ಕನ್ನಡಪ್ರಭ ವಾರ್ತೆ ಹಾಸನ
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಆಟೋ ಚಾಲಕರು, ಕಳೆದ ಹಲವು ವರ್ಷಗಳಿಂದ ಆಟೋ ಚಾಲಕರು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದೀಗ ಬೈಕ್ ಟ್ಯಾಕ್ಸಿಗಳ ಸಂಚಾರದಿಂದ ಆಟೋ ಚಾಲಕರ ದುಡಿಮೆಗೆ ಮತ್ತಷ್ಟು ಹೊಡೆತ ಬಿದ್ದಿದೆ. ಈಗಾಗಲೇ ಉಚಿತ ಬಸ್ ಪ್ರಯಾಣದ ವ್ಯವಸ್ಥೆಯಿಂದ ಆಟೋಗಳ ಆದಾಯ ಕುಸಿದಿದ್ದು, ದಿನನಿತ್ಯದ ದುಡಿಮೆಯೇ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಆಟೋ ಖರೀದಿಗಾಗಿ ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದು, ಪ್ರತಿ ತಿಂಗಳು ಕಂತು ಪಾವತಿಸುವುದರ ಜೊತೆಗೆ ಮನೆ ಬಾಡಿಗೆ, ಮಕ್ಕಳ ಶಿಕ್ಷಣ ಹಾಗೂ ಕುಟುಂಬದ ನಿರ್ವಹಣೆಯ ಜವಾಬ್ದಾರಿಯೂ ಇದೆ. ಮತ್ತೊಂದೆಡೆ ಗ್ಯಾಸ್, ತೈಲ, ಬಿಡಿಭಾಗಗಳು ಸೇರಿದಂತೆ ವಾಹನ ನಿರ್ವಹಣೆಯ ವೆಚ್ಚ ನಿರಂತರವಾಗಿ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಬೈಕ್ ಟ್ಯಾಕ್ಸಿಗಳ ಸ್ಪರ್ಧೆಯಿಂದ ನಮ್ಮ ಜೀವನ ನಿರ್ವಹಣೆ ಕಷ್ಟವಾಗಿದೆ. ಈ ಸಮಸ್ಯೆ ಕುರಿತು ೨೦೨೨ ಮತ್ತು ೨೦೨೩ರಲ್ಲಿಯೂ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಲಾಗಿದೆ. ಆದರೂ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬೈಕ್ ಟ್ಯಾಕ್ಸಿಗಳಲ್ಲಿ ಪ್ರಯಾಣಿಸುವವರ ಸುರಕ್ಷತೆಯೂ ಪ್ರಮುಖ ಪ್ರಶ್ನೆಯಾಗಿದೆ. ಪ್ರಯಾಣಿಕರನ್ನು ಕರೆದೊಯ್ಯುವ ಚಾಲಕರಿಗೆ ಕಡ್ಡಾಯ ಸಮವಸ್ತ್ರ, ಗುರುತಿನ ಚೀಟಿ, ಪೊಲೀಸ್ ಪರಿಶೀಲನೆ, ಜಿಪಿಎಸ್ ವ್ಯವಸ್ಥೆ ಹಾಗೂ ಸೂಕ್ತ ವಿಮಾ ಸೌಲಭ್ಯ ಕಲ್ಪಿಸಬೇಕು. ಪ್ರಯಾಣಿಕರಿಗೂ ಅಪಘಾತ ವಿಮೆ ಇರಬೇಕು. ವಾಹನಗಳ ಸಂಚಾರ ವ್ಯಾಪ್ತಿ ಮತ್ತು ಪರವಾನಗಿ ಕುರಿತು ಸ್ಪಷ್ಟ ನಿಯಮಗಳನ್ನು ರೂಪಿಸಬೇಕು ಎಂದು ಆಗ್ರಹಿಸಿದರು.
