ಆದಿಚುಂಚನಗಿರಿ ಚಿನ್ನದ ಕ್ಷೇತ್ರವಾಗಲು ಪುರುಷೋತ್ತಮನಂದನಾಥ ಶ್ರೀ ಪಾತ್ರ ಹಿರಿದು: ಸಿ.ಎಸ್.ಪುಟ್ಟರಾಜು

KannadaprabhaNewsNetwork |  
Published : Mar 25, 2025, 12:46 AM IST
24ಕೆಎಂಎನ್ ಡಿ13 | Kannada Prabha

ಸಾರಾಂಶ

ಆದಿಚುಂಚನಗಿರಿ ಚಿನ್ನದ ಕ್ಷೇತ್ರವಾಗಿ ಅಭಿವೃದ್ಧಿ ಹೊಂದುವಲ್ಲಿ ಶ್ರೀಪುರುಷೋತ್ತಮಾನಂದನಾಥ ಸ್ವಾಮೀಜಿಗಳ ಕಠಿಣ ನಿರ್ಧಾರಗಳು, ಪರಿಶ್ರಮ ಸಾಕಷ್ಟಿದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಬಣ್ಣಿಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಆದಿಚುಂಚನಗಿರಿ ಚಿನ್ನದ ಕ್ಷೇತ್ರವಾಗಿ ಅಭಿವೃದ್ಧಿ ಹೊಂದುವಲ್ಲಿ ಶ್ರೀಪುರುಷೋತ್ತಮಾನಂದನಾಥ ಸ್ವಾಮೀಜಿಗಳ ಕಠಿಣ ನಿರ್ಧಾರಗಳು, ಪರಿಶ್ರಮ ಸಾಕಷ್ಟಿದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಬಣ್ಣಿಸಿದರು.

ತಾಲೂಕಿನ ರಾಗಿಮುದ್ದನಹಳ್ಳಿಯಲ್ಲಿ ಶ್ರೀಪುರುಷೋತ್ತಮಾನಂದನಾಥ ಸ್ವಾಮೀಜಿ ಅವರಿಗೆ ಗ್ರಾಮಸ್ಥರು ಹಮ್ಮಿಕೊಂಡಿದ್ದ ತವರಿನ ಸನ್ಮಾನ ಕಾರ್ಯಕ್ರಮದಲ್ಲಿ ಶ್ರೀಗಳನ್ನು ಅಭಿನಂದಿಸಿ ಮಾತನಾಡಿ, ಚುಂಚನಗಿರಿ ಕ್ಷೇತ್ರ ವಿದ್ಯೆ, ಆರೋಗ್ಯ, ಅನ್ನದಾನ ಮಾಡಿಕೊಂಡು ಬರುತ್ತಿದೆ. ಕ್ಷೇತ್ರದ 480 ಶಿಕ್ಷಣ ಸಂಸ್ಥೆಗಳಿವೆ. 1.50 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದರು.

ಶ್ರೀ ಮಠ ಇಷ್ಟು ಎತ್ತರಕ್ಕೆ ಬೆಳೆಯಲು ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿಗಳ ಪರಿಶ್ರಮ ಹೆಚ್ಚಾಗಿದೆ. ಹಿರಿಯ ಶ್ರೀಗಳು ಪುರುಷೋತ್ತಮಾನಂದನಾಥ ಸ್ವಾಮೀಜಿಗಳನ್ನು ಬಹಳ ಎತ್ತರ ಸ್ಥಾನದಿಂದ ಪ್ರೀತಿಸಿ ಗೌರವಿಸುತ್ತಿದ್ದರು. ಹೊರ ದೇಶಗಳಲ್ಲಿ ಶಿಕ್ಷಣ ಸಂಸ್ಥೆ, ಮಠಗಳ ನಿರ್ಮಾಣದಲ್ಲಿ ಶ್ರೀಗಳ ಪಾತ್ರ, ಸಲಹೆ, ಸಹಕಾರ ಹೆಚ್ಚಾಗಿದೆ ಎಂದು ತಿಳಿಸಿದರು.

ನಾನು ಜನಪ್ರತಿನಿಧಿಯಾಗಿ ಕೆಲಸ ಮಾಡುವಾಗ ಎಲ್ಲಾ ಅಭಿವೃದ್ಧಿ ಕೆಲಸ- ಕಾರ್ಯಗಳಲ್ಲೂ ಶ್ರೀಗಳ ಸಲಹೆ, ಸಹಕಾರ ಹೆಚ್ಚಾಗಿತ್ತು. ಶ್ರೀಗಳು ಕೈಯಲ್ಲಿ ಚಾವಟಿ ಹಿಡಿದು ಅಭಿವೃದ್ಧಿ ಕೆಲಸಗಳನ್ನು ಮಾಡಿಸುತ್ತಿದ್ದರು ಎಂದು ಸ್ಮರಿಸಿದರು.

ತಾಯಿ ಇಲ್ಲದ ತಬ್ಬಲಿ ಮಕ್ಕಳು ಜೀವನದಲ್ಲಿ ಬಹಳ ಎತ್ತರದ ಸ್ಥಾನಕ್ಕೆ ತಲುಪುತ್ತಾರೆ ಎನ್ನುವುದಕ್ಕೆ ನಾನು ಹಾಗೂ ಪುರುಷೋತ್ತಮಾನಂದನಾಥ ಸ್ವಾಮೀಜಿಗಳೇ ಉದಾಹರಣೆ. ಶ್ರೀಗಳು ಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿಗಳಾಗಿ ಮಠದ ಅಭಿವೃದ್ಧಿಯಲ್ಲಿ ಹಿರಿಯ ಶ್ರೀಗಳ ಜತೆಯಾಗಿ ಮಹತ್ತರವಾದ ಜವಾಬ್ದಾರಿ ನಿರ್ವಹಿಸಿದ್ದಾರೆ ಎಂದು ಬಣ್ಣಿಸಿದರು.

