ಹೊಸದುರ್ಗ: ತಾಲೂಕಿನ ಬ್ರಹ್ಮವಿದ್ಯಾ ನಗರದ ಭಗೀರಥ ಗುರುಪೀಠದ ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ ಅವರ 25ನೇ ವರ್ಷದ ಪಟ್ಟಾಭಿಷೇಕ ರಜತ ಮಹೋತ್ಸವ ಹಾಗೂ ಉಪವೀರ ಜಗದ್ಗುರು ವಿದ್ಯಾಸಂಸ್ಥೆಯ 50ನೇ ವರ್ಷದ ಸುವರ್ಣ ಮಹೋತ್ಸವ ಮತ್ತು ಧಾರ್ಮಿಕ ಸಮಾರಂಭ ಫೆ.10 ಮತ್ತು 11ರಂದು ಎರಡು ದಿನಗಳ ಕಾಲ ಅದ್ಧೂರಿಯಾಗಿ ಆಚರಣೆ ಮಾಡಲು ಉಪ್ಪಾರ ಸಮಾಜದ ಮುಖಂಡರ ಸಭೆಯಲ್ಲಿ ತೀರ್ಮಾನಿಸಲಾಯಿತು.
ಶಿವಪುರಿ ಸ್ವಾಮೀಜಿ ನೇತೃತ್ವದಲ್ಲಿ 2000 ಫೆ.10ರಂದು ಪುರುಷೋತ್ತಮಾನಂದ ಸ್ವಾಮೀಜಿ ಅವರಿಗೆ ಭಗೀರಥ ಗುರುಪೀಠದ ಜವಾಬ್ದಾರಿವಹಿಸಿ ಪಟ್ಟಾಭಿಷೇಕ ಮಾಡಲಾಗಿತ್ತು. 2024 ಫೆ.10ಕ್ಕೆ 25 ವರ್ಷ ತುಂಬಲಿದೆ. ಈ ಸ್ಮರಣಿಯ ದಿನವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲು ಸಭೆಯ ನಿರ್ಧರಿಸಿತು.ಭಗೀರಥ ಧಾರ್ಮಿಕ ಟ್ರಸ್ಟ್ ಆಡಳಿತ ಟ್ರಸ್ಟಿ ಎಂ.ಟಿ.ಭೀಮಪ್ಪ ಮಾತನಾಡಿ, 25ನೇ ವರ್ಷದ ಪಟ್ಟಾಭಿಷೇಕದ ರಜತ ಮಹೋತ್ಸವ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬದ 25 ಮಕ್ಕಳನ್ನು ದತ್ತು ಪಡೆದು ಪದವಿ ಹಂತದವರೆಗೆ ಉಚಿತ ಶಿಕ್ಷಣ ನೀಡಲಾಗುವುದು. 25 ಜೋಡಿಗಳಿಗೆ ವಿವಾಹ ನೆರವೇರಿಸಲಾಗುವುದು ಎಂದರು.
ಶ್ರೀಮಠದ ನೇತೃತ್ವದಲ್ಲಿ ನಡೆಯುತ್ತಿರುವ ಉಪವೀರ ಜಗದ್ಗುರು ವಿದ್ಯಾಸಂಸ್ಥೆ ಪ್ರಾರಂಭವಾಗಿ 50 ಪೂರೈಸಿರುವ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಸಂಸ್ಥೆಯಲ್ಲಿ ಓದಿ ಉನ್ನತ ಹುದ್ದೆ ಪಡೆದಿರುವ 50 ಮಂದಿಗೆ ಸನ್ಮಾನಿಸಲಾಗುವುದು. ಜಿಲ್ಲೆಗೆ ಒಬ್ಬರಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 50 ಮಂದಿಗೆ ಗೌರವ ಸಮರ್ಪಣೆ ಮಾಡಲಾಗುವುದು ಎಂದರು.ಶನಿವಾರ ಬೆಳಗ್ಗೆ ಪುರುಷೋತ್ತಮಾನಂದ ಶ್ರೀಗಳ ನೇತೃತ್ವದಲ್ಲಿ ಪೂಜೆ, ಹೋಮ, ಹವನದಂತ ಧಾರ್ಮಿಕ ಕಾರ್ಯಗಳು ನೆರವೇರಲಿವೆ. ನಂತರ 11ರ ಭಾನುವಾರದಂದು ಬೃಹತ್ ವೇದಿಕೆ ಕಾರ್ಯಕ್ರಮ ಇರಲಿದೆ. ಅಂದು ಸಚಿವರು, ಶಾಸಕರು, ಮಠಾದೀಶರು ಭಾಗವಹಿಸಲಿದ್ದಾರೆ ಎಂದರು.
ಸಭೆಯಲ್ಲಿ ಮುಖಂಡರಾದ ಜಗನ್ನಾಥ ಸಾಗರ್, ನಾಗರಾಜು, ರಮೇಶ್, ಮೈಲಾರಪ್ಪ, ಯರ್ರಿಸ್ವಾಮಿ , ಲಕ್ಷ್ಮಣ್ , ಆರ್.ಮೂರ್ತಿ, ಮಹೇಶ್, ಮಧುರೆ ನಟರಾಜ್, ಆರ್.ಲಕ್ಷ್ಮಯ್ಯ, ನಿರಂಜನಮೂರ್ತಿ, ಶಿಕ್ಷಕ ಪ್ರಕಾಶ್ ಮತ್ತಿತರಿದ್ದರು.