* ಪೊಲೀಸರ ಭದ್ರತೆಯಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ತೆರವು । ಅಧಿಕಾರಿಗಳು, ನಾಯಕ ಸಮಾಜದವರ ಮಧ್ಯೆ ವಾಕ್ಸಮರ
ಕನ್ನಡಪ್ರಭ ವಾರ್ತೆ ದಾವಣಗೆರೆಮಹರ್ಷಿ ಶ್ರೀ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ ವಿಚಾರಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆ ಹಾಗೂ ವಾಲ್ಮೀಕಿ ನಾಯಕ ಸಮಾಜದವರ ಮಧ್ಯೆ ತೀವ್ರ ವಾಗ್ವಾದ ಹಿನ್ನೆಲೆಯಲ್ಲಿ ಮುಂಜಾಗ್ರತೆಯಾಗಿ ಚನ್ನಗಿರಿ ಪಟ್ಟಣದಲ್ಲಿ ಐಪಿಸಿ 144ನೇ ಸೆಕ್ಷನ್‌ನಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಪಟ್ಟಣದ ಬೀರೂರು ಕ್ರಾಸ್‌ನಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನು ಮಂಗಳವಾರ ಬೆಳಗಿನ ಜಾವ ಏಕಾಏಕಿ ಪ್ರತಿಷ್ಠಾಪಿಸಿದ್ದು, ಬ್ರಾಹ್ಮೀ ಮುಹೂರ್ತದಲ್ಲಿ ಪುತ್ಥಳಿ ಪ್ರತಿಷ್ಠಾಪಿಸಿದ್ದಾಗಿ ನಾಯಕ ಸಮಾಜದ ಮುಖಂಡ ಹೊದಿಗೆರೆ ರಮೇಶ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರೆ, ಪುರಸಭೆಯಲ್ಲಿ ನಿರ್ಣಯವಾಗದೇ, ಅನಧಿಕೃತವಾಗಿ ಪ್ರತಿಷ್ಠಾಪಿಸಿದ್ದ ಪುತ್ಥಳಿಯ ಅಧಿಕಾರಿಗಳು, ಪೊಲೀಸರು ಮಂಗಳವಾರ ತಡರಾತ್ರಿ ತೆರವುಗೊಳಿಸಿದ್ದು ನಾಯಕ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು.ಪೊಲೀಸರ ಭದ್ರತೆಯಲ್ಲಿ ಪುತ್ಥಳಿ ತೆರವು:
ಪುರಸಭೆ ಅಧಿಕಾರಿಗಳು ವಾಲ್ಮೀಕಿ ಮೂರ್ತಿ ತೆರವಿಗೆ ಮುಂದಾದಾಗಲೂ ಮಧ್ಯೆ ಗಲಾಟೆ ನಡೆಯಿತು. ವಾಲ್ಮೀಕಿ ಪುತ್ಥಳಿ ಧ್ವಂಸಕ್ಕೆ ಹಾರೆ, ಗುದ್ದಲಿ ತಂದಿದ್ದಾರೆಂಬುದಾಗಿ ಆಕ್ರೋಶಗೊಂಡ ಸಮಾಜ ಬಾಂಧವರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ನಂತರ ಪೊಲೀಸರು ಮಧ್ಯ ಪ್ರವೇಶಿಸಿ, ಜನರ ಸಮಾಧಾನಪಡಿಸಿದರು. ಕಡೆಗೆ ಪೊಲೀಸರ ಭದ್ರತೆಯಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿಯ ಕೊಂಡೊಯ್ದು, ಪುರಸಭೆಯಲ್ಲಿ ಇಡಲಾಗಿದೆ. ಪುರಸಭೆಯಲ್ಲಿ ನಿರ್ಣಯ ಆಗುವವರೆಗೂ ಪುತ್ಥಳಿ ಪುರಸಭೆಯಲ್ಲಿ ಇರಲಿ. ಬುಧವಾರ ಪುತ್ಥಳಿ ವಿಚಾರವಾಗಿಯೇ ಪುರಸಭೆ ಸಭೆ ಕರೆದಿದೆ ಎಂಬುದಾಗಿ ನಾಯಕ ಸಮಾಜದವರಿಗೆ ಅಧಿಕಾರಿಗಳು ಭರವಸೆ ನೀಡಿ, ಸಮಾಧಾನ ಮಾಡಿ ಕಳಿಸಿದ್ದರು.ಅಧಿಕಾರಿಗಳು, ಸಮಾಜದವರ ಮಧ್ಯೆ ಮಾತಿನ ಚಕಮಕಿ:
