ಪುತ್ತೂರು ನವತೇಜ ಟ್ರಸ್ಟ್ ನೇತೃತ್ವದಲ್ಲಿ ಮುಳಿಯ ಮ್ಯಾನೇಜ್ಡ್ ಫಾರ್ಮ್ ಲ್ಯಾಂಡ್ ಪ್ರಾಯೋಜಕತ್ವದಲ್ಲಿ ಹಲಸು ಮತ್ತು ಹಣ್ಣುಗಳ ಮೇಳವು ಹಣ್ಣುಗಳ ಪ್ರದರ್ಶನ, ಮೌಲ್ಯವರ್ಧಿತ ಉತ್ಪನ್ನ, ಕೃಷಿ ಪರಿಕರಗಳ ಮಳಿಗೆಗಳೊಂದಿಗೆ 8ನೇ ಆವರ್ತಿಯ ಜೂ. 5ರಿಂದ 7ರ ವರೆಗೆ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಅನಂತಪ್ರಸಾದ್ ನೈತ್ತಡ್ಕ ತಿಳಿಸಿದ್ದಾರೆ.
ಪುತ್ತೂರು: ಪುತ್ತೂರು ನವತೇಜ ಟ್ರಸ್ಟ್ ನೇತೃತ್ವದಲ್ಲಿ ಮುಳಿಯ ಮ್ಯಾನೇಜ್ಡ್ ಫಾರ್ಮ್ ಲ್ಯಾಂಡ್ ಪ್ರಾಯೋಜಕತ್ವದಲ್ಲಿ ಹಲಸು ಮತ್ತು ಹಣ್ಣುಗಳ ಮೇಳವು ಹಣ್ಣುಗಳ ಪ್ರದರ್ಶನ, ಮೌಲ್ಯವರ್ಧಿತ ಉತ್ಪನ್ನ, ಕೃಷಿ ಪರಿಕರಗಳ ಮಳಿಗೆಗಳೊಂದಿಗೆ 8ನೇ ಆವರ್ತಿಯ ಜೂ. 5ರಿಂದ 7ರ ವರೆಗೆ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಅನಂತಪ್ರಸಾದ್ ನೈತ್ತಡ್ಕ ತಿಳಿಸಿದ್ದಾರೆ. ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಮೇಳದಲ್ಲಿ ನರ್ಸರಿ ಗಿಡಗಳು, ಹಣ್ಣಗಳು, ಕೃಷಿ ಪ್ರಧಾನ ಪರಿಕರಗಳು, ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳು, ಹಲಸಿನ 80 ಕ್ಕೂ ಅಧಿಕ ಬಗೆಯ ಆಹಾರ ಉತ್ಪನ್ನಗಳ ಮಳಿಗೆಗಳು, ಗೇರು ಹಣ್ಣಿನ ಉತ್ಪನ್ನಗಳು, 25 ಕ್ಕೂ ಅಧಿಕ ಮಾವಿನ ತಳಿಗಳು, ವಿದೇಶಿ ಹಣ್ಣುಗಳ ಪ್ರದರ್ಶನವಿರುತ್ತದೆ ಎಂದರು.
