ಹಂಪಿಯ ಪುರಂದರ ಮಂಟಪ, ಕಂಪಭೂಪ ಮಾರ್ಗ ಬಂದ್‌

KannadaprabhaNewsNetwork |  
Published : Jul 27, 2024, 12:54 AM IST
26ಎಚ್‌ಪಿಟಿ10-  ಹೊಸಪೇಟೆಯ ತುಂಗಭದ್ರಾ ಜಲಾಶಯದಿಂದ 32 ಗೇಟ್‌ಗಳಿಂದ ಭಾರೀ ಪ್ರಮಾಣದ ನೀರು ನದಿಗೆ ಹರಿಸಲಾಗಿದೆ. | Kannada Prabha

ಸಾರಾಂಶ

ಹಂಪಿಗೆ ಇನ್ನು ಭಾರೀ ಪ್ರಮಾಣದ ನೀರು ಬಿಟ್ಟರೆ, ಚಕ್ರತೀರ್ಥ ಪ್ರದೇಶದವರೆಗೆ ನೀರು ಬರಲಿದೆ.

ಹೊಸಪೇಟೆ: ತುಂಗಭದ್ರಾ ಜಲಾಶಯದಿಂದ ಶುಕ್ರವಾರ 1 ಲಕ್ಷ 7 ಸಾವಿರ ಕ್ಯುಸೆಕ್‌ ನೀರು ನದಿಗೆ ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ಹಂಪಿಯ ಪುರಂದರದಾಸರ ಮಂಟಪ ಸಂಪೂರ್ಣ ಮುಳುಗಡೆಯಾಗಿದ್ದು, ಧಾರ್ಮಿಕ ವಿಧಿವಿಧಾನ ನೆರವೇರಿಸುವ ಮಂಟಪ ಕೂಡ ಮುಳುಗಡೆಯಾಗಿದೆ. ಕಂಪಭೂಪ ಮಾರ್ಗ ಬಂದ್ ಆಗಿದ್ದು, ಕೆಲ ಪ್ರಮುಖ ಸ್ಮಾರಕಗಳು ಜಲಾವೃತವಾಗಿವೆ.

ಜಲಾಶಯದ 32 ಗೇಟ್‌ಗಳಿಂದ 1,07,035 ಕ್ಯುಸೆಕ್‌ ನೀರು ನದಿಗೆ ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ಹಂಪಿಯ ಧಾರ್ಮಿಕ ವಿಧಿವಿಧಾನ ನೆರವೇರಿಸುವ ಮಂಟಪ, ಸ್ನಾನಘಟ್ಟ, ವಿಷ್ಣು ಮಂಟಪ, ತುಂಗಾರತಿ ಸ್ಥಳ, ಪುರಂದರದಾಸರ ಮಂಟಪ, ಕಾಲು ಸೇತುವೆ ಸಂಪೂರ್ಣ ಮುಳುಗಡೆಯಾಗಿವೆ.

ಇನ್ನು ಚಕ್ರತೀರ್ಥ ಬಳಿಯ ಕಂಪಭೂಪ ಮಾರ್ಗ ಸಂಪೂರ್ಣ ಬಂದ್ ಆಗಿದ್ದು, ಶ್ರೀಕೋದಂಡರಾಮಸ್ವಾಮಿ ದೇವಾಲಯ, ಯಂತ್ರೋದ್ಧಾರಕ ಆಂಜನೇಯ ದೇವಾಲಯಕ್ಕೆ ತೆರಳಲು ಮಾರ್ಗ ಇಲ್ಲದಾಗಿದೆ. ಈ ದೇವಾಲಯಗಳಿಗೆ ತೆರಳಲು ಅಚ್ಯುತರಾಯ ದೇವಾಲಯದ ಮಾರ್ಗ ಬಳಸಿ ಭಕ್ತರು ಬರುತ್ತಿದ್ದಾರೆ.

ಅಚ್ಯುತರಾಯ ಮಾರ್ಗ ಬಳಕೆ: ಹಂಪಿಯ ಕಂಪಭೂಪ ಮಾರ್ಗ ಬಂದ್‌ ಆಗಿರುವುದರಿಂದ ಚಕ್ರತೀರ್ಥ ಪ್ರದೇಶದಿಂದ ತೆರಳುತ್ತಿದ್ದ ಪ್ರವಾಸಿಗರು ಈಗ ಅಚ್ಯುತರಾಯ ದೇವಾಲಯದ ಮಾರ್ಗ ಬಳಸಿ, ಗುಡ್ಡ ಏರಿ ಪುರಂದರ ದಾಸರ ಮಂಟಪ, ಕಾಲು ಸೇತುವೆ ಹಾಗೂ ವಿಜಯ ವಿಠ್ಠಲ ದೇವಾಲಯ, ಕೋದಂಡರಾಮಸ್ವಾಮಿ ದೇವಾಲಯಗಳ ವೀಕ್ಷಣೆಗೆ ತೆರಳುತ್ತಿದ್ದಾರೆ. ಇನ್ನು ಕೋದಂಡರಾಮಸ್ವಾಮಿ ದೇವಾಲಯದ ಬಳಿಯ ಮಂಟಪಗಳು ಕೂಡ ಜಲಾವೃತವಾಗಿವೆ.