ಇತ್ತೀಚೆಗೆ ಬೈಕ್ ಟ್ಯಾಕ್ಸಿಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆ ಹಾಗೂ ಅಪಘಾತಗಳ ಕುರಿತು ಹಲವು ಘಟನೆಗಳು ವರದಿಯಾಗುತ್ತಿವೆ. ಹೀಗಾಗಿ ಕೇವಲ ಸಂಚಾರಕ್ಕೆ ಅವಕಾಶ ನೀಡುವುದಷ್ಟೇ ಅಲ್ಲದೆ, ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಅಗತ್ಯ ನಿಯಂತ್ರಣ ಕ್ರಮಗಳನ್ನು ಜಾರಿಗೆ ತರಬೇಕು. ಆಟೋಗಳಿಗೆ ಅನ್ವಯಿಸುವ ನಿಯಮಗಳಂತೆಯೇ ಬೈಕ್ ಟ್ಯಾಕ್ಸಿಗಳಿಗೂ ಸೂಕ್ತ ಮಾರ್ಗಸೂಚಿ ಇರಬೇಕು ಎಂದು ಅಭಿಪ್ರಾಯಪಟ್ಟರು. ನ್ಯಾಯಾಲಯದ ಆದೇಶಕ್ಕೆ ಎಲ್ಲರೂ ಗೌರವ ನೀಡಬೇಕು. ಬೈಕ್ ಟ್ಯಾಕ್ಸಿ ಚಾಲಕರೂ ಜೀವನೋಪಾಯಕ್ಕಾಗಿ ಕೆಲಸ ಮಾಡುತ್ತಿರುವವರೇ ಹೊರತು ಯಾರನ್ನೂ ಅವಮಾನಿಸುವುದು ಸರಿಯಲ್ಲ. ಅವರಿಗೂ ಕುಟುಂಬವಿದ್ದು, ದುಡಿದು ಬದುಕುವ ಹಕ್ಕಿದೆ. ಆದ್ದರಿಂದ ಚಾಲಕರ ವಿರುದ್ಧ ವೈಯಕ್ತಿಕವಾಗಿ ಹೋರಾಟ ನಡೆಸುವ ಬದಲು ಸರ್ಕಾರದ ವಿರುದ್ಧ ನಿಯಮಾವಳಿ ರೂಪಿಸುವಂತೆ ಒತ್ತಡ ಹೇರಬೇಕು. ಯಾವುದೇ ಬಡ ಚಾಲಕರನ್ನು ಸಾರ್ವಜನಿಕವಾಗಿ ಅವಮಾನಿಸಬಾರದು ಎಂದು ಮಾಧ್ಯಮದವರು ಪ್ರಶ್ನಿಸಿ ಸಲಹೆ ನೀಡಿದರು. ಹಾಸನಾಂಬ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಟೋಗಳು ನಗರಕ್ಕೆ ಆಗಮಿಸುವುದರಿಂದ ಸಂಚಾರ ಮತ್ತು ದುಡಿಮೆಯ ವಿಚಾರದಲ್ಲಿ ಸ್ಥಳೀಯ ಚಾಲಕರಿಗೆ ಸಮಸ್ಯೆಯಾಗುತ್ತದೆ. ಈ ಬಗ್ಗೆಯೂ ಜಿಲ್ಲಾಡಳಿತ ಗಮನಹರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಒಟ್ಟಾರೆ, ಬೈಕ್ ಟ್ಯಾಕ್ಸಿ ಸಂಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ತಕ್ಷಣ ಸ್ಪಷ್ಟ ಮಾರ್ಗಸೂಚಿ ಪ್ರಕಟಿಸಬೇಕು. ವೈಟ್ ಬೋರ್ಡ್ ವಾಹನಗಳ ವಾಣಿಜ್ಯ ಬಳಕೆಗೆ ನಿಯಂತ್ರಣ ವಿಧಿಸಿ, ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆಟೋ ಚಾಲಕರ ಬದುಕು ಮತ್ತು ಪ್ರಯಾಣಿಕರ ಸುರಕ್ಷತೆ ಎರಡನ್ನೂ ಗಮನದಲ್ಲಿಟ್ಟುಕೊಂಡು ನ್ಯಾಯಯುತ ನಿರ್ಧಾರ ಕೈಗೊಳ್ಳಬೇಕು ಎಂದು ಆಟೋ ಚಾಲಕರು ಆಗ್ರಹಿಸಿದರು.