ಮೀಸಲಾತಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ಹೋರಾಡಿ

KannadaprabhaNewsNetwork |  
Published : Jun 01, 2026, 01:15 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್ | Kannada Prabha

ಸಾರಾಂಶ

chitradurga news: BT Jagadish, Hakkottaya, General Secretary. of District Shepherd, Association. DK Sivakumar welcome selection. ಚಿತ್ರದುರ್ಗ ಸುದ್ದಿ: ಸಿದ್ದರಾಮಯ್ಯ, ಸ್ಥಾನ ತೆರವಿಗೆ. ಪರ್ಯಾಯ, ಅವಕಾಶ ಬೇಕು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಪರಿಶಿಷ್ಟ ಜಾತಿ ಹಾಗೂ ಪಂಗಡದವರು ರಾಜಕೀಯ ಮರೆತು ಮೀಸಲಾತಿ ವಿಷಯದಲ್ಲಿ ಹೋರಾಟ ಮಾಡಬೇಕಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ತಾಲೂಕಿನ ಪರಶುರಾಂಪುರದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಂ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮುದಾಯಗಳ ಜಾಗೃತಿ ವಿಷಯದಲ್ಲಿ ಎಲ್ಲರೂ ಮುಂದಾಗಬೇಕು. ವಿದ್ಯಾವಂತರಾದವರು ಮುಂಚೂಣಿ ನಾಯಕತ್ವದಲ್ಲಿ ತೊಡಗಿಸಿಕೊಳ್ಳಬೇಕು. ಪರಿಶಿಷ್ಟರ ಮೀಸಲಾತಿ ಹಂಚಿಕೆಯಲ್ಲಿ ಅನ್ಯಾಯವಾಗಿದ್ದರೆ ಸೌಹಾರ್ದವಾಗಿ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಸದ ಗೋವಿಂದ ಕಾರಜೋಳ ಮಾತನಾಡಿ, ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ವಿಷಯದಲ್ಲಿ ನ್ಯಾ.ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಯಥಾವತ್ ಜಾರಿ ಮಾಡದೇ ಮೂವತ್ತೈದು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಟ ಮಾಡಿಕೊಂಡು ಬಂದ ಸಮುದಾಯಗಳಿಗೆ ಅನ್ಯಾಯವಾಗುವಂತೆ ಮಾಡಿದೆ ಎಂದು ದೂರಿದರು.

ಈ ಅನ್ಯಾಯವನ್ನು ಈಗಿನ ಕಾಂಗ್ರೆಸ್ ಸರ್ಕಾರದಲ್ಲಿರುವ ನೀವುಗಳು ಸರಿಪಡಿಸಿ ಬಂದರೆ ನಾನೇ ಎಲ್ಲರಿಗೂ ಸನ್ಮಾನ ಮಾಡುತ್ತೇನೆ. ಈಗ ಜಾರಿಗೆ ತಂದಿರುವ ಒಳ ಮೀಸಲಾತಿಯಲ್ಲಿ ಮಾದಿಗರಿಗೆ ಮತ್ತೊಮ್ಮೆ ಅನ್ಯಾಯ ಕಟ್ಟಿಟ್ಟ ಬುತ್ತಿ. ನೂರಾರು, ಸಾವಿರಾರು ಹುದ್ದೆ ಭರ್ತಿ ಮಾಡಿದಾಗ ಮಾತ್ರ ಒಂದಿಷ್ಟು ಅನುಕೂಲವಾಗಬಹುದು ಅಷ್ಟೇ ಎಂದರು.

ಸಂಸದ ಗೋವಿಂದ ಕಾರಜೋಳ ಅವರ ಮಾತಿಗೆ ಸಮಜಾಯಿಷಿ ನೀಡಿದ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್ ನೀವೂ ಕೂಡ ಬಿಜೆಪಿ ಸರ್ಕಾರದಲ್ಲಿ ಸಮಾಜ ಕಲ್ಯಾಣ ಮಂತ್ರಿಯಾಗಿದ್ದವರು. ನೊಂದ ಸಮುದಾಯದ ಪರವಾಗಿ ಏಕೆ ಕೆಲಸ ಮಾಡಲಿಲ್ಲ ಎಂದು ಖಾರವಾಗಿಯೇ ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರ ಮೊದಲಿನಿಂದಲೂ ಒಳ ಮೀಸಲಾತಿ ಹಂಚಿಕೆ ಮಾಡುವಲ್ಲಿ ಬದ್ಧತೆ ಪ್ರದರ್ಶಿಸಿದೆ. ಮೊದಲಿಗೆ ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಒಳ ಮೀಸಲಾತಿ ನೀಡಲು ಜಸ್ಟೀಸ್ ಸದಾಶಿವ ಆಯೋಗವನ್ನು ನೇಮಕ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಹೇಳಿದಂತೆ ನಡೆದುಕೊಂಡಿದ್ದೂ ಕಾಂಗ್ರೆಸ್ ಸರ್ಕಾರ. ರೋಸ್ಟರ್ ಬಿಂದು ವಿಷಯದಲ್ಲಿ ಒಂದಿಷ್ಟು ಗೊಂದಲಗಳಿರುವುದು ನಿಜ. ಆದರೆ, ಕಾಂಗ್ರೆಸ್ ಈ ವಿಷಯದಲ್ಲಿ ಸಂಪೂರ್ಣವಾಗಿ ನೊಂದವರ ಪರವಾಗಿ ನಿರ್ಣಯ ಕೈಗೊಂಡಿದೆ ಎಂದು ಹೇಳಿದರು.

ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಅಂಬೇಡ್ಕರ್ ಕಂಡ ಕನಸು ನನಸು ಮಾಡಲು ಸಮುದಾಯ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು. ಇಲ್ಲವಾದಲ್ಲಿ ಮತ್ತೆ ಅದೇ ಹಿಂದುಳುವಿಕೆಯನ್ನು ಕಾಣುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಡಾ.ಜೆಜೆ ಹಟ್ಟಿ ತಿಪ್ಪೇಸ್ವಾಮಿ ಮಾತನಾಡಿ, ಅಂಬೇಡ್ಕರ್ ಜಯಂತಿ ಆಚರಣೆ ಮಾಡುವ ಜೊತೆಗೆ ಅಂತಹವರ ಆದರ್ಶಗಳನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಆದಿಜಾಂಬವ ಶಾಖಾ ಮಠದ ಷಡಕ್ಷರ ಮುನಿ ಸ್ವಾಮೀಜಿ ಮಾತನಾಡಿ, ಶಿಕ್ಷಣ, ಸಂಘಟನೆ, ಹೋರಾಟದಂತಹ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಮಾದರಿಯಾಗಿಟ್ಟುಕೊಂಡು ಜೀವನ ನಿರ್ವಹಣೆ ಮಾಡಬೇಕು ಎಂದು ಹೇಳಿದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪರಶುರಾಂಪುರದಲ್ಲಿ ಮೆರವಣಿಗೆ ನಡೆಸಲಾಯಿತು. ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ.ರಘು ಕೊಳಗೋಟೆ, ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ದಲಿತ ಮುಖಂಡ ಟಿ.ಡಿ.ರಾಜಗಿರಿ, ಚನ್ನಬಸಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಯ್ಯ, ಭೀಮನಕೆರೆ ಶಿವಮೂರ್ತಿ, ಚೌಳೂರ್ ಪ್ರಕಾಶ್, ಡಿ.ಟಿ. ಹನುಮಂತರಾಯ, ಕೆಡಿಪಿ ಸದಸ್ಯ ಮೀರಾಸಾಬಿಹಳ್ಳಿ ರಂಗಸ್ವಾಮಿ, ಜಯಕುಮಾರ್ ಲೋಕೋಪಯೋಗಿ ಎಂಜಿನಿಯರ್ ಆರ್.ನಾಗರಾಜ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಎಚ್.ಸಮರ್ಥರಾಯ, ಗುಜ್ಜಾರಪ್ಪ, ಓಬನಹಳ್ಳಿ ಮಾರಣ್ಣ ಇದ್ದರು.

ಸಾಧುಕೋಕಿಲ ಸಂಗೀತ ಕಾರ್ಯಕ್ರಮಕ್ಕೆ ಜನವೋ ಜನ

ಅಂಬೇಡ್ಕರ್, ಬಾಬೂಜಿ ಜಯಂತಿ ಕಾರ್ಯಕ್ರಮದ ಪ್ರಯುಕ್ತ ಸಂಗೀತ ನಿರ್ದೇಶಕ ಸಾಧುಕೋಕಿಲ ಅವರ ನೇತೃತ್ವದಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಜನವೋ ಜನ ಎಂಬಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಸಾಧುಕೋಕಿಲ ತಮ್ಮದೇ ವಿಶಿಷ್ಟ ಬಗೆಯ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು.

ಚಳ್ಳಕೆರೆ ತಾಲೂಕಿನ ಪರಶುರಾಂಪುರದ ಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಂ ಜಯಂತಿ ಕಾರ್ಯಕ್ರಮವನ್ನು ಸಂಸದ ಗೋವಿಂದ ಕಾರಜೋಳ ಉದ್ಘಾಟಿಸಿದರು. ಶಾಸಕ ಟಿ. ರಘುಮೂರ್ತಿ, ಮಾಜಿ ಸಚಿವ ಎಚ್. ಆಂಜನೇಯ, ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ. ರಘು ಕೆಳಗೋಟೆ, ಆದಿಂಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರಂಗೆ ಡಿಸಿಎಂ, ಮಹದೇವಪ್ಪಗೆ ಸಚಿವ ಸ್ಥಾನಕ್ಕೆ ಒತ್ತಾಯ
ಡಿ.ಟಿ.ಶ್ರೀನಿವಾಸಗೆ ಸಂಪುಟದಲ್ಲಿ ಸ್ಥಾನಕ್ಕೆ ಒತ್ತಾಯ