ಪುತ್ತೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ಜಾಗವನ್ನು ಕಟ್ ಮಾಡಿ ಕೃಷಿಯೇತರ ವಿಚಾರಗಳಿಗೆ ಬಳಕೆ ಮಾಡಿಕೊಂಡಿರುವ ಸುಮಾರು ೩೦ ಸಾವಿರಕ್ಕೂ ಹೆಚ್ಚು ಮಂದಿಗೆ ಪ್ರಯೋಜನವಾಗುವಂತೆ ರಾಜ್ಯ ಸರ್ಕಾರ ಇದೀಗ ಅನಧಿಕೃತ ಬಡಾವಣೆಗಳನ್ನು ಸಕ್ರಮೀಕರಿಸುವ ಮೂಲಕ ಕಟ್ ಕನ್ವರ್ಷನ್ ಸಮಸ್ಯೆಗೆ ಪರಿಹಾರ ನೀಡುವ ಮಹತ್ವದ ಕೆಲಸ ಮಾಡಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಆದರೆ ೨೦೨೪ದ ನಂತರದ ಅಕ್ರಮ ಬಡಾವಣೆಗಳಿಗೆ ಈ ಸಕ್ರಮ ವ್ಯವಸ್ಥೆ ಇಲ್ಲ. ಇನ್ನು ಮುಂದೆ ಮಾಡುವ ಯಾವುದೇ ಅನಧಿಕೃತ ಬಡಾವಣೆಗಳಿಗೂ ಸಕ್ರಮದ ಅವಕಾಶವನ್ನು ಪ್ರಸ್ತುತ ನಿರಾಕರಣೆ ಮಾಡಲಾಗಿದೆ. ಇದು ರಾಜ್ಯ ಸರ್ಕಾರದ ಆದೇಶವಾಗಿದೆ ಎಂದು ಅವರು ತಿಳಿಸಿದರು.
ಧಾರ್ಮಿಕ ತಾಣಗಳಿಗೆ ಪಹಣಿ ಚಿಂತನೆ:ಪುತ್ತೂರು ತಾಲೂಕಿನ ಧಾರ್ಮಿಕ ತಾಣಗಳು ಬಹುತೇಕ ಸರ್ಕಾರಿ ಜಾಗದಲ್ಲಿದ್ದು, ಇದಕ್ಕೆ ಯಾವುದೇ ಅನುದಾನ ನೀಡಲು ಅವಕಾಶ ಇಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ತಾಲೂಕಿನ ೯ ಧಾರ್ಮಿಕ ತಾಣಗಳಿಗೆ ಜಾಗ ಮಂಜೂರು ಮಾಡಿ ದೇವರ ಹೆಸರಲ್ಲಿಯೇ ಪಹಣಿಪತ್ರಗಳನ್ನು ತಯಾರಿಸುವ ಕಾರ್ಯ ನಡೆಯುತ್ತಿದೆ. ತಾಲೂಕಿನ ದೈವಗಳ ಗುಡಿ, ಭಜನಾಮಂದಿರ, ದೇವಸ್ಥಾನ, ಚರ್ಚು, ಮಸೀದಿ ಸೇರಿದಂತೆ ಎಲ್ಲಾ ಧಾರ್ಮಿಕ ತಾಣಗಳು ಸರ್ಕಾರಿ ಜಾಗದಲ್ಲಿದ್ದರೆ ಅಂತಹ ಧಾರ್ಮಿಕ ತಾಣಗಳಿಗೆ ಸ್ವಂತ ನೆಲೆ ಕಲ್ಪಿಸುವ ಚಿಂತನೆ ಇದರ ಹಿಂದೆ ಅಡಗಿದೆ. ಪ್ರಸ್ತುತ ಪ್ರಾಯೋಗಿಕ ನೆಲೆಯಲ್ಲಿ ಈ ಕಾರ್ಯ ನಡೆಯುತ್ತಿದೆ. ಮುಂದೆ ಎಲ್ಲಾ ಧಾರ್ಮಿಕ ತಾಣಗಳಿಗೂ ಇದು ಅನ್ವಯವಾಗಲಿದೆ ಎಂದರು.ಪುಡಾ ಅಧ್ಯಕ್ಷ ಅಮಳ ರಾಮಚಂದ್ರ, ಸದಸ್ಯರಾದ ನಿಹಾಲ್ ಶೆಟ್ಟಿ, ಅನ್ವರ್ ಖಾಸಿಂ, ಲ್ಯಾನ್ಸಿ ಮಸ್ಕರೇನಸ್, ಗ್ಯಾರಂಟಿಯೋಜನೆಯ ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೆ.ಪಿ.ಆಳ್ವ ಇದ್ದರು.