ಪುತ್ತೂರು: ವಿಶೇಷಚೇತನರ ಫಿಸಿಯೋಥೆರಫಿ ಕಟ್ಟಡ ನಿರ್ಮಾಣ ಸ್ಥಳದ ಬಗ್ಗೆ ಆಕ್ಷೇಪ

KannadaprabhaNewsNetwork | Published : Feb 22, 2024 1:46 AM

ಸಾರಾಂಶ

ಕಟ್ಟಡ ನಿರ್ಮಾಣ ಜಾಗ ಬದಲಾಯಿಸುವ ಸಂಬಂಧ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವ ಮೊದಲು ಶಾಲೆಯಲ್ಲಿ ಎಸ್.ಡಿ.ಎಂ.ಸಿ. ಹಾಗೂ ಶಾಲಾ ಪೋಷಕರ ನೇತೃತ್ವದಲ್ಲಿ ತುರ್ತು ಸಭೆಯನ್ನು ನಡೆಸಲಾಯಿತು.

ಕನ್ನಡಪ್ರಭವಾರ್ತೆ ಪುತ್ತೂರು

ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಮೀಪದಲ್ಲರುವ ನೆಲ್ಲಿಕಟ್ಟೆ ಸರ್ಕಾರಿ ಹಿ.ಪ್ರಾ ಶಾಲೆಯ ವಠಾರದಲ್ಲಿ ಶಾಲಾ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಕ್ಷೇತ್ರ ಸಂಪನ್ಮೂಲ ಕೇಂದ್ರದ ನೂತನ ವಿಶೇಷ ಚೇತನ ಮಕ್ಕಳ ಫಿಸಿಯೋಥೆರಪಿ ಕೇಂದ್ರ (ವಿಶೇಷ ಚಿಣ್ಣರಲೋಕ- ಸಿದ್ಧತಾ ಕೇಂದ್ರ) ಕಟ್ಟಡ ನಿರ್ಮಾಣದ ಜಾಗದ ಬಗ್ಗೆ ಇದೀಗ ವಿವಾದಕ್ಕೆ ಕಾರಣವಾಗಿದೆ. ನೆಲ್ಲಿಕಟ್ಟೆ ಶಾಲೆಯ ಹಿಂಭಾಗದಲ್ಲಿ ಈಗಾಗಲೇ ವಿಶೇಷ ಚೇತನ ಮಕ್ಕಳ ಕೇಂದ್ರವು ಸಣ್ಣ ಕೊಠಡಿಯೊಂದರಲ್ಲಿ ನಡೆಯುತ್ತಿದ್ದು, ವಾರದಲ್ಲಿ ೨ ದಿನಗಳ ಕಲಿಕಾ ವ್ಯವಸ್ಥೆ ಇಲ್ಲಿ ನಡೆಯುತ್ತಿತ್ತು. ೩೫ ವಿಶೇಷ ಚೇತನ ಮಕ್ಕಳು ಇಲ್ಲಿಯ ಕಲಿಕಾ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಇದರ ಪಕ್ಕದಲ್ಲಿ ಶಾಸಕರ ಅನುದಾನದಲ್ಲಿ ಇದೀಗ ವಿಶೇಷ ಚಿಣ್ಣರ ಲೋಕ ಸಿದ್ಧತಾ ಕೇಂದ್ರದ ನೂತನ ಕಟ್ಟಡದ ಕಾಮಗಾರಿಯನ್ನು ಆರಂಭಿಸಲಾಗಿದೆ.

