ಪುತ್ಥಳಿ ವಿವಾದ: ಭಾನುವಳ್ಳಿ ಗ್ರಾಮದಲ್ಲಿ ಬಿಗುವಿನ ಸ್ಥಿತಿ

KannadaprabhaNewsNetwork |  
Published : Jan 10, 2024, 01:46 AM IST
ಪ್ರತಿಭಟನಾ ನಿರತರ ಜತೆ ಎಸಿ ದುರ್ಗಾಶ್ರೀ ಮಾತುಕತೆ, | Kannada Prabha

ಸಾರಾಂಶ

ರಾಯಣ್ಣನ ಪುತ್ಥಳಿ ಪ್ರತಿಷ್ಠಾಪಿಸಿದ ಜಾಗ ಸರ್ಕಾರಕ್ಕೆ ಸೇರಿದ್ದಾಗಿದೆಯೆಂಬುದಾಗಿ ಕುರುಬ ಸಮಾಜದವರು ಪಟ್ಟು ಹಿಡಿದರೆ, ಈಗಾಗಲೇ ಮಹರ್ಷಿ ವಾಲ್ಮೀಕಿ ಮಹಾದ್ವಾರ, ವೃತ್ತವೆಂದು ನಾಮಕರಣ ಮಾಡಿದ್ದು, ಈಗ ರಾಯಣ್ಣನವರ ಪುತ್ಥಳಿ ಪ್ರತಿಷ್ಠಾಪಿಸಿದ್ದು ಸರಿಯಲ್ಲ ಎಂಬುದಾಗಿ ನಾಯಕ ಸಮಾಜದವರು ಆಕ್ಷೇಪಿಸಿದರು.

ರಾಯಣ್ಣ ಪುತ್ಥಳಿ ತೆರವಿಗಾಗಿ ಹೋರಾಟ: ನಾಯಕ ಸಮಾಜ । ವಾಲ್ಮೀಕಿ ಜೊತೆ ರಾಯಣ್ಣ ಪುತ್ಥಳಿ ಇರಲಿ: ಕುರುಬ ಸಮಾಜ ಪಟ್ಟು । ಸ್ಥಳದಲ್ಲಿ ಪೊಲೀಸರು ಮೊಕ್ಕಾಂ, ಎಎಸ್ಪಿ, ಎಸಿ, ಇಒ, ತಹಸೀಲ್ದಾರ್ ದೌಡು ಕನ್ನಡಪ್ರಭ ವಾರ್ತೆ ದಾವಣಗೆರೆ/ ಮಲೇಬೆನ್ನೂರು

ಭಾನುವಳ್ಳಿ ಗ್ರಾಮದಲ್ಲಿ ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣ ಪುತ್ಥಳಿ ಪ್ರತಿಷ್ಠಾಪಿಸಿದ್ದರಿಂದ ಕುರುಬ ಸಮಾಜ ಹಾಗೂ ನಾಯಕ ಸಮಾಜದವರ ಮಧ್ಯೆ ತೀವ್ರ ವಾಕ್ಸಮರ ಏರ್ಪಟ್ಟು, ಬಿಗುವಿನ ಪರಿಸ್ಥಿತಿ ನಿರ್ಮಾಣವಾದ ಘಟನೆ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದಲ್ಲಿ ವರದಿಯಾಗಿದೆ.

ರಾಯಣ್ಣನ ಪುತ್ಥಳಿ ಪ್ರತಿಷ್ಠಾಪಿಸಿದ ಜಾಗ ಸರ್ಕಾರಕ್ಕೆ ಸೇರಿದ್ದಾಗಿದೆಯೆಂಬುದಾಗಿ ಕುರುಬ ಸಮಾಜದವರು ಪಟ್ಟು ಹಿಡಿದರೆ, ಈಗಾಗಲೇ ಮಹರ್ಷಿ ವಾಲ್ಮೀಕಿ ಮಹಾದ್ವಾರ, ವೃತ್ತವೆಂದು ನಾಮಕರಣ ಮಾಡಿದ್ದು, ಈಗ ರಾಯಣ್ಣನವರ ಪುತ್ಥಳಿ ಪ್ರತಿಷ್ಠಾಪಿಸಿದ್ದು ಸರಿಯಲ್ಲ ಎಂಬುದಾಗಿ ನಾಯಕ ಸಮಾಜದವರು ಆಕ್ಷೇಪಿಸಿದರು.

