- ಇಲಾಖೆ ಅಧಿಕಾರಿ, ನಕಲಿ ದಾಖಲೆ ಸೃಷ್ಟಿಸಿದವರ ವಿರುದ್ಧ ಕ್ರಮಕ್ಕೆ 10 ದಿನ ಗಡುವು: ಕರವೇ ಎಚ್ಚರಿಕೆ
- - - ಕನ್ನಡಪ್ರಭ ವಾರ್ತೆ ದಾವಣಗೆರೆಮೀನು ಮಾರಾಟ ಮಾಡುವ ಬಡವರಿಗೆ ಬಂದ ಯೋಜನೆಗಳನ್ನು ಇಲಾಖೆ ಅಧಿಕಾರಿಗಳು ಶ್ರೀಮಂತರಿಗೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಇಂಥ ಲಂಚಗುಳಿತನದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ, 10 ದಿನದೊಳಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಿಶ್ಚಿತ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಸ್.ಎಂ. ರಾಜು ಜಿಲ್ಲಾಡಳಿತಕ್ಕೆ ಎಚ್ಚರಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ಮತ್ಸ್ಯ ಯೋಜನೆಯಡಿ ₹10 ಲಕ್ಷವರೆಗೆ ಅನುದಾನ ಸಿಗುತ್ತದೆ. ಅದರಲ್ಲಿ ₹6 ಲಕ್ಷ ಸಹಾಯಧನ ಸರ್ಕಾರದಿಂದ ಸಿಗುತ್ತದೆ. ಇದನ್ನು ಮೀನು ಮಾರಾಟಗಾರರಿಗೆ ತಿಳಿಸದೇ, ಮೀನುಗಾರಿಕೆ ಇಲಾಖೆ ಅಧಿಕಾರಿಗಳು ತಮಗೆ ಲಂಚ ನೀಡುವ ಶ್ರೀಮಂತರು, ಅಧಿಕಾರಿಗಳ ಸಂಬಂಧಿಗಳಿಗೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.ಮಾಹಿತಿಯೇ ನೀಡದ ಅಧಿಕಾರಿಗಳು:
ಮೀನು ವ್ಯಾಪಾರಸ್ಥರಿಗೆ ಇಲಾಖೆ ಅಧಿಕಾರಿಗಳು ಇಲಾಖೆ, ಸರ್ಕಾರದ ಯೋಜನೆಗಳ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಶ್ರೀಮಂತರು, ಅಧಿಕಾರಿಗಳ ಸಂಬಂಧಿಗಳಿಗೆ ದಾಖಲಾತಿಗಳನ್ನು ಸೃಷ್ಠಿಸಲು ಹೇಳಿ, ಅನುದಾನ ಬರುವವರೆಗೂ ಒಂದು ವಾರ, ತಿಂಗಳ ಕಾಲ ಮೀನು ಮಾರಾಟಕ್ಕೆ ಸೂಚಿಸುತ್ತಾರೆ. ಮೀನು ಮಾರಾಟ ಪರವಾನಿಗೆ ಪಡೆಯುವವರೆಗೂ ನೋಡಿಕೊಂಡು, ₹10 ಲಕ್ಷ ಅನುದಾನ ಬಂದ ತಕ್ಷಣ ಬಿಡುಗಡೆ ಮಾಡಿ, ತಮ್ಮ ಪಾಲಿನ ಹಣ ಪಡೆಯುತ್ತಾರೆ. ಈ ಮೂಲಕ ಅರ್ಹ ಮೀನು ಮಾರಾಟಗಾರರಿಗೆ ಅವಕಾಶದಿಂದ ವಂಚಿಸಲಾಗುತ್ತಿದೆ ಎಂದರು.