ಮಾರ್ಚ್ ಅಂತ್ಯಕ್ಕೆ 5,800 ಬಸ್ ಖರೀದಿ: ಸಚಿವ

KannadaprabhaNewsNetwork |  
Published : Jan 26, 2024, 02:00 AM IST
ಕಲಬುರಗಿಯ ಸೂಪರ್‌ ಮಾರ್ಕೆಟ್‌ನಲ್ಲಿ ತಲೆ ಎತ್ತಿರುವ ಕೋಟೆ ಮಾದರಿಯ ಸಿಟಿ ಬಸ್‌ ನಿಲ್ದಾಣವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಮಾರ್ಚ್ ಅಂತ್ಯಕ್ಕೆ 5,800 ಬಸ್ ಖರೀದಿ: ಸಚಿವ

ಕಲಬುರಗಿ: ಶಕ್ತಿ ಯೊಜನೆ ಪರಿಣಾಮ ರಾಜ್ಯದಲ್ಲಿ ಬಸ್ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಅಗತ್ಯ ಸಾರಿಗೆ ಬಸ್ ಒದಗಿಸುವ ದೃಷ್ಟಿಯಿಂದ ಬರುವ ಮಾರ್ಚ್ ಅಂತ್ಯಕ್ಕೆ ರಾಜ್ಯದ ನಾಲ್ಕು ನಿಗಮಗಳಿಗೆ 5,800 ಬಸ್ ಖರೀದಿಸಲಾಗುತ್ತಿದೆ ಎಂದು ರಾಜ್ಯದ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಗುರುವಾರ ಕಲಬುರಗಿ ನಗರದಲ್ಲಿ ನಿರ್ಮಿಸಲಾದ ಕೋಟೆ ಮಾದರಿ ನಗರ ಸಾರಿಗೆ ಬಸ್ ನಿಲ್ದಾಣ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಕೆಕೆಆರ್‌ಟಿಸಿ ಸಂಸ್ಥೆಗೆ ಈಗಾಗಲೆ 630 ಬಸ್ ನೀಡಲಾಗಿದೆ. ಮುಂದಿನ ದಿನದಲ್ಲಿ ಮತ್ತೆ 485 ಬಸ್ ನೀಡಲಾಗುವುದು. ರಾಜ್ಯದಲ್ಲಿ 2016ರ ನಂತರ 13,888 ಜನ ನಿವೃತ್ತಿಯಾಗಿದ್ದು, ಹಿಂದಿನ ಸರ್ಕಾರದಲ್ಲಿ ನೇಮಕಾತಿ ನಡೆದಿರಲಿಲ್ಲ. ನಮ್ಮ ಸರ್ಕಾರ ಬಂದ ಕೂಡಲೆ ನೇಮಕಾತಿಗೆ ಚಾಲನೆ ನೀಡಿದ್ದೇವೆ. 9 ಸಾವಿರ ಸಿಬ್ಬಂದಿ ನೇಮಕಕ್ಕೆ ಸಿ.ಎಂ. ಒಪ್ಪಿಗೆ ನೀಡಿದ್ದಾರೆ. ಇದರಲ್ಲಿ ಕೆಕೆಆರ್‌ಟಿಸಿಯ 1,680 ನೇಮಕಾತಿ ಸೇರಿವೆ ಎಂದರು.

ಕೆಎಸ್‌ಆರ್‌ಟಿಸಿ ಮತ್ತು ಕೆಕೆಆರ್‌ಟಿಸಿ ಸಂಸ್ಥೆಯಲ್ಲಿನ ಸಾರಿಗೆ ನೌಕರರು ಅಪಘಾತದಲ್ಲಿ ಮರಣ ಹೊಂದಿದಲ್ಲಿ ₹1 ಕೋಟಿ ಜೀವ ವಿಮೆ ಒದಗಿಸುವ ಯೋಜನೆ ಜಾರಿಗೊಳಿಸಿದ್ದು, ಇದು ದೇಶದಲ್ಲಿಯೇ ಮಾದರಿಯಾಗಿದೆ. ಸಮಾರಂಭಕ್ಕು ಮುನ್ನ ಸಚಿವ ರಾಮಲಿಂಗಾರೆಡ್ಡಿ ಅವರು ಕಲ್ಯಾಣ ರಥ (ಎಸಿ ಸ್ಲೀಪರ್) ಮತ್ತು ಅಮೋಘವರ್ಷ (ನಾನ್ ಎಸಿ ಸ್ಲೀಪರ್) ಬಸ್ಸುಗಳ ಲೋಕಾರ್ಪಣೆ ಮಾಡಿದರು.

ಮುಖ್ಯಮಂತ್ರಿ ಚಿನ್ನದ ಪದಕ ವಿತರಣೆ:

ಕಾರ್ಯಕ್ರಮದಲ್ಲಿ ಅಪಘಾತ ರಹಿತ ಸೇವೆ ಸಲ್ಲಿಸಿದ 6 ಜನರಿಗೆ ಮುಖ್ಯಮಂತ್ರಿ ಚಿನ್ನದ ಪದಕ ಮತ್ತು ಕಲಬುರಗಿ ವಿಭಾಗ-1 ಹಾಗೂ 2ರ 121 ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಭಾಗವಾಗಿ ಸಾಂಕೇತಿಕವಾಗಿ ಇಬ್ಬರಿಗೆ ಬೆಳ್ಳಿ ಪದಕ ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೂಲಿ ಕಾರ್ಮಿಕಳ ಮಗಳಿಗೆ 512 ಅಂಕ!
ಎಸಿ ಕೋರ್ಟಲ್ಲಿ ಕೇಸ್‌ ವಿಲೇವಾರಿ ಬಾಕಿ : ಕೃಷ್ಣ ಕಿಡಿ