ಶ್ರೀಪುರುಷೋತ್ತಮಾನಂದನಾಥ ಸ್ವಾಮೀಜಿ ಮಾತನಾಡಿ, ರಾಗಿಮುದ್ದನಹಳ್ಳಿಯಲ್ಲಿ ಒಗ್ಗಟ್ಟಿನ ಕೊರತೆಯಿಂದ ಗ್ರಾಮ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗಿಲ್ಲ. ಚುನಾವಣೆಗಳು ಬಂದಾಗ ರಾಜಕೀಯ ಮಾಡಿ, ಅಭಿವೃದ್ಧಿ ವಿಚಾರ ಅಂತ ಬಂದಾಗ ಎಲ್ಲರೂ ಒಗ್ಗಟ್ಟಿನಿಂದ ಕೆಲಸ- ಕಾರ್ಯಗಳನ್ನು ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಆರು ಸಾವಿರ ಜನಸಂಖ್ಯೆ ಹೊಂದಿರುವ ರಾಗಿಮುದ್ದನಹಳ್ಳಿ ಗ್ರಾಮಕ್ಕೆ ಒಂದು ಆಸ್ಪತ್ರೆ ವ್ಯವಸ್ಥೆಯೂ ಇಲ್ಲ. ನಾನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಕಾರ್ಯಕ್ರಮವೊಂದರಲ್ಲಿ ಗ್ರಾಮಕ್ಕೆ ಆಸ್ಪತ್ರೆ ಮಂಜೂರು ಮಾಡಿಸಿಕೊಡುವಂತೆ ಮನವಿ ಮಾಡಿದೆ. ಆದರೆ, ಶಾಸಕರು ಅವರ ಪತ್ನಿಯ ಆರೋಗ್ಯ ಸಮಸ್ಯೆಯಿಂದ ಪದೇಪದೇ ಅಮೇರಿಕಕ್ಕೆ ಹೋಗಿ ಬರುತ್ತಿರುವುದರಿಂದ ಕ್ಷೇತ್ರದಲ್ಲಿ ಅವರಿಂದ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.

ಕ್ಷೇತ್ರದಲ್ಲಿ ಯಾವ ಪಕ್ಷದವರು ಯಾರೇ ಶಾಸಕರಾದರೂ ಅವರು ನಮ್ಮ ಪ್ರತಿನಿಧಿಗಳು. ನಾವು ರಾಜಕೀಯ ಬದಿಗೊತ್ತಿ ಗ್ರಾಮಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದರು.

ಮನುಷ್ಯರಾದ ನಾವು ಬುದ್ದಿಜೀವಿಗಳು, ನಾವು ಪ್ರತಿಕೆಲಸ ಮಾಡುವಾಗ ನಮ್ಮ ಬುದ್ದಿ, ಮನಸ್ಸು ಎರಡನ್ನು ಹತೋಟಿಯಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು. ಮಕ್ಕಳಿಗೆ ಚಿಕ್ಕವಯಸ್ಸಿನಿಂದಲೇ ಸಂಸ್ಕಾರ ಬೆಳೆಸುವ ಕೆಲಸ ಮಾಡಬೇಕು. ಚುಂಚನಗಿರಿ ಮಠವು ಅನೇಕ ಸೇವಾಕಾರ್ಯಗಳನ್ನು ಮಾಡುತ್ತಿದೆ, ಅವುಗಳನ್ನು ಸದ್ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ಕೊಮ್ಮೇರಹಳ್ಳಿ ಶಾಖಾಮಠದ ಪೀಠಾಧ್ಯಕ್ಷ ಶ್ರೀಪುರುಷೋತ್ತಮಾನಂದನಾಥ ಸ್ವಾಮೀಜಿಗಳನ್ನು ಗ್ರಾಮಸ್ಥರು ಬೆಳ್ಳಿಕಿರೀಟ ಧಾರಣೆ ಮಾಡಿ ತವರಿನ ಸನ್ಮಾನ ಮಾಡಿದರು. ಸಮಾರಂಭದಲ್ಲಿ ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ನಿವೃತ್ತ ಪ್ರಾಧ್ಯಾಪಕ ಎಂ.ಎನ್.ಶಿವಣ್ಣ, ವಿ.ಎಸ್.ಎಸ್.ಎನ್.ಬಿ ಅಧ್ಯಕ್ಷ ಸಿ.ಎಸ್.ಗೋಪಾಲಗೌಡ, ಉಪಾಧ್ಯಕ್ಷ ಸುರೇಂದ್ರ, ಚಿನಕುರಳಿ ಸ್ವಾಮೀಗೌಡ, ಗ್ರಾಪಂ ಅಧ್ಯಕ್ಷ ರಘು, ಗ್ರಾಪಂ ಉಪಾಧ್ಯಕ್ಷೆ ರಾಧ, ಮಾಜಿ ಅಧ್ಯಕ್ಷ ರಾಜಣ್ಣ, ಮಾಜಿ ಉಪಾಧ್ಯಕ್ಷ ವರದರಾಜು, ನಿವೃತ್ತ ಸರ್ವೇ ಅಧಿಕಾರಿ ನಾಗರಾಜು, ಮುಖಂಡ ಆರ್.ಎಂ.ಪುಟ್ಟರಾಜು, ಆರ್.ಸಿ.ಗುರುದೇವ್, ಎಂ.ಜೆ.ಜಗದೀಶ್, ಪಿಡಿಒ ರಾಜು, ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