)
- ಗುಟ್ಕಾ, ಡ್ರಗ್ಸ್, ಗಾಂಜಾ ಬ್ಯಾನ್ ಮಾಡಿರಿ: ಹರಿಹರ ಶಾಸಕ ಹರೀಶ್ । ವೈದ್ಯಕೀಯ ಪರಿಕರ ನಿರ್ಲಕ್ಷ್ಯ: ಶಾಸಕ ಬಸಂತಪ್ಪ ಕಿಡಿ
ಕನ್ನಡಪ್ರಭ ವಾರ್ತೆ ದಾವಣಗೆರೆ
ಸರ್ಕಾರಕ್ಕೆ ತೆರಿಗೆ ವಂಚಿಸಿ ಗುಟ್ಕಾ ಮಾರಾಟ ಮಾಡುವುದು ಹೆಚ್ಚುತ್ತಿದೆ. ಇದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಲಿ. ಗುಟ್ಕಾ, ಗಾಂಜಾ ಮಾರಾಟ ಬ್ಯಾನ್ ಮಾಡಿ ಎಂದು ಜಿಲ್ಲಾಧಿಕಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸೂಚನೆ ನೀಡಿದರು.ನಗರದ ಜಿ.ಪಂ. ಸಭಾಂಗಣದಲ್ಲಿ ಸೋಮವಾರ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಗುಟ್ಕಾ ವ್ಯವಹಾರ ಹೆಚ್ಚಾಗುತ್ತಿದೆ. ಗುಟ್ಕಾ ಯಾರು ತಯಾರಿಸುತ್ತಾರೆ, ಮಾರಾಟ ಮಾಡುತ್ತಾರೆ ಎಂಬದರ ಬಗ್ಗೆ ಗಮನಹರಿಸಿ. ಟ್ಯಾಕ್ಸ್ ವಂಚಿಸಿ ಬಹಳ ಗುಟ್ಕಾ ಮಾರಾಟ ವಿರುದ್ಧ ಜಿಲ್ಲಾಧಿಕಾರಿ ಅವರು ಕಠಿಣ ಕ್ರಮಗಳ ಕೈಗೊಳ್ಳಲಿ. ಕೇಂದ್ರ ಸರ್ಕಾರವೂ ಮೊನ್ನೆ ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆ ಹೇರಿದೆ. ಹಾಗಾಗಿ, ಮಾರುಕಟ್ಟೆಯಲ್ಲಿ ಎಲ್ಲೆಲ್ಲಿ ಗುಟ್ಕಾ ಮಾರುತ್ತಾರೆಂಬ ಬಗ್ಗೆ ಸರ್ವೇ ಮಾಡಿ ಎಂದರು.
ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಸಿಎಸ್ಆರ್ ಅನುದಾನದಲ್ಲಿ ಪವರ್ ಗ್ರಿಡ್‌ನವರು ಜಿಲ್ಲಾಸ್ಪತ್ರೆಗೆ ಕೋಟ್ಯಂತರ ರು. ಮೌಲ್ಯದ ಪರಿಕರಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅವುಗಳನ್ನು ಆಸ್ಪತ್ರೆಯ ವೈದ್ಯಾಧಿಕಾರಿಗಳು ಮೂಲೆಯಲ್ಲಿ ಧೂಳು ಹಿಡಿಯುವಂತೆ ಇಟ್ಟಿದ್ದಾರೆ. ಕೇವಲ ಫೋಟೋಗಾಗಿ ಪರಿಕರ ನೀಡಿದರೆ ಏನು ಉಪಯೋಗ? ಅವು ಜನರಿಗೆ ಉಪಯೋಗವಾದರೆ ಕೊಟ್ಟಿದ್ದಕ್ಕೂ ಸಾರ್ಥಕವಾಗುತ್ತದೆ. ಒಂದೂವರೆ ವರ್ಷದಿಂದ ಕುರ್ಚಿ ಸೇರಿದಂತೆ ಕೋಟ್ಯಂತರ ರು. ವೆಚ್ಚದ ಪರಿಕರಗಳು ಧೂಳು ಹಿಡಿದು ಹಾಳಾಗುವಂತಾಗಿವೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಷಣ್ಮುಖಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.
ಆಗ ಚನ್ನಗಿರಿ ಶಾಸಕ ಬಸವರಾಜ ವಿ. ಶಿವಗಂಗಾ ಮಾತನಾಡಿ, ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯೇ ಸತ್ತುಹೋಗಿದೆ. ಯಾವುದೇ ಅಧಿಕಾರಿಗಳೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಸರಿಯಾಗಿ ಸೇವೆ ಒದಗಿಸುತ್ತಿಲ್ಲ. ಕೆಲ ಪಿಎಚ್‌ಸಿಗಳಿಗೆ ಮೂಲ ಸೌಕರ್ಯಗಳೇ ಇಲ್ಲ ಎಂದು ಸಭೆಯ ಗಮನಕ್ಕೆ ತಂದರು.
ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ನಗರದಲ್ಲಿ ಬೀದಿನಾಯಿಗಳು ಹಾಗೂ ಹಂದಿಗಳ ಹಾವಳಿ ಹೆಚ್ಚಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರು ಬರುತ್ತಿವೆ. ಮೊದಲು ಇವುಗಳಿಗೆ ಕಡಿವಾಣ ಹಾಕುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆ ಅಭಿಯಂತರ ಮಾತನಾಡಿ, ಜಲ ಜೀವನ್ ಮಿಷನ್‌ನಡಿ ದಿನದ 24 ಗಂಟೆ ನೀರು ಪೂರೈಸುವ ಕೇಂದ್ರ ಸರ್ಕಾರದ ಯೋಜನೆಯನ್ನು ಜಿಲ್ಲೆಯ 46 ಗ್ರಾಮಗಳ ಜನರು ತಿರಸ್ಕರಿಸಿದ್ದಾರೆ. ಈಗಾಗಲೇ ಈ ವಿಚಾರವನ್ನು ನವದೆಹಲಿಯ ಐಎಂಎಗೆ ಸಲ್ಲಿಸಲಾಗಿದೆ. ಈ ಗ್ರಾಮಗಳನ್ನು ಜಲ ಜೀವನ್ ಮಿಷನ್ ಯೋಜನೆಯಿಂದ ಹೊರಗಿಡಲಾಗಿದೆ ಎಂದು ಸಚಿವರ ಗಮನಕ್ಕೆ ತಂದರು. ಆಗ ಸಚಿವ ಎಸ್‌ಎಸ್‌ಎಂ, ಮತ್ತೊಮ್ಮೆ ಹೊಸದಾಗಿ ಪಟ್ಟಿ ತಯಾರಿಸಿ, ಶಿಫಾರಸು ಮಾಡಿ, ಯೋಜನೆಗೆ ಅನುದಾನ ತರೋಣ ಎಂದರು.
- - -