ಅನುದಾನ ಬಿಡುಗಡೆ ಮಾಡಿ, ತಮ್ಮ ಲಂಚದ ಹಣ ಪಡೆದ ನಂತರ ತಾತ್ಕಾಲಿಕವಾಗಿ ಆರಂಭಿಸಿದ್ದ ಮೀನು ಮಾರಾಟ ಮಳಿಗೆಯನ್ನು ಮುಚ್ಚಿಸುತ್ತಾರೆ. ಇಲಾಖೆಯಿಂದ ದಾವಣಗೆರೆಯಲ್ಲಿ ಇಂಥದ್ದೊಂದು ದಂಧೆ ನಡೆದಿದೆ. 2015ರಿಂದ 2024ನೇ ಸಾಲಿನವರೆಗೆ ಬಂದ ಅನುದಾನ, ಫಲಾನುಭವಿಗಳ ಪಟ್ಟಿಯನ್ನು ತನಿಖೆಗೆ ಒಳಪಡಿಸಿದರೆ ಭ್ರಷ್ಟಾಚಾರದ ವಿಚಾರ ಬಯಲಾಗುತ್ತದೆ. ₹10 ಲಕ್ಷಗಳನ್ನು ರಿಯಲ್ ಎಸ್ಟೇಟ್ ದಂಧೆ ಮಾಡುವವರು, ತಮ್ಮ ಸಂಬಂಧಿಗಳು, ಗುತ್ತಿಗೆದಾರರಿಗೆ ಅಧಿಕಾರಿಗಳು ಬಿಡುಗಡೆ ಮಾಡಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು.
ವೇದಿಕೆಯ ಸಿ.ಅಣ್ಣಪ್ಪ ನಾಯಕ, ಕಿರಣ್, ರಾಮಕೃಷ್ಣ ಇದ್ದರು.- - -
ಬಾಕ್ಸ್-1 * ಲಂಚ ಕೊಟ್ಟರೆ ಸಂಘ ಸೃಷ್ಠಿಸಲು ಸಲಹೆಮೀನುಗಾರಿಕೆ ಇಲಾಖೆ ಅನುದಾನ ಹಗರಣ ಬಗ್ಗೆ ಸಮಗ್ರ ತನಿಖೆ ಕೈಗೊಂಡು, ದಾವಣಗೆರೆಯಲ್ಲಿ ಕಳೆದೊಂದು ದಶಕದಲ್ಲಿ ಇದ್ದಂತಹ ಅಧಿಕಾರಿಗಳ ಪಾತ್ರದ ಬಗ್ಗೆಯೂ ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಸೇವೆಯಿಂದ ಅಮಾನತುಪಡಿಸಬೇಕು. ಪ್ರತಿದಿನ ಇಲಾಖೆಯಲ್ಲಿ ಲಂಚ ಪಡೆದು, ಕೆಲಸ ಮಾಡುವುದು ಸಾಮಾನ್ಯವಾಗಿದೆ. ಹಣ ಕೊಟ್ಟರೆ ಸಂಘಗಳನ್ನು ಹುಟ್ಟುಹಾಕುವ ಉಪಾಯಗಳನ್ನು ಇಲಾಖೆಯವರೇ ನೀಡುತ್ತಿದ್ದಾರೆ. ವೃತ್ತಿಪರ ಮೀನುಗಾರ ಅಲ್ಲದಿದ್ದರೂ, ಇಲಾಖೆ ಸೌಲಭ್ಯ ಲಂಚ ಕೊಟ್ಟರೆ ಸಲೀಸಾಗಿ ಸಿಗುವಂತೆ ಅಧಿಕಾರಿಗಳು ಮಾಡಿಕೊಡುತ್ತಾರೆ ಎಂದು ಕರವೇ ರಾಜು ದೂರಿದರು. - - -
