ಶಂಕರಭಟ್ ತಾರೀಮಕ್ಕಿ
ಯಲ್ಲಾಪುರ:ರಾಜ್ಯ ಸರ್ಕಾರ ಘೋಷಿಸಿರುವ ಪುನೀತ್ ಹೃದಯ ಜ್ಯೋತಿ ಯೋಜನೆ ಇಲ್ಲಿನ ತಾಲೂಕಾಸ್ಪತ್ರೆಯಲ್ಲಿ ಶೀಘ್ರದಲ್ಲಿ ಆರಂಭವಾಗಲಿದ್ದು, ಬಡವರ ಪಾಲಿಗೆ ವರವಾಗಲಿದೆ.
ಕೋವಿಡ್ ನಂತರ ದೇಶದಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚಾಗಿವೆ ಎಂಬ ವಾದಗಳ ನಡುವೆಯೇ ತಾಲೂಕಿನಲ್ಲಿ ಅಬಾಲ ವೃದ್ಧರಾದಿಯಾಗಿ ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ. ಇವರಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೆ ಹಲವರು ಪ್ರಾಣ ತೆತ್ತರೆ, ಕೆಲವರು ಖಾಸಗಿ ಆಸ್ಪತ್ರೆಗಳಿಗೆ ತೆರಳಿ ದುಬಾರಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಈ ಪುನೀತ್ ಜ್ಯೋತಿ ಯೋಜನೆ ಇಲ್ಲಿ ಆರಂಭ ಆಗುತ್ತಿರುವುದು ಜನತೆಯಲ್ಲಿ ಬದುಕುವ ಭರವಸೆ ಹುಟ್ಟಿಸಿದೆ.ನಟ ಪುನೀತ್ ರಾಜಕುಮಾರ ಅವರ ನೆನಪಿಗಾಗಿ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆಯನ್ನು ರಾಜ್ಯದ 95 ತಾಲೂಕಾಸ್ಪತ್ರೆಯಲ್ಲಿ ಆರಂಭಿಸಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಯಲ್ಲಾಪುರ ಹಾಗೂ ಹಳಿಯಾಳ ಎರಡು ಆಸ್ಪತ್ರೆಗಳು ಆಯ್ಕೆಯಾಗಿವೆ.ಹೃದಯಕ್ಕೆ ಸಂಬಂಧಿಸಿದ ನೋವು ಕಾಣಿಸಿಕೊಂಡಲ್ಲಿ ತಕ್ಷಣವೇ ಚಿಕಿತ್ಸೆ ನೀಡುವುದು ಅನಿವಾರ್ಯ. ಇಂತಹ ಸನ್ನಿವೇಶದಲ್ಲಿ ರೋಗಿಯು ಯಾವ ಸ್ಥಿತಿಯಲ್ಲಿದ್ದಾನೆಂದು ತಿಳಿಯುವ ಅತ್ಯಾಧುನಿಕ ಯಂತ್ರ ಮತ್ತು ರೋಗಿಯು ಮತ್ತಷ್ಟು ಕ್ಲಿಷ್ಟಕರ ಸನ್ನಿವೇಶಕ್ಕೆ ತಲುಪದಂತೆ ಚಿಕಿತ್ಸೆ ನೀಡುವುದು, ಇದರೊಂದಿಗೆ ಟೆನೆಸ್ಟೆಪ್ಲೇಸ್ ಚುಚ್ಚುಮದ್ದು ನೀಡುವುದು ಈ ಯೋಜನೆಯ ಉದ್ದೇಶ. ಈ ಚುಚ್ಚುಮದ್ದುಗೆ ಖಾಸಗಿ ಆಸ್ಪತ್ರೆಗಳಲ್ಲಿ ₹ ೩೦ರಿಂದ ₹ ೪೫ ಸಾವಿರ ತಗಲುತ್ತದೆ. ನಂತರ ಹತ್ತಿರದ ಧಾರವಾಡದ ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್, ಹುಬ್ಬಳ್ಳಿಯ ಕಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೂಡಾ ದೊರೆಯಲಿದೆ.ಇಂತಹ ಮಹತ್ತರ ಯೋಜನೆಯ ವ್ಯಾಪ್ತಿಗೆ ತಾಲೂಕು ಸರ್ಕಾರಿ ಆಸ್ಪತ್ರೆ ಸೇರಿರುವುದು ಬಡ ಮತ್ತು ಮಧ್ಯಮ ವರ್ಗಗಳಲ್ಲಿ ಸಂತಸ ಉಂಟು ಮಾಡಿದೆ.ಯಲ್ಲಾಪುರ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸರ್ಕಾರ ಮಹತ್ವಾಕಾಂಕ್ಷೆಯ ಪುನೀತ್ ಹೃದಯ ಜ್ಯೋತಿ ಯೋಜನೆ ಮಂಜೂರು ಮಾಡಿದೆ. ಹೃದಯಾಘಾತಕ್ಕೆ ಒಳಗಾಗುವ ರೋಗಿಗಳಿಗೆ ಅಗತ್ಯ ಸಮಯದಲ್ಲಿ ಸೂಕ್ತ ಚಿಕಿತ್ಸೆಯನ್ನು ಈ ಯೋಜನೆಯಡಿ ನೀಡಲಾಗುತ್ತದೆ. ಬಡವರಿಗೆ ಇದು ಅನುಕೂಲವಾಗಲಿದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.
ಪುನಿತ್ ಹೃದಯ ಜ್ಯೋತಿ ಯೋಜನೆ ಕುರಿತು ಸಂಪೂರ್ಣ ಮಾಹಿತಿ ಇನ್ನಷ್ಟೇ ಸಿಗಬೇಕಿದೆ. ಒಟ್ಟಿನಲ್ಲಿ ಒಂದು ಉತ್ತಮ ಸೇವೆ ಜನತೆಗೆ ದೊರೆಯುತ್ತಿದ್ದು ನಮ್ಮ ಆಸ್ಪತ್ರೆಗೆ ಈ ಯೋಜನೆ ಬರುತ್ತಿರುವುದು ಸಂತಸದ ವಿಷಯ. ಮೇಲ್ನೋಟಕ್ಕೆ ತಿಳಿದಿರುವಂತೆ ಧಾರವಾಡ ಹಬ್‌ನಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳೊಂದಿಗೆ ಸಂಪರ್ಕದಲ್ಲಿದ್ದು ಟೆಲಿ ಕಾನ್ಫರೆನ್ಸ್ ಮೂಲಕ ಹೃದಯಕ್ಕೆ ಸಂಬಂಧಿಸಿದ ಚಿಕಿತ್ಸೆ ಇಲ್ಲಿ ನೀಡಬಹುದಾಗಿದೆ. ಅಲ್ಲದೇ ದುಬಾರಿ ಚುಚ್ಚುಮದ್ದನ್ನು ಕೂಡಾ ಉಚಿತವಾಗಿ ನೀಡಬಹುದಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ ತಿಳಿಸಿದ್ದಾರೆ.