ಸ್ಲಮ್ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಿ: ಡಾ.ಕುಮಾರ

KannadaprabhaNewsNetwork |  
Published : Sep 19, 2025, 01:00 AM IST
೧೮ಕೆಎಂಎನ್‌ಡಿ-೩ಮಂಡ್ಯದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಭಾಗವಹಿಸಿ ಮಾತನಾಡಿದರು. | Kannada Prabha

ಸಾರಾಂಶ

ಸ್ಲಂನಲ್ಲಿರುವ ಮಕ್ಕಳಿಗೆ ವಿಶೇಷ ಆಧಾರ್ ಶಿಬಿರವನ್ನು ಏರ್ಪಡಿಸಿ ಎಲ್ಲಾ ಮಕ್ಕಳಿಗೂ ಆಧಾರ್ ನೋಂದಣಿ ಮಾಡಿಸಿ. ಇಲ್ಲದಿದ್ದಲ್ಲಿ ಅವರಿಗೆ ಸರಿಯಾಗಿ ವಿದ್ಯಾರ್ಥಿ ವೇತನ ಹಾಗೂ ಇನ್ನಿತರೆ ಯಾವುದೇ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೊಳಚೆ ಪ್ರದೇಶಗಳಲ್ಲಿ ಯುವಕರು ಮದ್ಯ ಸೇವಿಸುವುದು ಹೆಚ್ಚಾಗಿ ಕಂಡುಬರುತ್ತಿದೆ. ಇಂತಹ ಕಡೆಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಮಂಡ್ಯ ತಾಲೂಕಿನ ಕಾಳಪ್ಪ ಬಡಾವಣೆಯ ಕೊಳಚೆ ಪ್ರದೇಶದ ಜನರಿಗೆ ನಿವೇಶನ ನೀಡಲು ನಗರದಲ್ಲಿ ಯಾವುದೇ ಖಾಲಿ ನಿವೇಶನ ಇಲ್ಲ. ಆದ್ದರಿಂದ ನಗರದ ಸುತ್ತಲಿನ ೧೦ ಕಿ.ಮೀ ವ್ಯಾಪ್ತಿಯಲ್ಲಿ ಸೂಕ್ತ ಸ್ಥಳ ಗುರುತಿಸುವಂತೆ ತಿಳಿಸಿದರು.

ನಿವೇಶನ ನೀಡುವ ಸ್ಥಳಗಳಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಕಾನೂನಿನ ಸಮಸ್ಯೆ ಉಂಟಾಗಬಾರದು. ಸುಮಾರು ೯ ಎಕರೆ ಜಾಗ ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ತಾಲೂಕಿನ ಮಹದೇವಪುರದ ಸ್ಲಮ್ ಜಾಗದಲ್ಲಿ ವಾಸವಾಗಿರುವ ೪೫ ಜನರಿಗೆ ನಿವೇಶನ ನೀಡಲು ಸರ್ಕಾರದಿಂದ ಅನುಮತಿ ದೊರೆತಿದೆ. ಆದರೆ ಕೆಲ ಫಲಾನುಭವಿಗಳ ದಾಖಲಾತಿ ಕೊರತೆಯಿಂದ ೩೪ ಜನರಿಗೆ ಹಕ್ಕು ಪತ್ರ ವಿತರಣೆ ಮಾಡಲಾಗಿದೆ. ಉಳಿದ ೧೧ ಜನ ಸೂಕ್ತ ದಾಖಲೆಗಳನ್ನು ನೀಡಿದರೆ ನಿವೇಶನ ಹಂಚಿಕೆ ಮಾಡಬಹುದು ಎಂದು ಹೇಳಿದರು.

ಮಿಮ್ಸ್‌ನಲ್ಲಿ ಈಗಾಗಲೇ ಸಖಿ ಸೆಂಟರ್ ತೆರೆಯಲಾಗಿದೆ. ಕಾರ್ಮಿಕರು ಹೆಚ್ಚಾಗಿ ಮಿಮ್ಸ್ ಆಸ್ಪತ್ರೆಗೆ ಬರುವ ಸಾಧ್ಯತೆ ಇರುತ್ತದೆ. ಸ್ಲಮ್‌ನಿಂದ ಬರುವ ಗರ್ಭಿಣಿ ಸ್ತ್ರೀಯರಿಗೆ ತುರ್ತು ಸಂದರ್ಭಗಳಲ್ಲಿ ಯಾವುದೇ ವಿಳಂಬ ಮಾಡದೆ ಚಿಕಿತ್ಸೆ ನೀಡುವಂತೆ ನಿರ್ದೇಶನ ನೀಡಿದರು.

ಕಾರ್ಮಿಕ ಇಲಾಖೆಯಿಂದ ನಕಲಿ ಕಾರ್ಮಿಕ ಗುರುತಿನ ಚೀಟಿ ಪಡೆದು ನಿಜವಾದ ಕಾರ್ಮಿಕರಿಗೆ ದೊರೆಯಬೇಕಾದ ಸರ್ಕಾರಿ ಸೌಲಭ್ಯಗಳನ್ನು ನಕಲಿ ಕಾರ್ಮಿಕ ಕಾರ್ಡ್‌ಅನ್ನು ಹೊಂದಿರುವವರು ಪಡೆಯುತ್ತಿದ್ದಾರೆ. ಸರ್ಕಾರಿ ಸೌಲಭ್ಯ ನೀಡಬೇಕಾದರೆ ಕಾರ್ಮಿಕರು ಕೆಲಸ ಮಾಡುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೌಲಭ್ಯ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸ್ಲಂನಲ್ಲಿರುವ ಮಕ್ಕಳಿಗೆ ವಿಶೇಷ ಆಧಾರ್ ಶಿಬಿರವನ್ನು ಏರ್ಪಡಿಸಿ ಎಲ್ಲಾ ಮಕ್ಕಳಿಗೂ ಆಧಾರ್ ನೋಂದಣಿ ಮಾಡಿಸಿ. ಇಲ್ಲದಿದ್ದಲ್ಲಿ ಅವರಿಗೆ ಸರಿಯಾಗಿ ವಿದ್ಯಾರ್ಥಿ ವೇತನ ಹಾಗೂ ಇನ್ನಿತರೆ ಯಾವುದೇ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಸಭೆಯಲ್ಲಿ ಮುಡಾ ಆಯುಕ್ತ ಕೃಷ್ಣಕುಮಾರ್, ನಗರಾಭಿವೃದ್ಧಿ ಕೋಶಾಧಿಕಾರಿ ಟಿ.ಎನ್.ನರಸಿಂಹಮೂರ್ತಿ, ತಹಸೀಲ್ದಾರ್ ವಿಶ್ವನಾಥ್, ನಗರಸಭೆ ಪೌರಾಯುಕ್ತೆ ಪಂಪಾಶ್ರೀ, ಮದ್ದೂರು ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ್, ಸ್ಲಮ್ ಬೋರ್ಡ್ ಅಧಿಕಾರಿಗಳು, ಮುಖಂಡರು ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