ಬಾಕ್ಸ್-2* ಅನರ್ಹರಿಗೆ ಲಕ್ಷ ಲಕ್ಷ ಲಂಚ
ಮೀನು ವ್ಯಾಪಾರಿಗಳೇ ಅಲ್ಲದ, 3 ಜೆಸಿಬಿ, 3 ಟ್ರ್ಯಾಕ್ಟರ್, 3 ಬಿಲ್ಡಿಂಗ್, 2 ಕಾರು, 3 ಮಳಿಗೆ, ಒಂದು ಡಾಬಾ, ಏಳೆಂಟು ಎಕರೆ ಅಡಕೆ ತೋಟ, ಮೈಸೂರಿನಲ್ಲಿ 5 ಎಕರೆ ಅಡಕೆ ತೋಟವಿರುವ, ಒಬ್ಬ ಗಂಡುಮಗ ಇರುವ ಮಹಿಳೆ ಹೆಸರಿಗೆ ₹10 ಲಕ್ಷ ಅನುದಾನ ನೀಡಲಾಗಿದೆ. ಈ ಮಹಿಳೆ ನೀಡಿದ ಲಂಚದ ಹಣಕ್ಕೆ ಪ್ರತಿಯಾಗಿ ಇಲಾಖೆಯವರು ಅನುದಾನ ನೀಡಿದ್ದಾರೆ. ನಕಲಿ ದಾಖಲೆಗಳನ್ನು ಸೃಷ್ಠಿಸಿ, ₹10 ಲಕ್ಷಗಳನ್ನು ಮೀನುಗಾರಿಕೆ ಇಲಾಖೆ ಉಪನಿರ್ದೇಶಕರು, ಚನ್ನಗಿರಿ ತಾಲೂಕಿನ ಸಹಾಯಕ ನಿರ್ದೇಶಕರು, ಅಧಿಕಾರಿಗಳು ಹಾಗೂ ನಕಲಿ ದಾಖಲಾತಿ ನೀಡಿದ ಮಹಿಳೆ ದುರ್ಬಳಕೆ ಮಾಡಿಕೊಂಡಿದ್ದಾರೆ. ಜಿಲ್ಲಾಡಳಿತ ಈ ವಿಚಾರ ಗಂಭೀರವಾಗಿ ಪರಿಗಣಿಸಿ, ಸೂಕ್ತ ತನಿಖೆ ಕೈಗೊಳ್ಳಬೇಕು. 10 ದಿನಗಳೊಳಗೆ ಕಾನೂನು ಕ್ರಮ ಜರುಗಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಕರವೆ ಎಚ್ಚರಿಸಿದೆ.- - - ಕೋಟ್ ಮೀನುಗಾರಿಕೆ ಸೌಲಭ್ಯ ನೀಡಿಕೆಯಲ್ಲಿ ಅನ್ಯಾಯ ಪ್ರಶ್ನಿಸಿದ್ದರಿಂದ ತಮ್ಮ ಮೇಲೆ ಮಹಿಳೆ ಕಡೆಯವರಿಂದ ಹಲ್ಲೆ ಮಾಡಿಸಿದ್ದಾರೆ. ಈ ಬಗ್ಗೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳು, ಹಣ ದುರ್ಬಳಕೆ ಮಾಡಿಕೊಂಡ ಮಹಿಳೆ ಬಹಿರಂಗವಾಗಿ ದಾಖಲೆ ಸಮೇತ ಚರ್ಚೆಗೆ ಬರಲಿ
- ಎಸ್.ಎಂ.ರಾಜು, ಜಿಲ್ಲಾಧ್ಯಕ್ಷ, ಕರವೇ- - - -20ಕೆಡಿವಿಜಿ5:
ದಾವಣಗೆರೆಯಲ್ಲಿ ಶುಕ್ರವಾರ ಕರವೇ ಜಿಲ್ಲಾಧ್ಯಕ್ಷ ಎಸ್.ಎಂ.ರಾಜು ಸುದ್ದಿಗೋಷ್ಠಿ ನಡೆಸಿ, ಮೀನುಗಾರಿಕೆ ಇಲಾಖೆ ಅವ್ಯವಹಾರಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.