ಕನ್ನಡಪ್ರಭ ವಾರ್ತೆ ಪುತ್ತೂರು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ವತಿಯಿಂದ ಸಂಘದ ಸದಸ್ಯರಾದ ಪತ್ರಕರ್ತರಿಗೆ ವಾಹನಕ್ಕೆ ಅಳವಡಿಸುವ ಸ್ಟಿಕ್ಕರ್ ವಿತರಣಾ ಕಾರ್ಯಕ್ರಮ ಶನಿವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪುತ್ತೂರು ನಗರ ಠಾಣೆಯ ಎಸ್‌ಐ ಆಂಜನೇಯ ರೆಡ್ಡಿ ಮಾತನಾಡಿ, ಪ್ರತಿಯೊಂದು ಇಲಾಖೆಯಲ್ಲಿಯೂ ಅವರದ್ದೇ ಆಗಿರುವ ಕರ್ತವ್ಯ ಧರ್ಮವಿದೆ. ಪತ್ರಿಕಾ ಮಾಧ್ಯಮವೂ ಇದರಿಂದ ಹೊರತಲ್ಲ. ಸಮಾಜವನ್ನು ತಿದ್ದುವ, ಸಾಮಾಜಿಕ ಸೌಹಾರ್ದತೆ ಬೆಳೆಸುವ ಹಾಗೂ ಜನಜೀವನ ಉತ್ತಮ ಪಡಿಸುವ ಜೊತೆಗೆ ಜನರ ನಡುವೆ ಬಾಂಧವ್ಯ ಮೂಡಿಸುವ ಕೆಲಸವನ್ನು ಪತ್ರಕರ್ತರು ಮಾಡಬೇಕಾಗಿದೆ. ಇದು ಪತ್ರಿಕಾ ಧರ್ಮವಾಗಿದ್ದು, ಪತ್ರಕರ್ತರು ಯಾವತ್ತೂ ಪತ್ರಿಕಾ ಧರ್ಮದ ಚೌಕಟ್ಟು ಬಿಟ್ಟು ಹೋಗಬಾರದು. ಪತ್ರಿಕಾ ಮಾಧ್ಯಮಗಳಿಗೆ ವಿಶೇಷವಾದ ಸ್ಥಾನವಿದೆ. ಪತ್ರಕರ್ತರು ಸಮಾಜದಲ್ಲಿನ ಉತ್ತಮ ಕೆಲಸಗಳನ್ನು ಹೆಚ್ಚಾಗಿ ಬಿಂಬಿಸುವ ಕೆಲಸ ನಡೆಸಬೇಕು. ಪತ್ರಿಕಾ ಮಾಧ್ಯಮ ಹಾಗೂ ಪೊಲೀಸ್ ಇಲಾಖೆಯದ್ದು ಸಮಾಜಸೇವೆಯಾಗಿದ್ದು, ಆದರ್ಶವಾಗಿ ಬದುಕುತ್ತಿರುವ ಮಂದಿಯನ್ನು ಸಮಾಜಕ್ಕೆ ಪರಿಚಯಿಸುವ ಕೆಲಸ ಹೆಚ್ಚಾಗಬೇಕು ಎಂದು ಹೇಳಿದರು.ಸಂಚಾರ ಪೊಲೀಸ್ ಠಾಣೆಯ ಎಸ್‌ಐ ಉದಯರವಿ ಮಾತನಾಡಿ, ಪತ್ರಿಕಾ ಮಾಧ್ಯಮ ಒಳ್ಳೆಯತನದೊಂದಿಗೆ ಶಕ್ತಿ ಪಡೆದುಕೊಂಡು ಬಂದ ಪ್ರಜಾಪ್ರಭುತ್ವದ ಅಂಗವಾಗಿದೆ. ಆದರೆ ಇಂದು ಕೆಲ ಸಾಮಾಜಿಕ ಜಾಲತಾಣಗಳಿಂದ ಸಮಾಜದಲ್ಲಿ ಅಶಾಂತಿ ಹುಟ್ಟಿಸುವ ಕೆಲಸಗಳೂ ನಡೆಯುತ್ತಿವೆ. ಮಾಧ್ಯಮಗಳಿಂದ ಯಾವತ್ತಿಗೂ ಸಮಾಜದಲ್ಲಿ ಬೆಂಕಿ ಹಬ್ಬಿಸುವ ಹಾಗೂ ಅಶಾಂತಿ ಸೃಷ್ಟಿಸುವ ಕೆಲಸ ನಡೆಯಬಾರದು. ಪತ್ರಕರ್ತರಿಂದ ಸಮಾಜಮುಖಿ ಕೆಲಸಗಳಾಗಲಿ ಎಂದು ಹೇಳಿದರು.
ಮಹಿಳಾ ಠಾಣೆಯ ಎಸೈ ಸವಿತಾ ಅವರು ಮಾತನಾಡಿ, ಸಮಾಜವನ್ನು ದಿಕ್ಕುತಪ್ಪಿಸುತ್ತಿರುವ ಸೈಬರ್ ಕ್ರೈಂ ಇಂದು ಹೆಚ್ಚಾಗುತ್ತಿದೆ. ಮಹಿಳಾ ದೌರ್ಜನ್ಯ ಪ್ರಕರಣಗಳು ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತಿವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪುತ್ತೂರು ಘಟಕದ ಅಧ್ಯಕ್ಷ ಸಿದ್ದೀಕ್ ನೀರಾಜೆ ವಹಿಸಿದ್ದರು. ಸಂಘದ ಸದಸ್ಯ ಸುಧಾಕರ್ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಶಶಿಧರ್ ರೈ ಕುತ್ಯಾಳ ವಂದಿಸಿದರು. ಖಜಾಂಜಿ ಸಂಶುದ್ದೀನ್ ಸಂಪ್ಯ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಪುತ್ತೂರು ಘಟಕದ ಸದಸ್ಯರಾದ ೩೬ ಮಂದಿ ಪತ್ರಕರ್ತರಿಗೆ ಪ್ರೆಸ್ ಸ್ಟಿಕ್ಕರ್ ವಿತರಣೆ ಮಾಡಲಾಯಿತು.