ಪುತ್ಥಳಿ ತೆರವು ವೇಳೆ ಗಲಾಟೆ, ಗದ್ದಲ ಜೋರಾಗುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸ್ ಅಧಿಕಾರಿಗಳು, ಸಮಾಜದವರ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು. ಯಾರನ್ನು ಕೇಳಿ ಪ್ರತಿಮೆ ಪ್ರತಿಷ್ಠಾಪಿಸಿದ್ದೀರಿ ಎಂಬುದಾಗಿ ಕೇಳಿದ ಅಧಿಕಾರಿಗಳು ಹಾಗೂ ಯಾರನ್ನು ಕೇಳಿ ಪುತ್ಥಳಿ ತೆರವು ಮಾಡಿಸಿದ್ದೀರಿ ಎಂಬುದಾಗಿ ನಾಯಕ ಸಮಾಜದವರ ಮಧ್ಯೆ ವಾಕ್ಸಮರ ಜೋರಾಯಿತು. ಡಿವೈಎಸ್ಪಿ ಪ್ರಶಾಂತ್ ಮನೋಳಿ ಸ್ಥಳಕ್ಕೆ ಧಾವಿಸಿ, ಎಲ್ಲರನ್ನೂ ಸಮಾಧಾನಿಸಿದ್ದರು. ಚನ್ನಗಿರಿ ಪುರಸಭೆಯಲ್ಲಿ ಬುಧವಾರ ನಡೆದ ಸಭೆಯನ್ನು ಪಟ್ಟಣದಲ್ಲಿ 144ನೇ ಸೆಕ್ಷನ್ ನಡಿ ನಿಷೇಧಾಜ್ಞೆ ಜಾರಿಗೊಳಿಸಿದ್ದ ಹಿನ್ನೆಲೆಯಲ್ಲಿ ಸಭೆ ಮುಂದೂಡಿದ್ದಾಗಿ ಪುರಸಭೆ ಮುಖ್ಯಾಧಿಕಾರಿ ಹೇಳಿ, ಸಭೆಯನ್ನು ಮುಂದೂಡಿದ್ದ ನಾಯಕ ಸಮಾಜದ ಕೆಂಗಣ್ಣಿಗೂ ಗುರಿಯಾಯಿತು.ಮಂಗಳವಾರ ತಡರಾತ್ರಿ 12 ಗಂಟೆಯಿಂದಲೇ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಪೊಲೀಸ್ ಅಧಿಕಾರಿ, ಸಿಬ್ಬಂದಿ ಪಟ್ಟಣದಲ್ಲಿ ಗಸ್ತು, ಬಂದೋಬಸ್ತ್, ಸೂಕ್ಷ್ಮ ಪ್ರದೇಶದ ಮೇಲೆ ನಿಗಾ ವಹಿಸಿದ್ದಾರೆ. ಪ್ರಭಾರ ಮುಖ್ಯಾಧಿಕಾರಿ ವಿರುದ್ಧ ದೂರು
ದಾವಣಗೆರೆ: ಚನ್ನಗಿರಿಯಲ್ಲಿ ವಾಲ್ಮೀಕಿ ಪುತ್ಥಳಿ ತೆರವುಗೊಳಿಸಿದ್ದ ಹಿನ್ನೆಲೆಯಲ್ಲಿ ಪುರಸಭೆಯಲ್ಲಿ ಬುಧವಾರ ಕರೆದಿದ್ದ ಸಭೆಯನ್ನು ಮುಖ್ಯಾಧಿಕಾರಿ ನಿಷೇಧಾಜ್ಞೆ ಜಾರಿ ಹೆಸರಿನಲ್ಲಿ ಏಕಾಏಕಿ ರದ್ದುಪಡಿಸಿದ್ದು ನಾಯಕ ಸಮಾಜದ ಕೆಂಗಣ್ಣಿಗೆ ಕಾರಣವಾಯಿತು. ಪುರಸಭೆ ಸಾಮಾನ್ಯ ಸಭೆ ರದ್ಧುಪಡಿಸಿದ್ದು, ಸಭೆ ರದ್ದುಪಡಿಸಲು ನಿಷೇಧಾಜ್ಞೆ ಜಾರಿ ಕಾರಣವೆಂದ ಮುಖ್ಯಾಧಿಕಾರಿ ವಿರುದ್ಧ ಚನ್ನಗಿರಿ ಪೊಲೀಸ್ ಠಾಣೆ ಮೆಟ್ಟಿಲನ್ನೂ ನಾಯಕ ಸಮಾಜವರು ಏರಿದ್ದಾರೆ. ಉದ್ದೇಶ ಪೂರ್ವಕವಾಗಿ ಸಭೆಯನ್ನು ರದ್ಧುಪಡಿಸಿದ ಪ್ರಭಾರ ಮುಖ್ಯಾಧಿಕಾರಿ ವೈ.ಎಸ್.ಆರಾಧ್ಯ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದು ಮಾಧ್ಯಮಗಳಿಗೆ ಸಮಾಜದ ಮುಖಂಡರು ತಿಳಿಸಿದ್ದಾರೆ.