ಅಧಿಕಾರಿಗಳಿಂದ ಮನವೊಲಿಕೆ ಯತ್ನ:

ಕುರುಬ-ನಾಯಕ ಸಮುದಾಯದವರ ಮಧ್ಯೆ ಸಣ್ಣದಾಗಿ ಶುರುವಾದ ಜಗಳ ಪ್ರತಿಭಟನೆ ಸ್ವರೂಪ ಪಡೆಯುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಮಲೇಬೆನ್ನೂರು ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಹರಿಹರ ತಹಸೀಲ್ದಾರ್‌, ಉಪ ವಿಭಾಗಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ, ಎರಡೂ ಸಮುದಾಯದ ಮುಖಂಡರು, ಸಮಾಜ ಬಾಂಧ‍ವರ ಮನವೊಲಿಕೆಗೆ ಪ್ರಯತ್ನಿಸಿದರೂ ಒಂದು ಸಮುದಾಯ ಅಲ್ಲಿ ಹೊಸದಾಗಿ ಪ್ರತಿಷ್ಠಾಪಿಸಿದ ಪ್ರತಿಮೆ ತೆರವು ಮಾಡಬೇಕೆಂದರೆ, ಮತ್ತೊಂದು ಸಮುದಾಯ ಪುತ್ಥಳಿ ತೆರವು ಪ್ರಶ್ನೆಯೇ ಇಲ್ಲವೆಂದು ಪಟ್ಟು ಹಿಡಿಯಿತು.

ಎಕ್ಕೆಗೊಂದಿ-ನಂದಿಗುಡಿ ರಸ್ತೆಯ ಭಾನುವಳ್ಳಿ ಗ್ರಾಮದ ವೃತ್ತಕ್ಕೆ 30 ವರ್ಷದಿಂದಲೂ ವಾಲ್ಮೀಕಿ ವೃತ್ತ ಎಂಬ ನಾಮಫಲಕ ಹಾಕಿದೆ. ವಾಲ್ಮೀಕಿ ಮಹಾದ್ವಾರವೆಂಬ ಫಲಕ ಸಹ ಹಾಕಲಾಗಿದೆ. ಅದೇ ವೃತ್ತದ ಪ್ರಯಾಣಿಕರ ತಂಗುದಾಣದಲ್ಲೂ ವಾಲ್ಮೀಕಿ ವೃತ್ತವೆಂದೇ ಇದೆ. ಆದರೆ, ರಾತ್ರೋರಾತ್ರಿ ಇದೇ ವೃತ್ತದ ಬಳಿ ಸಂಗೊಳ್ಳಿ ರಾಯಣ್ಣ ಪುತ್ಥಳಿ ಪ್ರತಿಷ್ಠಾಪಿಸಿದ್ದು ನೋಡಿದರೆ, ಇದರ ಹಿಂದೆ ಬೇರೇನೋ ದುರುದ್ದೇಶವಿದೆ ಎಂಬುದಾಗಿ ಆರೋಪಿಸಿ ನಾಯಕ ಸಮಾಜದ ಮುಖಂಡರಾದ ಟಿ.ಪುಟ್ಟಪ್ಪ, ಧನ್ಯಕುಮಾರ, ನಾರಾಯಣಪ್ಪ, ಚಂದ್ರಪ್ಪ, ಜಯಪ್ಪ, ಕುಮಾರ, ಲಕ್ಷ್ಮಿ, ಶಾಂತಮ್ಮ, ಉಮಾ, ಸರೋಜಮ್ಮ ಸೇರಿ ನೂರಾರು ನಾಯಕ ಸಮುದಾಯದವರು ಮಂಗಳವಾರ ಬೆಳಿಗ್ಗೆ ರಸ್ತೆಯಲ್ಲೇ ಕುಳಿತು ಹೋರಾಟ ಶುರು ಮಾಡಿದರು.

