ಬೇಡಗುಳಿ ನಿವಾಸಿ ರಂಗಮ್ಮ ಹುಲಿಯ ದಾಳಿಗೆ ತುತ್ತಾದ ಹಿನ್ನೆಲೆಯಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ, ಅರಣ್ಯಇಲಾಖೆಯಿಂದ ಮಂಜೂರಾದ ಪರಿಹಾರ ವಿತರಿಸಿದರು.
ಚಾಮರಾಜನಗರ: ತಾಲೂಕಿನ ಕಾಡಂಚಿನ ಗ್ರಾಮ ಬೇಡಗುಳಿ ನಿವಾಸಿ ರಂಗಮ್ಮ ಹುಲಿ ದಾಳಿಗೆ ತುತ್ತಾದ ಹಿನ್ನೆಲೆಯಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಬೇಡಗುಳಿಗೆ ಭೇಟಿ ನೀಡಿ, ರಂಗಮ್ಮ ಅವರ ಕುಟುಂಬದವರಿಗೆ ಸಾಂತ್ವನ ಹೇಳಿ, ವೈಯಕ್ತಿಕ ಪರಿಹಾರ, ಜತೆಗೆ ಅರಣ್ಯಇಲಾಖೆಯಿಂದ ಮಂಜೂರಾದ ೨೦ಲಕ್ಷ ರು. ಪರಿಹಾರದ ಚೆಕ್ ವಿತರಿಸಿದರು.
ಇದೇ ವೇಳೆ ಮಾತನಾಡಿ, ಬೇಡಗುಳಿ ಕಾಡಂಚಿನ ಗ್ರಾಮವಾಗಿದ್ದು, ಕಾಡುಪ್ರಾಣಿಗಳ ಓಡಾಟ ಇದ್ದೇ ಇರುತ್ತದೆ. ಈಗಾಗಲೇ ರಂಗಮ್ಮ ಹುಲಿದಾಳಿಯಿಂದ ಮೃತಪಟ್ಟಿದ್ದಾರೆ. ರವಿ ಎಂಬಾತ ಗಾಯಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನೀವು ನೆಲೆಸಿರುವ ಪ್ರದೇಶ ದಟ್ಟಾರಣ್ಯದಿಂದ ಕೂಡಿದೆ, ಮನೆಯಿಂದ ಹೊರಬರಬೇಕಾದರೆ ಪ್ರಾಣಿಗಳ ಚಲನವಲನ ನೋಡಿ ಎಚ್ಚರಿಕೆಯಿಂದ ಮುಂದೆ ಬರಬೇಕು ಎಂದರು. ಅರಣ್ಯಇಲಾಖೆಯಿಂದ ಕೊಡಿಸಿರುವ ೨೦ಲಕ್ಷ ರು.ಗಳನ್ನು ತಮ್ಮ ಕುಟುಂಬದ ನಿರ್ವಹಣೆಗೆ ಬಳಸಬೇಕು, ಅನಗತ್ಯ ಖರ್ಚಿಗೆ ಕಡಿವಾಣ ಹಾಕಬೇಕು ಎಂದರು.
ತಮಗೆ ವಾಸಿಸಲು ಸೂಕ್ತ ಮನೆಯಿಲ್ಲ. ತಮಗೆ ಸರ್ಕಾರದಿಂದ ಮನೆಗಳನ್ನು ಮಂಜೂರು ಮಾಡಿಸಿಕೊಡಬೇಕು ಎಂದು ರಂಗಮ್ಮನ ಮಕ್ಕಳು ಶಾಸಕರಲ್ಲಿ ಮನವಿ ಮಾಡಿಕೊಂಡರು. ಶಾಸಕರು ಸಹ ಆದಿವಾಸಿಗಳ ಮನವಿಗೆ ಸ್ಪಂದಿಸಿ, ಮನೆಕೊಡಿಸುವ ಭರವಸೆ ನೀಡಿದರು. ತಾಪಂ ಮಾಜಿ ಸದಸ್ಯರಾದ ಪಿ.ಕುಮಾರನಾಯಕ, ಶಾಮೀರ್ ಪಾಷಾ, ಗ್ರಾಪಂ ಮಾಜಿ ಉಪಾಧ್ಯಕ್ಷ ಶಿವನಾಯಕ, ಎಸಿಎಫ್ ಮಂಜುನಾಥ್, ತಾಪಂ ಕಾರ್ಯನಿರ್ವಹಣಾಧಿಕಾರಿ ಶ್ರೀಕಂಠರಾಜೇ ಅರಸ್, ರಾಮಸಮುದ್ರ ಪೂರ್ವ ಪೋಲಿಸ್ ಇನ್ಸ್ ಪೆಕ್ಟರ್ ನವೀನ್ ತಾಲೂಕು ಶಿಕ್ಷಣ ಸಂಯೋಜಕ ವಿಶ್ವನಾಥ್ ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.