ಕೌಲತ್ತು ಜಾಕ್‌ವೆಲ್‌ಗೆ 2 ಸೆಟ್‌ ಮೋಟಾರ್‌, ಪಂಪ್‌ಗಳ ಖರೀದಿ

KannadaprabhaNewsNetwork |  
Published : Jun 11, 2025, 11:55 AM IST
10 ಎಚ್ ಅರ್ ಆರ್ ೦೨ಹರಿಹರ ಸಮೀಪದ  ಕೌಲೆತ್ತಿನ ಜಾಕ್ ವೆಲ್ ಗೆ ನಗರಸಭಾ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಹಿರಿಯ ಸದಸ್ಯ ವಾಮನಮೂರ್ತಿ ಹಾಗೂ ಇತರರು ಭೇಟಿ ನೀಡಿ ಪರಿಶೀಲಿಸಿದರು. | Kannada Prabha

ಸಾರಾಂಶ

ಪದೇಪದೇ ತಲೆದೋರುತ್ತಿರುವ ಹರಿಹರ ನಗರದ ಕುಡಿಯುವ ನೀರಿನ ಸಮಸ್ಯೆಗೆ ಶೀಘ್ರದಲ್ಲಿ ಪರಿಹಾರ ದೊರೆಯಲಿದೆ ಎಂದು ನಗರಸಭಾ ಅಧ್ಯಕ್ಷ ಕವಿತಾ ಮಾರುತಿ ಬೇಡರ್ ಹೇಳಿದ್ದಾರೆ.

- ಹರಿಹರ ನಗರ ಕುಡಿಯುವ ನೀರು ಸಮಸ್ಯೆಗೆ ಶೀಘ್ರ ಮುಕ್ತಿ: ನಗರಸಭೆ ಅಧ್ಯಕ್ಷೆ

- - -

ಕನ್ನಡಪ್ರಭ ವಾರ್ತೆ ಹರಿಹರ

ಪದೇಪದೇ ತಲೆದೋರುತ್ತಿರುವ ಹರಿಹರ ನಗರದ ಕುಡಿಯುವ ನೀರಿನ ಸಮಸ್ಯೆಗೆ ಶೀಘ್ರದಲ್ಲಿ ಪರಿಹಾರ ದೊರೆಯಲಿದೆ ಎಂದು ನಗರಸಭಾ ಅಧ್ಯಕ್ಷ ಕವಿತಾ ಮಾರುತಿ ಬೇಡರ್ ಹೇಳಿದರು.

ಸಮೀಪದ ಕೌಲತ್ತು ಬಳಿಯ ಜಾಕ್‌ವೆಲ್‌ಗೆ ನಗರಸಭೆ ವತಿಯಿಂದ ನೂತನವಾಗಿ ಖರೀದಿಸಲಾಗಿರುವ ೧೨೦ ಅಶ್ವಶಕ್ತಿಯ (ಎಚ್.ಪಿ.) ಮೋಟಾರ್ ಮತ್ತು ಪಂಪುಗಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಹರಿಹರ ನಗರಕ್ಕೆ ನೀರು ಸರಬರಾಜು ಮಾಡುವ ಜಾಗದಲ್ಲಿ ಹಳೆಯ ಮೋಟರ್ ಮತ್ತು ಪಂಪ್‌ಗಳಿವೆ. ಅವುಗಳು ಪದೇಪದೇ ತೊಂದರೆ ಕೊಡುತ್ತಿದ್ದ ಕಾರಣ, ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯವಾಗುತ್ತಿತ್ತು ಎಂದರು.

ಈ ಸಮಸ್ಯೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಹಲವು ವರ್ಷಗಳಿಂದ ನಗರಸಭೆ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಹಿರಿಯ ಸದಸ್ಯ ಎ.ವಾಮನ ಮೂರ್ತಿ ಅವರು ಪ್ರತಿ ಸಾಮಾನ್ಯ ಸಭೆಗಳಲ್ಲಿ ಈ ವಿಚಾರವಾಗಿ ಚರ್ಚೆ ನಡೆಸುತ್ತಿದ್ದರು. ಅದರ ಪರಿಣಾಮ ಈಗ ನಗರಕ್ಕೆ ೧೨೦ ಅಶ್ವಶಕ್ತಿಯ 2 ಸೆಟ್‌ ಮೋಟಾರು ಮತ್ತು ಪಂಪುಗಳು ಬಂದಿವೆ. ಶೀಘ್ರದಲ್ಲಿಯೇ ಕೆಲಸ ಆರಂಭಿಸಲಾಗುವುದು ಎಂದರು.