5ರಂದು ಬೆಳಗ್ಗೆ 9.30ಕ್ಕೆ ಪುತ್ತೂರಿನ ವೈದ್ಯ ಡಾ.ಕೆ.ರಮೇಶ್ ಭಟ್ ಮಳಿಗೆಗಳನ್ನು ಉದ್ಘಾಟಿಸಲಿದ್ದು, ಉದ್ಯಮಿ ರೂಪೇಶ್ ಶೇಟ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಂಜೆ 4ಕ್ಕೆ ನವತೇಜ ಟ್ರಸ್ಟ್ ಅಧ್ಯಕ್ಷ ಅನಂತಪ್ರಸಾದ್ ನೈತ್ತಡ್ಕ ಅವರ ಅಧ್ಯಕ್ಷತೆಯಲ್ಲಿ ಮೇಳವನ್ನು ಕ್ಯಾಂಪ್ಕೋ ನಿರ್ದೇಶಕ ಮುರಳಿಕೃಷ್ಣ ಚಳ್ಳಂಗಾರು ಉದ್ಘಾಟಿಸಲಿದ್ದಾರೆ. ಪರಿಸರ-ಜಲ ತಜ್ಞ ಶ್ರೀಪಡ್ರೆ ದಿಕ್ಸೂಚಿ ಭಾಷಣ ಮಾಡಲಿದ್ದು, ಪುತ್ತೂರು ಗೇರು ಸಂಶೋಧನಾಲಯ ನಿರ್ದೇಶನಾಲಯದ ವಿಜ್ಞಾನಿ ಡಾ. ವೀಣಾ ಶುಭಹಾರೈಸಲಿದ್ದಾರೆ. ಈ ಸಂದರ್ಭದಲ್ಲಿ ಡಾ. ನರೇಂದ್ರ ರೈ ದೇರ್ಲ ಅವರ ‘ಹಲಸಿನಲ್ಲಿ ಹಸಿರು ಕ್ರಾಂತಿ’ ಕೃತಿ ಬಿಡುಗಡೆಗೊಳ್ಳಲಿದೆ.6ರಂದು ಬೆಳಗ್ಗೆ 11ಕ್ಕೆ ಹಣ್ಣುಗಳೊಂದಿಗೆ ಮಾತುಕತೆ ವಿಚಾರಗೋಷ್ಠಿ ನಡೆಯಲಿದ್ದು, ಮುಳಿಯ ಮ್ಯಾನೇಜ್ಡ್ ಫಾರ್ಮ್ ಲ್ಯಾಂಡ್ ಮುಖ್ಯಸ್ಥ ಕೇಶವ ಪ್ರಸಾದ್ ಮುಳಿಯ, ಕೊಕ್ಕೋ-ಕಾಫಿ ಬೆಳೆಗಾರ ಚಂದ್ರಶೇಖರ್ ತಾಳ್ತಜೆ, ಮೂಲ್ಕಿಯ ಗೇರು ಹಣ್ಣಿನ ಮೌಲ್ಯವರ್ಧಕ ಕೆನ್ಯೂಟ್ ಅರಾನ್ಹಾ ಅವರು ವಿಷಯ ಪ್ರಸ್ತುತಿ ಮಾಡಲಿದ್ದಾರೆ. ಜೂ. 7ರಂದು ಬೆಳಗ್ಗೆ 10ಕ್ಕೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಹಲಸು-ಮಾವು-ಕೃಷಿ ರಸಪ್ರಶ್ನೆ ನಡೆಯಲಿದ್ದು, ಬಳಿಕ ಹಲಸು ವೈವಿಧ್ಯ-ವಿವಿಧ ಸ್ಪರ್ಧೆಗಳು ನಡೆಯಲಿದೆ.
ಸಂಜೆ 4ಕ್ಕೆ ಕೇಶವ ಪ್ರಸಾದ್ ಮುಳಿಯ ನೇತೃತ್ವದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ನವತೇಜ ಟ್ರಸ್ಟಿನ ವೇಣುಗೋಪಾಲ್ ಅವರು ಸಮಾಪನ ವರದಿ ನೀಡಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಜೇಸಿಐ ವಲಯ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಧಾಕರ ಸುವರ್ಣ, ಪುತ್ತೂರು ಗ್ರಾಮಜನ್ಯ ರೈತೋತ್ಪಾದಕ ಸಂಸ್ಥೆಯ ನಿರ್ದೇಶಕ ನಿರಂಜನ್ ಪೋಳ್ಯ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ನವತೇಜ ನರ್ಸರಿಯ ಮಾಲಕ ವೇಣುಗೋಪಾಲ್, ನವತೇಜ ಟ್ರಸ್ಟ್ ನ ಟ್ರಸ್ಟಿ ಸುಹಾಸ ಮರಿಕೆ, ಮುಳಿಯ ಮ್ಯಾನೇಜ್ಡ್ ಫಾರ್ಮ್ ಲ್ಯಾಂಡ್‌ನ ರಜತ್ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.