ಕನ್ನಡಪ್ರಭ ವಾರ್ತೆ ತುಮಕೂರು ನಟ ಡಾ.ಪುನೀತ್‌ರಾಜ್‌ಕುಮಾರ್ ಅವರ ಎರಡನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ನಗರದಲ್ಲಿ ಅವರ ಅಭಿಮಾನಿಗಳಿಂದ ಆಚರಿಸಲಾಯಿತು. ಡಾ.ಶಿವಕುಮಾರಸ್ವಾಮೀಜಿ ವೃತ್ತದಲ್ಲಿ ಡಾ. ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಟಿ.ಆರ್.ಮಂಜುನಾಥ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದ ಅಂಗವಾಗಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಹಲವಾರು ಯುವಕರು ಸ್ವಯಂಪ್ರೇರಿತರಾಗಿ ಆಗಮಿಸಿ ರಕ್ತದಾನ ಮಾಡಿ ಪುನೀತ್ ಪುಣ್ಯಸ್ಮರಣೆ ದಿನವನ್ನು ಸ್ಮರಣೀಯವಾಗಿಸಿದರು. ಪುನೀತ್ ನೆನಪಿನಲ್ಲಿ ಗಿಡಗಳನ್ನು ನೆಟ್ಟು ಬೆಳೆಸಲು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಲಾಯಿತು. ಈ ವೇಳೆ ಅನ್ನಸಂತರ್ಪಣೆ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಗರ ಪಾಲಿಕೆ ಸದ್ಯಸ್ಯ ಶ್ರೀನಿವಾಸ್ ಹಾಗೂ ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಮೋಹನ್ ಕುಮಾರ್ ಅವರು ಪುನೀತ್ ರಾಜ್‌ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಗರ ಪಾಲಿಕೆ ಸದಸ್ಯ ಶ್ರೀನಿವಾಸ್ ಮಾತನಾಡಿ, ಪುನೀತ್ ರಾಜ್‌ಕುಮಾರ್ ಅವರು ಶ್ರೇಷ್ಠ ನಟ ಮಾತ್ರವಲ್ಲದೆ ಮಾನವೀಯತೆಯ ಆದರ್ಶ ವ್ಯಕ್ತಿತ್ವ ಹೊಂದಿದ್ದರು. ಅವರು ಮಾಡಿದ ಸಮಾಜ ಸೇವಾ ಕಾರ್ಯಗಳು ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕು ಎಂದು ತಿಳಿಸಿದರು. ಡೀಸಿ ಕಚೇರಿಯ ಸಹಾಯಕ ಮೋಹನ್ ಕುಮಾರ್ ಅವರು, ಪುನೀತ್ ರಾಜ್‌ಕುಮಾರ್ ಅವರ ಗುಣಸ್ವಭಾವ, ಅವರಲ್ಲಿನ ಸೇವಾ ಕಳಕಳಿ, ಮಾನವೀಯತೆ ಪ್ರಶಂಸಿಸಿ ಅವರ ಆತ್ಮಕ್ಕೆ ಶಾಂತಿ ಕೋರಿದರು. ಪುನೀತ್ ಅಭಿಮಾನಿ ಬಳಗದ ಅಧ್ಯಕ್ಷ ಟಿ.ಆರ್.ಮಂಜುನಾಥ್ ಮಾತನಾಡಿ, ಪುನೀತ್ ರಾಜ್‌ಕುಮಾರ್ ಅವರು ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಪುಣ್ಯ ಸ್ಮರಣೆ ದಿನವಾದ ಇಂದು ಹಲವೆಡೆ ಅಭಿಮಾನಿಗಳು ವಿವಿಧ ಸೇವಾಕಾರ್ಯ ಮಾಡುತ್ತಿದ್ದಾರೆ. ಅಗಲಿದ ಪುನೀತ್ ಅವರ ಕಾರ್ಯಗಳನ್ನು ಸ್ಮರಣೆ ಮಾಡುತ್ತಿದ್ದಾರೆ. ಪುನೀತ್ ಅವರು ಉತ್ತಮ ಸಮಾಜದ ನಿರ್ಮಾಣದಲ್ಲಿ ಯುವಜನರಿಗೆ ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು. ಅಭಿಮಾನಿ ಬಳಗದ ಮುಖಂಡರಾದ ಶಿವಕುಮಾರ್(ಬಂಡೆ), ಜಿ.ಚಂದ್ರು, ಟಿ.ಎಲ್.ಹನುಮಂತರಾಜು, ಎಸ್.ಎನ್.ಮಂಜುನಾಥ್, ದೀಪಕ್ ಮತ್ತಿತರರು ಭಾಗವಹಿಸಿದ್ದರು.