ಕನ್ನಡಪ್ರಭ ವಾ ರ್ತೆ ತುಮಕೂರು
ತುಮಕೂರು ಜಿಲ್ಲೆಯಲ್ಲಿ ಪ್ರಸ್ತುತ 10 ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮೇವಿನ ಕೊರತೆಯನ್ನು ನೀಗಿಸಲು ಹಾಗೂ ಬೇಸಿಗೆ ದಿನಗಳಲ್ಲಿ ಜಾನುವಾರುಗಳಿಗೆ ಹಸಿರು ಮೇವನ್ನು ಒದಗಿಸಲು ನೀರಾವರಿ ಸೌಲಭ್ಯವನ್ನು ಹೊಂದಿರುವ ರೈತರಿಗೆ ಉಚಿತ ಮೇವಿನ ಬೀಜದ ಮಿನಿ ಕಿಟ್‌ಗಳನ್ನು ವಿತರಿಸಿ, ರೈತರು ಬೆಳೆದ ಹಸಿರು ಮೇವನ್ನು ಪ್ರತಿ ಟನ್‌ಗೆ 3000 ರು.ನಂತೆ ಎಸ್.ಡಿ.ಆರ್.ಎಫ್. ನಿಯಮಗಳನ್ವಯ ರೈತರಿಂದ ಖರೀದಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕರೆಯಲಾಗಿದ್ದ ತುಮಕೂರು ಜಿಲ್ಲೆಯ ಮೇವಿನ ಪರಿಸ್ಥಿತಿ ಕುರಿತಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೀಗೆ ಖರೀದಿ ಮಾಡಿದ ಮೇವನ್ನು ತೀವ್ರ ಅವಶ್ಯಕವಿರುವ ತಾಲೂಕುಗಳಿಗೆ ನೀಡಲಾಗುವುದು. ಆಸಕ್ತ ರೈತರು ಕಂದಾಯ ಇಲಾಖೆ, ಪಶುಪಾಲನಾ, ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ನೋಂದಾಯಿಸಿಕೊಂಡು ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡು ಈ ಯೋಜನೆಯ ಸದುಪಯೋಗಪಡಿಸಿಕೊಳ್ಳುವಂತೆ ಹಾಗೂ ಈ ಯೋಜನೆಯ ಕುರಿತಂತೆ ರೈತರಿಗೆ ಅಗತ್ಯ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸಾಕಷ್ಟು ಪ್ರಚಾರ ನೀಡುವಂತೆ ಮತ್ತು ರೈತರೊಂದಿಗೆ ಸಂಪರ್ಕ ಮಾಡುವಂತೆ ಸೂಚಿಸಿದರು.
ಮೊದಲನೇ ಹಂತದಲ್ಲಿ ಚಿ.ನಾ.ಹಳ್ಳಿ, ತಿಪಟೂರು, ಗುಬ್ಬಿ, ತುರುವೇಕೆರೆ, ಕುಣಿಗಲ್ ಮತ್ತು ತುಮಕೂರು ತಾಲೂಕುಗಳಿಗೆ ತಲಾ ೨೦೦೦ ಮಿನಿ ಕಿಟ್‌ಗಳಂತೆ ರೈತರಿಗೆ ಉಚಿತವಾಗಿ ವಿತರಿಸಿ ಮೇವು ಬೆಳೆಯಲು ಪ್ರೋತ್ಸಾಹಿಸಲಾಗುವುದು ಎಂದು ತಿಳಿಸಿದರು.ರೈತರು ಸ್ವಇಚ್ಛೆಯಿಂದಲೂ ಸಹ ಮೇವು ಬೆಳೆಯಬಹುದಾಗಿದ್ದು, ಈ ರೀತಿ ಬೆಳೆದ ಹಸಿರು ಮೇವನ್ನೂ ಸಹ ಸರ್ಕಾರದ ವತಿಯಿಂದ ಖರೀದಿಸಲಾಗುವುದು ಎಂದು ತಿಳಿಸಿದ ಅವರು, ಬೇಡಿಕೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಮಿನಿ ಕಿಟ್‌ಗಳನ್ನು ವಿತರಿಸಲಾಗುವುದು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಪಶುಪಾಲನಾ, ಕೃಷಿ, ತೋಟಗಾರಿಕೆ, ಜಿಲ್ಲಾ ಕೈಗಾರಿಕಾ ನಿಗಮದ ಅಧಿಕಾರಿಗಳು, ಎಲ್ಲಾ ತಾಲೂಕುಗಳ ತಹಸೀಲ್ದಾರರು, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಪಶುವೈದ್ಯಾಧಿಕಾರಿಗಳು ಹಾಜರಿದ್ದರು.