ಹೊಸದಾಗಿ ತರಿಸಲಾದ ಮೋಟಾರ್‌ ಮತ್ತು ಪಂಪ್‌ಗಳಿಗೆ ೨೦೨೩-೨೪ನೇ ₹೫೦ ಲಕ್ಷ ಮತ್ತು ೨೦೨೪-೨೫ನೇ ಸಾಲಿನ ₹೩೦ ಲಕ್ಷ ಸೇರಿ ಒಟ್ಟು ₹೮೦ ಲಕ್ಷ ವೆಚ್ಚದಲ್ಲಿ ೧೫ನೇ ಹಣಕಾಸು ಯೋಜನೆ ಕುಡಿಯುವ ನೀರಿನ ಮೀಸಲಿಟ್ಟ ಅನುದಾನದಲ್ಲಿ ಖರೀದಿಸಲಾಗಿದೆ. ಸುಮಾರು ೩೦-೪೦ ವರ್ಷಗಳಿಂದ ಇರುವ ಹಳೆಯ ಮೋಟಾರ್‌ಗಳು ಕೇವಲ ೪ ತಾಸು ಸತತವಾಗಿ ಕೆಲಸ ನಿರ್ವಹಿಸಿ, ೬ ತಾಸುಗಳ ವಿಶ್ರಾಂತಿ ನೀಡಬೇಕಾಗುತ್ತಿತ್ತು. ಈ ಹೊಸ ಮೋಟಾರ್‌ಗಳು ಸತತ ೧೨ ತಾಸು ಕಾರ್ಯನಿರ್ವಹಿಸಬಲ್ಲವು ಎಂದು ಹೇಳಿದರು.

ನಗರಸಭೆ ಸದಸ್ಯ ಎ.ವಾಮನ ಮೂರ್ತಿ ಮಾತನಾಡಿ, ಹೊಸದಾಗಿ ಬಂದಿರುವ ಮೋಟಾರ್‌ಗಳನ್ನು ಒಂದೇ ಬಾರಿಗೆ ಜೊತೆಯಲ್ಲಿಯೇ ಅಳವಡಿಸುವುದು ಬೇಡ. ಮೊದಲಿಗೆ 1 ಮೋಟಾರ್‌ ಅಳವಡಿಸಿ ಕೆಲ ಸಮಯ ನೀರಿನ ಸರಬರಾಜನ್ನು ಪರೀಕ್ಷೆ ಮಾಡಬೇಕು. ಅನಂತರ ಎರಡನೆಯದನ್ನು ಅಳವಡಿಸಬೇಕು. ಮುಂದಿನ ದಿನಗಳಲ್ಲಿ ಹೊಸ ಮೋಟಾರ್‌ಗಳಿಂದ ನಿರಂತರವಾಗಿ ನೀರು ಸರಬರಾಜು ಮಾಡಿದರೆ ನಗರದ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭ ಜೆಡಿಎಸ್ ಮುಖಂಡ ಮಾರುತಿ ಬೇಡರ್, ಜಲಸಿರಿ ಯೋಜನೆಯ ಸಹಾಯಕ ಎಂಜಿನಿಯರ್ ದೇವರಾಜ್, ಆರ್.ಇ. ಅವಿನಾಶ್ ಮುಂತಾದವರು ಉಪಸ್ಥಿತರಿದ್ದರು.

ಹರಿಹರ ನಗರಸಭೆ ಅಧ್ಯಕ್ಷರು ಮಂಗಳವಾರ ಕೌಲತ್ತು ಬಳಿಯ ಜಾಕ್ ವೆಲ್‌ಗೆ ಭೇಟಿ ನೀಡುವ ಪೂರ್ವದಲ್ಲಿ ಪೌರಾಯುಕ್ತ ಸುಬ್ರಹ್ಮಣ್ಯ ಶ್ರೇಷ್ಠಿ ಮತ್ತು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮುಂತಾದವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಆದಷ್ಟು ಬೇಗನೆ ಯಂತ್ರಗಳ ಜೋಡಣೆ ಕೆಲಸವನ್ನು ಮುಗಿಸಿ, ನೀರಿನ ಸರಬರಾಜಿಗೆ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಿದರು.

- - -

(ಕೋಟ್‌) ಹೊಸ ಮೋಟಾರ್ ಅಳವಡಿಕೆ ಸಂದರ್ಭದಲ್ಲಿ ಕೆಲ ಸಮಯ ಹರಿಹರ ನಗರದಲ್ಲಿ ಜಲಸಿರಿ ನೀರಿನ ಸರಬರಾಜಿನಲ್ಲಿ ವ್ಯತ್ಯಾಸವಾಗ ಬಹುದು. ಆದ್ದರಿಂದ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕು.

- ಕವಿತಾ ಬೇಡರ್, ಅಧ್ಯಕ್ಷೆ, ನಗರಸಭೆ ಹರಿಹರ.

- - -

-10ಎಚ್ಅರ್ ಆರ್೦೨:

ಹರಿಹರ ಸಮೀಪದ ಕೌಲೆತ್ತಿನ ಜಾಕ್ ವೆಲ್‌ಗೆ ನಗರಸಭಾ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಹಿರಿಯ ಸದಸ್ಯ ವಾಮನಮೂರ್ತಿ ಇತರರು ಭೇಟಿ ನೀಡಿ ಹೊಸ ಯಂತ್ರಗಳು, ವ್ಯವಸ್ಥೆ ಪರಿಶೀಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''