ಘಟನೆಗೆ ಅಧಿಕಾರಿಗಳ ಅಸಡ್ಡೆ ಕಾರಣ: ನಾಯಕ ಸಮಾಜ

ಗ್ರಾಮದಲ್ಲಿ ಶಾಂತಿ, ಸಾಮರಸ್ಯ ಕದಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಕಳೆದ ನವೆಂಬರ್ ತಿಂಗಳಲ್ಲೇ ನಾವು ಸಂಬಂಧಿಸಿದ ಇಲಾಖೆಗೆ ಹೀಗೆ ಸಂಗೊಳ್ಳಿ ರಾಯಣ್ಣನವರ ಪುತ್ಥಳಿ ಸ್ಥಾಪಿಸಲು ಸಿದ್ಧತೆ ನಡೆದಿದ್ದ ಬಗ್ಗೆ ಲಿಖಿತವಾಗಿ ಮಾಹಿತಿ ನೀಡಿದರೂ ಅಧಿಕಾರಿಗಳು ಮೌನವಹಿಸಿದ್ದರು. ಇಂದಿನ ಘಟನೆಗೆ ಅಧಿಕಾರಿಗಳ ನಿರ್ಲಕ್ಷ್ಯ, ಅಸಡ್ಡೆಯೂ ಕಾರಣವಾಗಿದೆ. ಈಗಾಗಲೇ 3 ದಶಕದಿಂದ ಇರುವ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಪುತ್ಥಳಿ ಪ್ರತಿಷ್ಠಾಪಿಸುವ ಅವಶ್ಯಕತೆ ಏನಿತ್ತು? ನಮ್ಮ ಹಕ್ಕಿಗಾಗಿ ನ.12ರವರೆಗೆ ಶಾಂತಿಯುತವಾಗಿ ಗ್ರಾಮದಲ್ಲಿ ಹೋರಾಟ ಮಾಡುತ್ತೇವೆ. ಸ್ಪಂದಿಸದಿದ್ದರೆ, ತೀವ್ರ ಸ್ವರೂಪದ ಹೋರಾಟ ನಿಶ್ಚಿತ ಎಂದು ನಾಯಕ ಸಮಾಜದ ಧನ್ಯಕುಮಾರ ಇತರರು ಎಚ್ಚರಿಸಿದರು.

ರಾಯಣ್ಣನ ಪುತ್ಥಳಿ ತೆರವು ಮಾಡಲ್ಲ: ಕುರುಬ ಸಮಾಜ

ಅತ್ತ ಶ್ರೀ ಬೀರಲಿಂಗೇಶ್ವರ ದೇವಾಲಯದಲ್ಲಿ ಕುರುಬ ಸಮಾಜದ ಮುಖಂಡರಾದ ಕನ್ನಪ್ಪ, ಕರಿಯಪ್ಪ, ಹರೀಶ, ಚಂದ್ರಪ್ಪ ಮತ್ತಿತರೆ ಮುಖಂಡರು, ಈಗ ಮಹರ್ಷಿ ವಾಲ್ಮೀಕಿ ವೃತ್ತ ಎಂಬುದಾಗಿ ಕರೆಯುತ್ತಿರುವ ವೃತ್ತ ಹಿಂದೆ ನಾಗರೆಡ್ಡಿ ವೃತ್ತ ಎಂಬುದಾಗಿತ್ತು. ಅಲ್ಲಿ ವಾಲ್ಮೀಕಿ ವೃತ್ತ ಎನ್ನುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಪ್ರತಿಷ್ಠಾಪಿಸಿದ್ದರಲ್ಲಿ ತಪ್ಪೇನೂ ಆಗುವುದಿಲ್ಲ. ವಾಲ್ಮೀಕಿ ಮತ್ತು ರಾಯಣ್ಣ ಎರಡೂ ಪುತ್ಥಳಿಗಳ ಜೊತೆಗೆ ಇಟ್ಟು, ಪೂಜೆ ಮಾಡೋಣ. ರಾಯಣ್ಣನ ಪುತ್ಥಳಿಯನ್ನು ಮಾತ್ರ ಯಾವುದೇ ಕಾರಣಕ್ಕೂ ತೆರವು ಮಾಡುವುದಿಲ್ಲ ಎಂಬುದಾಗಿ ಮಾತುಕತೆಗೆ ಬಂದಿದ್ದ ತಾಪಂ ಇಒ ರಮೇಶ ಇತರೆ ಅಧಿಕಾರಿಗಳಿಗೆ ಕುರುಬ ಸಮಾಜದ ಪರ ಸ್ಪಷ್ಟ ಸಂದೇಶ ನೀಡಿದರು.

