ಕನ್ನಡಪ್ರಭ ವಾರ್ತೆ ಇಳಕಲ್ಲಕರ್ನಾಟಕದಲ್ಲಿ ಕನ್ನಡ ಭಾಷೆಯ ರಕ್ಷಣೆಗೆ ಕನ್ನಡ ಸಾಹಿತ್ಯ ಪರಿಷತ್ ಮುಂದಾಗಬೇಕು ಎಂದು ಪ್ರೊ. ಬಸವರಾಜ ನಾಡಗೌಡ ಹೇಳಿದರು.
ಕೇವಲ ಸಮ್ಮೇಳನ, ಸಮಾರಂಭ ಮಾಡುವದು ಕನ್ನಡ ಸಾಹಿತ್ಯ ಪರಿಷತ್‌ನ ಕೆಲಸವಲ್ಲ. ಕಸಾಪ ಒಂದು ಶತಮಾನದ ಇತಿಹಾಸ ಹೊಂದಿದೆ. ಅದಕ್ಕಾಗಿ ಇನ್ನು ಮುಂದೆ ಕನ್ನಡ ಭಾಷೆಯ ರಕ್ಷಣೆಗೆ ಕನ್ನಡ ಸಾಹಿತ್ಯ ಪರಿಷತ್ ಟೊಂಕಕಟ್ಟಿ ನಿಲ್ಲಬೇಕು. ಸರ್ಕಾರದ ಮೇಲೆ ಒತ್ತಡ ತಂದು ಪ್ರತಿಭಟನೆಗಳನ್ನು ನಡೆಸುವ ಮೂಲಕ ಕನ್ನಡ ಭಾಷೆ ರಕ್ಷಣೆಗೆ ಸದಾ ಶ್ರಮಿಸಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಕಿ ಶ್ರೀದೇವಿ ಕರ್ಜಗಿ ಮಾತನಾಡಿ, ಕನ್ನಡ ಭಾಷೆ ಮತ್ತು ಕನ್ನಡ ಸಾಹಿತ್ಯ ಪರಿಷತ್ ಬೆಳೆದು ಬಂದ ಕುರಿತು ವಿವರಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್‌ನ ಇಳಕಲ್ಲ ಘಟಕದ ಅಧ್ಯಕ್ಷ ಮಹಾದೇವ ಕಂಬಾಗಿ, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ಉಪನ್ಯಾಸ ಹಾಗೂ ಕಾರ್ಯಕ್ರಮ ನಡೆಸಲು ಕೇಂದ್ರ ಸಮಿತಿ ಹಣ ಬಿಡುಗಡೆ ಮಾಡಿದರೆ ನಾವು ಇನ್ನು ಉತ್ತಮ ಕಾರ್ಯಕ್ರಮಗಳನ್ನು ಮಾಡಬಹುದು ಎಂದರು.ಮುಖ್ಯ ಅತಿಥಿ ಸ್ನೇಹರಂಗದ ಅಧ್ಯಕ್ಷ ಬಸವರಾಜ ಮಠದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ ಉಪನ್ಯಾಸ ಕೊಟ್ಟ ಶಿಕ್ಷಕಿ ಶ್ರೀದೇವಿ ಕರ್ಜಗಿ ಅವರನ್ನು ಕಸಾಪ ಸಮಿತಿ ವತಿಯಿಂದ ಗೌರವಿಸಿ ಸತ್ಕರಿಸಲಾಯಿತು.
ಸಮಾರಂಭದಲ್ಲಿ ಪರಿಷತ್ ಸದಸ್ಯರಾದ ಪ್ರೊ.ಕೆ.ಎ.ಬನ್ನಟ್ಟಿ, ಪ್ರೊ.ರಾಮನಗೌಡ ಸಂದಿಮನಿ, ಮಲ್ಲಿಕಾರ್ಜುನ ಅಂಗಡಿ, ಶಿಕ್ಷಕಿ ಇಂದುಮತಿ ಅಂಗಡಿ, ಸಿ.ಎಸ್.ಶ್ಯಾಸ್ತ್ರಿ, ಸಿ.ಟಿ.ವಂದಕುದರಿ, ಕೆ.ಎಚ್.ಸೋಲ್ಲಾಪುರ, ಉಮೇಶ ಶಿರೂರ, ಡಗಳಚಂದ ಪವಾರ, ಕಿರಣ ಬಿಜ್ಜಲ ಹಾಗು ಇತರರು ಹಾಜರಿದ್ದರು.ಕೋಟ್ವಿಶಾಲ ಮನೋಭಾವ ಇರುವ ಕನ್ನಡಿಗರು ಬೇರ ಭಾಷೆಯವರನ್ನು ಆದರಿಸುತ್ತಾರೆ ಮತ್ತು ಗೌರವಿಸುತ್ತಾರೆ. ಆದರೆ, ಕರ್ನಾಟಕದಲ್ಲಿ ನೆಲೆ ನಿಂತ ಬೇರೆ ಭಾಷಿಕರು ತಮ್ಮ ಭಾಷೆಯ ಹಕ್ಕನ್ನು ಪ್ರತಿಪಾದಿಸುತ್ತಾ ಕನ್ನಡ ಭಾಷೆಗೆ ಹಾಗು ಕನ್ನಡಿಗರಿಗೆ ತೊಂದರೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಉಂಟಾಗಿರುವಾಗ ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಭಾಷೆಯ ರಕ್ಷೆಣೆಗೆ ಮುಂದಾಗಬೇಕು.ಪ್ರೊ.ಬಸವರಾಜ ನಾಡಗೌಡ