ಪುತ್ತೂರು: ರಾಜ್ಯ ಸರಕಾರ ರೈತರಿಗೆ ಗೊಬ್ಬರ ಹಾಗೂ ಬಿತ್ತನೆ ಬೀಜಗಳನ್ನು ಪೂರೈಸಿ ರೈತರ ಸಮಸ್ಯೆಯನ್ನು ನಿವಾರಿಸಿದ್ದು, ಕೆಲವೇ ತಾಲೂಕುಗಳಲ್ಲಿದ್ದ ಕೃಷಿ ಭಾಗ್ಯ ಯೋಜನೆಯನ್ನು ರಾಜ್ಯದ ೨೨೪ ವಿಧಾನಸಭಾ ಕ್ಷೇತ್ರಗಳಿಗೂ ವಿಸ್ತರಿಸಿದೆ. ಕರ್ನಾಟಕದ ಕೃಷಿ ಈಗ ಜಗತ್ತಿನ ಗಮನ ಸೆಳೆದಿದ್ದು, ದೇಶದಲ್ಲೇ ನಂಬರ್ ವನ್ ಕೃಷಿ ಎಂಬ ಪುರಸ್ಕಾರವನ್ನು ಕೇಂದ್ರದಿಂದ ಪಡೆದುಕೊಂಡಿದೆ ಎಂದು ರಾಜ್ಯ ಕೃಷಿ ಸಚಿವ ಚೆಲುವರಾಯ ಸ್ವಾಮಿ ಹೇಳಿದರು.ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಬೆಂಗಳೂರು, ಜಿಲ್ಲಾ ಕೃಷಿಕ ಸಮಾಜ ದಕ್ಷಿಣ ಕನ್ನಡ ಇವರ ಸಾರಥ್ಯದಲ್ಲಿ ಮೇಳ ನಡೆಯುತ್ತಿದ್ದು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಸುದ್ದಿ ಅರಿವು ಕೇಂದ್ರ, ರೈತ ಕುಡ್ಲ ಪ್ರತಿಷ್ಠಾನ ಇವುಗಳ ಸಹಯೋಗದಲ್ಲಿ ಜ.೧೦ರಿಂದ ೧೨ರ ತನಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ ನಡೆಯುವ ೩ ದಿನಗಳ ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ-ಸಸ್ಯಮೇಳವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಪಂಜಿಗುಡ್ಡೆ ಈಶ್ವರ ಭಟ್ ಪುತ್ತೂರು, ಕಾಂತಪ್ಪ ಪೂಜಾರಿ ಬೆಳ್ತಂಗಡಿ, ಪ್ರತಿಭಾ ಹೆಗ್ಡೆ ಮಂಗಳೂರು, ಪ್ರೇಮನಾಥ ಶೆಟ್ಟಿ ಬಂಟ್ವಾಳ, ಅರವಿಂದ ಮುಳ್ಳಂಕೊಚ್ಚಿ ಕಡಬ, ಪ್ರಮಿಳಾ ಎಸ್. ಶೆಟ್ಟಿ ಮೂಲ್ಕಿ, ಜಿ.ಟಿ. ರಾಜಾರಾಂ ಭಟ್ ಉಳ್ಳಾಲ, ಡಿ.ಎನ್. ಚಂದ್ರಶೇಖರ್ ಸುಳ್ಯ, ನಾಗಪ್ಪ ಪೂಜಾರಿ ಮೂಡುಬಿದಿರೆ ಅವರಿಗೆ ಅತ್ಯುತ್ತಮ ಕೃಷಿ ಸಾಧಕ ಪುರಸ್ಕಾರ ಹಾಗೂ ವೆಂಕಪ್ಪ ಜಿ. ಗೋಳ್ತಮಜಲು ಬಂಟ್ವಾಳ, ಶೀನಪ್ಪ ಪೂಜಾರಿ ಹೊಸಮಠ ಕಡಬ, ಲಿಂಗಪ್ಪ ಮಡಿವಾಳ ಬೆಳ್ತಂಗಡಿ, ತೀರ್ಥರಾಮ ಬೈತಡ್ಕ ಸುಳ್ಯ, ಮೋಹನದಾಸ್ ಕಾಮತ್ ಪುತ್ತೂರು ಅವರಿಗೆ ಅತ್ಯುತ್ತಮ ಕೃಷಿ ಕೂಲಿ ಕಾರ್ಮಿಕ ಪುರಸ್ಕಾರ ನೀಡಿ ಗೌರವಿಸಲಾಯಿತು. ಕೃಷಿ ಸಲಕರಣೆ ಉತ್ಪಾದಕ ಉದ್ಯಮಿ ಪುರಸ್ಕಾರವನ್ನು ಕೇಶವ ಗೌಡ ಅಮೈಗುತ್ತು, ಕೆ.ಪಿ. ಮಹಮ್ಮದ್ ಸಾದಿಕ್, ಪುರುಷೋತ್ತಮ ಬಿ. ಅವರಿಗೆ ನೀಡಿ ಪುರಸ್ಕರಿಸಲಾಯಿತು. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕರ್ನಾಟಕ ರಾಜ್ಯ ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹದೇವಪ್ಪ, ದ.ಕ. ಜಿಲ್ಲಾ ಕೃಷಿ ಸಮಾಜದ ಅಧ್ಯಕ್ಷ ವಿಜಯ ಕುಮಾರ ರೈ ಕೋರಂಗ, ಪುತ್ತೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಕರ್ನಾಟಕ ಕೃಷಿಕ ಸಮಾಜದ ನಿಕಟಪೂರ್ವ ರಾಜ್ಯಾಧ್ಯಕ್ಷ ಮಂಜುನಾಥ ಗೌಡ ಎಸ್.ಆರ್., ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ರಾಜ್ಯ ಬೀಜ ಮತ್ತು ಸಾವಯವ ನಿಗಮದ ಅಧ್ಯಕ್ಷೆ ಲಾವಣ್ಯ ಬಳ್ಳಾಲ್, ದ.ಕ. ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ಚಂದ್ರ ಕೋಲ್ಚಾರ್, ಕೃಷಿ ಇಲಾಖೆ ಅಧಿಕಾರಿಗಳು, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷರು ಉಪಸ್ಥಿತರಿದ್ದರು. ಕೃಷಿ ಮೇಳ ಸಮಿತಿ ಕಾರ್ಯಾಧ್ಯಕ್ಷ ಪದ್ಮನಾಭ ರೈ ಕಲ್ಲಡ್ಕ ಸ್ವಾಗತಿಸಿದರು.