ಹಂಪಿಗೆ ಇನ್ನು ಭಾರೀ ಪ್ರಮಾಣದ ನೀರು ಬಿಟ್ಟರೆ, ಚಕ್ರತೀರ್ಥ ಪ್ರದೇಶದವರೆಗೆ ನೀರು ಬರಲಿದೆ. ಸಾಲು ಮಂಟಪದವರೆಗೂ ನೀರು ಬರುವ ಸಾಧ್ಯತೆ ಇದ್ದು, ಸಾಲುಮಂಟಪದಲ್ಲಿರುವ ಪೊಲೀಸ್‌ ಠಾಣೆ, ವಸ್ತುಸಂಗ್ರಹಾಲಯ ಕೂಡ ಜಲಾವೃತವಾಗುವ ಸಾಧ್ಯತೆ ಇದೆ.

ಹರಿಗೋಲು, ಬೋಟ್‌ ಸ್ಥಗಿತ: ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇವಾಲಯದ ಬಳಿಯ ತುಂಗಭದ್ರಾ ನದಿಯಿಂದ ವಿರೂಪಾಪುರ ಗಡ್ಡೆ ಭಾಗದ ಕಡೆಗೆ ತೆರಳಲು ಬೋಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ಈಗ ಜಲಾಶಯದಿಂದ 1ಲಕ್ಷ 7 ಸಾವಿರ ಕ್ಯುಸೆಕ್ ನೀರು ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ಬೋಟಿಂಗ್‌ ವ್ಯವಸ್ಥೆ ಕೂಡ ಸ್ಥಗಿತಗೊಳಿಸಲಾಗಿದೆ. ತಳವಾರಘಟ್ಟ ಸೇತುವೆಯಿಂದ ಆನೆಗೊಂದಿ, ಅಂಜನಾದ್ರಿ ಬೆಟ್ಟಕ್ಕೆ ಸಂರ್ಪ ಕಲ್ಪಿಸುತ್ತಿದ್ದ ಬೋಟಿಂಗ್‌ ಸೇವೆ ಸ್ಥಗಿತಗೊಂಡಿದೆ. ಹಂಪಿಯ ಚಕ್ರತೀರ್ಥದ ಬಳಿ ಹರಿಗೋಲು ಕೂಡ ಬಂದ್ ಮಾಡಲಾಗಿದೆ.

ಮಂಟಪಗಳು ಜಲಾವೃತ: ಹಂಪಿಯ ಕಂಪಭೂಪ ಮಾರ್ಗ ಬಂದ್ ಆಗಿದ್ದರೂ ಕೋದಂಡರಾಮಸ್ವಾಮಿ ದೇವಾಲಯದಲ್ಲಿ ಪೂಜಾ ಕಾರ್ಯ ಸ್ಥಗಿತಗೊಳಿಸಲಾಗಿಲ್ಲ. ಪುರೋಹಿತರು ಅಚ್ಯುತರಾಯ ದೇವಾಲಯ ಮಾರ್ಗ ಬಳಸಿ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಚಕ್ರತೀರ್ಥ ಪ್ರದೇಶದ ಋಷಿ ಮಂಟಪ, ಕೋಟಿಲಿಂಗ, ವಿಷ್ಣು ಮಂಟಪ, ಲಕ್ಷ್ಮೀ ನರಸಿಂಹ ಮಂಟಪ ಸೇರಿದಂತೆ ವಿವಿಧ ಮಂಟಪಗಳು ಜಲಾವೃತವಾಗಿವೆ.

ತುಂಗಭದ್ರಾ ಜಲಾಶಯದ ಮಟ್ಟ 1633 ಅಡಿ ಇದ್ದು, 1631.98 ಅಡಿಯವರೆಗೆ ನೀರು ಬಂದಿದೆ. 101.695 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 105.788 ಟಿಎಂಸಿ ಇದ್ದು, ಜಲಾಶಯದ ಒಳ ಹರಿವು ಕೂಡ ಭಾರೀ ಪ್ರಮಾಣದಲ್ಲಿ ಇರುವ ಹಿನ್ನೆಲೆಯಲ್ಲಿ ನದಿಗೆ ಭಾರೀ ಪ್ರಮಾಣದಲ್ಲಿ ಹರಿಸಲಾಗುತ್ತಿದೆ. ಈಗಾಗಲೇ ರಾಜ್ಯದ ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲೆಗಳ ಜಿಲ್ಲಾಡಳಿತಗಳಿಗೆ ತುಂಗಭದ್ರಾ ಮಂಡಳಿ ಎಚ್ಚರಿಕೆ ಸಂದೇಶ ರವಾನಿಸಿದೆ. ಇನ್ನೂ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೂ ಎಚ್ಚರಿಕೆ ಸಂದೇಶ ರವಾನಿಸಿದೆ.ಜಲಾಶಯದಿಂದ ಬಿಟ್ಟಿರುವ ನೀರು ಮಂತ್ರಾಲಯ ಮಾರ್ಗವಾಗಿ ಶ್ರೀಶೈಲಂ ನದಿಯ ಮೂಲಕ ಸಮುದ್ರ ಸೇರುತ್ತದೆ. ಜಲಾಶಯದ ಮೇಲ್ಭಾಗದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದ ನೀರು ಹೊರಬಿಡಲಾಗುವುದು ಎಂದು ಈಗಾಗಲೇ ನದಿಪಾತ್ರದ ಜನರಿಗೂ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?