ಬುಧವಾರ ಬೆಳಗ್ಗೆ ಪುತ್ತೂರು ನಗರ ಸಭಾ ಸದಸ್ಯರು, ಪುರಸಭಾ ಮಾಜಿ ಅಧ್ಯಕ್ಷರು, ನೆಲ್ಲಿಕಟ್ಟೆ ಮಿತ್ರ ಮಂಡಲ ಶಾಲಾ ಎಸ್‌ಡಿಎಂಸಿ ಹಾಗೂ ಸ್ಥಳೀಯರು ಈಗಾಗಲೇ ಉದ್ದೇಶಿಸಿರುವ ಜಾಗದಲ್ಲಿ ಕಟ್ಟಡ ನಿರ್ಮಿಸುವುದಕ್ಕೆ ಅಧಿಕಾರಿಗಳಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಹಾಗೂ ತಾ.ಪಂ. ನಿರ್ವಹಣಾಧಿಕಾರಿ ನವೀನ್ ಭಂಡಾರಿ ಅವರಲ್ಲಿ ನಗರಸಭಾ ಸದಸ್ಯ ರಮೇಶ್ ರೈ, ಮಾಜಿ ಸದಸ್ಯ ರಾಜೇಶ್ ಬನ್ನೂರು, ನೆಲ್ಲಿಕಟ್ಟೆ ಮಿತ್ರ ಮಂಡಲ, ಶಾಲಾ ಎಸ್‌ಡಿಎಂಸಿ, ಪೋಷಕರು, ಹಿರಿಯ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಈಗಾಗಲೇ ಕಾಮಗಾರಿ ಪ್ರಾರಂಭಗೊಂಡಿರುವ ಜಾಗದಲ್ಲಿ ಕಟ್ಟಡ ನಿರ್ಮಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಶೇಷಚೇತನರ ಫಿಸಿಯೋತೆರಫಿ ಕೇಂದ್ರಕ್ಕೆ ಕಟ್ಟಡವನ್ನು ನಿರ್ಮಾಣ ಮಾಡುವುದು ಉತ್ತಮ ಉದ್ದೇಶವಾಗಿದೆ. ಅದು ಆಗಲೇಬೇಕು. ಇದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಕಟ್ಟಡ ನಿರ್ಮಾಣದ ಜಾಗ ಸೂಕ್ತವಲ್ಲ. ನೆಲ್ಲಿಕಟ್ಟೆ ಶಾಲೆಗೆ ಸೇರಿದ ವಿಶಾಲವಾಗಿರುವ ಮೂರು ಎಕರೆ ಜಾಗದಲ್ಲಿ ಅಲ್ಲಲ್ಲಿ ಕಟ್ಟಡ ನಿರ್ಮಾಣ ಮಾಡುವುದು ಸರಿಯಲ್ಲ. ಹೀಗಾಗಿ ನೂತನ ಕಟ್ಟಡವನ್ನು ಎಲ್ಲ ರೀತಿಯಲ್ಲಿಯೂ ಅನುಕೂಲವಾಗುವಂತೆ ಶಾಲಾ ಆವರಣದ ಹೊರಭಾಗದಲ್ಲಿ ನಿರ್ಮಿಸಬೇಕು ಎಂದು ಅವರು ಅಧಿಕಾರಿಗಳಲ್ಲಿ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಮಾತುಕತೆ ನಡೆಸಿದರು.ಎಸ್‌ಡಿಎಂಸಿ ತುರ್ತು ಸಭೆ: ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವ ಮೊದಲು ಶಾಲೆಯಲ್ಲಿ ಎಸ್.ಡಿ.ಎಂ.ಸಿ. ಹಾಗೂ ಶಾಲಾ ಪೋಷಕರ ನೇತೃತ್ವದಲ್ಲಿ ತುರ್ತು ಸಭೆಯನ್ನು ನಡೆಸಲಾಯಿತು. ನಗರಸಭೆ ಸದಸ್ಯ ರಮೇಶ್ ರೈ, ಪುರಸಭೆ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ಸಭೆಯನ್ನುದ್ದೇಶಿಸಿ ಮಾತನಾಡಿದರು. ನೆಲ್ಲಿಕಟ್ಟೆ ಮಿತ್ರಮಂಡಲದ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ನೆಲ್ಲಿಕಟ್ಟೆ, ಹಳೆ ವಿದ್ಯಾರ್ಥಿ, ಮಿತ್ರಮಂಡಲದ ಕಾರ್ಯದರ್ಶಿ ರೋಹಿತ್ ಕುಮಾರ್, ಪೋಷಕರಾದ ಶೇಖರ ಬ್ರಹ್ಮನಗರ, ಹರೀಶ್ ಬ್ರಹ್ಮನಗರ, ಸ್ಥಳೀಯರಾದ ಗೌತಮ್ ರಾವ್, ನಗರ ಕಾಂಗ್ರೆಸ್ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಮಿತ್ರಮಂಡಲದ ಶಶಿಕುಮಾರ್, ಉಲ್ಲಾಸ ಪೈ ಮತ್ತಿತರರು ಉಪಸ್ಥಿತರಿದ್ದರು.

Share this article