಿ ಸಂವತ್ಸವರದಲ್ಲೂ ಮಕರಶುಕ್ಲ ಪುನರ್ವಸುವಿನಂದು ಪುನರ್ವ ಉತ್ಸವ ನೆರವೇರುತ್ತಾ ಬಂದಿದೆ.
ವಿದ್ವಾನ್ ಬಿ.ವಿ.ಆನಂದಾಳ್ವಾರ್ ನೇತೃತ್ವದಲ್ಲಿ ಕ್ರೋದಿನಾಮ ಸಂವತ್ಸರದ ಮಕರ ಶುಕ್ಲಪುನರ್ವಸು ಪವಿತ್ರ ದಿನವಾದ ಸೋಮವಾರ ಪುನರ್ವಸು ಮಹೋತ್ಸವ ಸಡಗರ ಸಂಭ್ರಮದಿಂದ ನೆರವೇರಿತು. ಉತ್ಸವದ ನಿಮಿತ್ತ ಚೆಲುವನಾರಾಯಣನ ದೇವಾಲಯದ ಆವರಣವನ್ನು ರಂಗವಲ್ಲಿ, ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು.ತಮಿಳುನಾಡಿನಿಂದ ಕರ್ನಾಟಕಕ್ಕೆ ಆಗಮಿಸಿದ ರಾಮಾನುಜರು ತಿರುನಾರಾಯಣನ ದರ್ಶನ ಭಾಗ್ಯಪಡೆದ 929ನೇ ವರ್ಷದ ಪುನರ್ವಸು ಉತ್ಸವದ ಅಂಗವಾಗಿ ಬೆಳಗ್ಗೆ 5.30ಕ್ಕೆ ರಾಮಾನುಜಾಚಾರ್ಯರಿಗೆ ವೇದಪಾರಾಯಣ ಮತ್ತು ವಿಶೇಷ ಆರಾಧನೆಯೊಂದಿಗೆ ಅಭಿಷೇಕ ಮಾಡಲಾಯಿತು.
ಶ್ರೀವೈಷ್ಣವ ಪಾರಾಯಣದವರು ಹುತ್ತ ಕರಗಿಸಿ ಚೆಲುವನಾರಾಯಣಸ್ವಾಮಿಯನ್ನು ದರ್ಶನ ಮಾಡಿ ಸಂತೋಷಗೊಂಡ ರಾಮಾನುಜರೇ ಸ್ವತಃ ಹಾಡಿದ ದಿವ್ಯಮಂತ್ರವನ್ನು ಒಕ್ಕೊರಲಿನಿಂದ ಭಕ್ತಿಯೊಂದಿಗೆ ಪಾರಾಯಣ ಮಾಡಿದರು. ಸಹಸ್ರಾರು ಭಕ್ತರು ಉತ್ಸವದಲ್ಲಿ ಭಾಗಿಯಾಗಿ ಆಚಾರ್ಯರ ದರ್ಶನ ಪಡೆದು ಪುನೀತರಾದರು.
ವಂಗೀಪುರಂ ತಿರುಮಾಳಿಗೆಯಲ್ಲಿ ರಾಮಾನುಜರಿಗೆ ಸಮರ್ಪಿಸಲು ನೂರಾರು ತಟ್ಟೆಗಳಲ್ಲಿ ಸೇಬು, ಸೀಬೆ, ದಾಳಿಂಬೆ, ಪರಂಗಿ, ಚಕೋತ, ದ್ರಾಕ್ಷಿ, ಮಾವು, ಖರ್ಜೂರ, ಕಲ್ಲುಸಕ್ಕರೆ, ತೆಂಗು, ಕೊಬ್ಬರಿ ಹೀಗೆ ವಿವಿಧ ಬಗೆಯ ಹಣ್ಣುಗಳು ಮತ್ತು ಹೂವುಗಳನ್ನು ಜೋಡಿಸಲಾಗಿತ್ತು.
ವಿಶೇಷ ಪೂಜಾ ಕೈಂಕರ್ಯ ಮತ್ತು ನಿವೇದನ ನಡೆದ ನಂತರ ಹಣ್ಣುಗಳಿಂದ ಮಾಡಿದ ಪಂಚಾಮೃತ ಮತ್ತು ಕಂದಂಬ ಸಕ್ಕರೆ ಪೊಂಗಲ್, ದದಿಯೋದನ ಪ್ರಸಾದಗಳನ್ನು ನೆರೆದಿದ್ದ ಸಹಸ್ರಾರು ಭಕ್ತರಿಗೆ ವಿತರಣೆ ಮಾಡಲಾಯಿತು. ರಾತ್ರಿ ರಾಮಾನುಜರು ಸ್ವಸ್ಥಾನಕ್ಕೆ ಮರಳುವ ಮೂಲಕ ಪುನರ್ವಸು ಕೈಂಕರ್ಯಗಳು ಮುಕ್ತಾಯವಾದವು.