ಜಿಪಂ ಉಪ ಕಾರ್ಯದರ್ಶಿ ಕೃಷ್ಣ ನಾಯ್ಕ, ಡಿವೈಎಸ್ಪಿ ಬಿ.ಎಸ್.ಬಸವರಾಜ, ವೃತ್ತ ನಿರೀಕ್ಷಕ ದೇವಾನಂದ, ಪಿಎಸ್ಐ ಪ್ರಭು ಕೆಳಗಿನಮನಿ, ಪ್ರವೀಣ, ರಾಜಸ್ವ ನಿರೀಕ್ಷಕ ಆನಂದ್‌, ಪಿಡಿಒ ಬೀರೇಶ, ಗ್ರಾಮ ಲೆಕ್ಕಾಧಿಕಾರಿ ಶಿವಶಂಕರ ಇತರರಿದ್ದರು.ಶಾಂತಿಗೆ ಧಕ್ಕೆ ತಂದರೆ ಕ್ರಮ

ಎರಡೂ ಸಮುದಾಯಗಳ ಮುಖಂಡರ ಜೊತೆಗೆ ಮಾತುಕತೆ ನಡೆಸಿದ್ದೇವೆ. ಶಾಂತಿ, ಸಾಮರಸ್ಯಕ್ಕೆ ಯಾರೇ ಭಂಗ ತಂದರೂ, ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.

ವಿಜಯಕುಮಾರ ಸಂತೋಷ, ಎಎಸ್ಪಿಮುಖಂಡರ ಜೊತೆಗಿನ ಅಧಿಕಾರಿಗಳ ಸಂಧಾನ ಸಭೆ ವಿಫಲ

ಗ್ರಾಪಂ ಕಚೇರಿಯಲ್ಲಿ ನಡೆದ 2ನೇ ಹಂತದ ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ.ಸಂತೋಷ್, ಉಪ ವಿಭಾಗಾಧಿಕಾರಿ ಎನ್.ದುರ್ಗಾಶ್ರೀ ಸಮ್ಮುಖದಲ್ಲಿ ನಡೆಸಿದ ಎರಡೂ ಸಮುದಾಯಗಳ ಮುಖಂಡರ ಸಂಧಾನ ಸಭೆಯು ವಿಫಲವಾಯಿತು. ಸದ್ಯಕ್ಕೆ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ವಾತಾವರಣ ಇದೆ. ಮುನ್ನೆಚ್ಚರಿಕೆಯಾಗಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಭಾನುವಳ್ಳಿ ಗ್ರಾಮದಲ್ಲಿ ಜಿಲ್ಲಾ ಸಶಸ್ರ್ರ ಮೀಸಲು ಪಡೆಯ ತುಕಡಿ ನಿಯೋಜಿಸಲಾಗಿದೆ. ಅಧಿಕಾರಿ, ಸಿಬ್ಬಂದಿ ಗ್ರಾಮದಲ್ಲಿ ಗಸ್ತು ಶುರು ಮಾಡಿದ್ದಾರೆ. ಮಂಗಳವಾರ ರಾತ್ರಿಯೂ ಅಧಿಕಾರಿಗಳು, ಪೊಲೀಸ್‌ ಸಿಬ್ಬಂದಿ ಗಸ್ತು ಮುಂದುವರಿಸಿದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