ಪುತ್ತೂರು: ಮೈಸೂರಿನಲ್ಲಿ ನಡೆಯುವ ದಸರಾ ಮಹೋತ್ಸವದಲ್ಲಿ ಈ ಬಾರಿ ಕರಾವಳಿಯ ಕ್ರೀಡೆಯಾದ ಕಂಬಳ ನಡೆಸಬೇಕು ಮತ್ತು ಇದಕ್ಕೆ ಬೇಕಾದ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬೆಂಗಳೂರು ಕಂಬಳದ ರುವಾರಿ ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಕಳೆದ ವಾರ ಸೂಚನೆ ನೀಡಿದ್ದು, ಈ ಹಿನ್ನಲೆಯಲ್ಲಿ ಶುಕ್ರವಾರ ಮೈಸೂರಿಗೆ ತೆರಳಿದ್ದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ನಾಡದೇವತೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಆ ಬಳಿಕ ಕಂಬಳ ನಡೆಸುವ ಸ್ಥಳವನ್ನು ಪರಿವೀಕ್ಷಣೆ ಮಾಡಿದರು. ಈ ಹಿಂದೆ ಬೆಂಗಳೂರಿನಲ್ಲಿ ಕಂಬಳ ನಡೆಸುವ ಮೂಲಕ ತುಳುನಾಡಿನ ಜನಪದ ಕ್ರೀಡೆಯನ್ನು ಕನ್ನಡಿಗರಿಗೆ ವೀಕ್ಷಣೆಗೆ ಅವಕಾಶ ಮಾಡುವುದರ ಜೊತೆ ವಿಶ್ವದೆಲ್ಲಡೆ ಕಂಬಳವನ್ನು ಪರಿಚಯಿಸುವ ಕೆಲಸವನ್ನು ಶಾಸಕ ಅಶೋಕ್ ರೈ ಅವರು ಮಾಡಿದ್ದರು. ಬೆಂಗಳೂರು ಕಂಬಳ ನಡೆದ ಮಾರನೇ ವರ್ಷ ಮೈಸೂರಿನಲ್ಲಿ ಕಂಬಳ ನಡೆಸುವ ಬಗ್ಗೆ ಅಂದಿನ ಉಪ ಮುಖ್ಯಮಂತ್ರಿಯಾಗಿದ್ದ ಡಿ ಕೆ ಶಿವಕುಮಾರ್ ಅವರು ಚರ್ಚೆ ನಡೆಸಿದ್ದರು. ಇದೀಗ ಕಂಬಳ ಪ್ರೇಮಿ ಡಿ. ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿದ್ದು ಮತ್ತೆ ಮೈಸೂರಿನಲ್ಲಿ ಕಂಬಳ ನಡೆಸುವಂತೆ ಅಶೋಕ್ ರೈ ಅವರಿಗೆ ಸೂಚನೆ ನೀಡಿದ್ದು, ಕಂಬಳ ನಡೆಸಲು ಬೇಕಾದ ಎಲ್ಲಾ ಸಿದ್ದತೆಗಳನ್ನು ನಡೆಸುವಂತೆ ತಿಳಿಸಿದ್ದರು.
ಕಂಬಳ ನಡೆಸಲು ಎಕ್ರೆಗಟ್ಟಲೆ ಜಾಗ ಬೇಕಾಗಿದೆ. ಶಾಸಕ ಅಶೋಕ್ ರೈ ಅವರು ಮೈಸೂರಿನ ಸರ್ ಎಂ ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯದ ಬಳಿ ಇರುವ 20 ಎಕ್ರೆ ಜಾಗ ಮತ್ತು ಮೈಸೂರು ಜಯಲಕ್ಷ್ಮಿಪುರಂನಲ್ಲಿ ಪ್ರೀಮಿಯಂ ಸ್ಟುಡಿಯೋ ಬಳಿ ಇರುವ 17 ಎಕ್ರೆ ಜಾಗವನ್ನು ವೀಕ್ಷಣೆ ಮಾಡಲಾಗಿದೆ. ಈ ಎರಡು ಜಾಗದಲ್ಲಿ ಯಾವುದು ಸೂಕ್ತ ಎಂಬುದನ್ನು ಪರಿಗಣಿಸಿ ಅಂತಿಮಗೊಳಿಸಲಾಗುತ್ತದೆ. ಈ ಸಂದರ್ಭದಲ್ಲಿ ಕಂಬಳ ಪ್ರಮುಖರಾದ ಮುರಳೀಧರ್ ರೈ ಮಟಂತಬೆಟ್ಟು,ಹಾಗೂ ರಾಜೀವ ಶೆಟ್ಟಿ ಎಡ್ತೂರು ಉಪಸ್ಥಿತರಿದ್ದರು.
ಮೈಸೂರು ದಸರಾದಲ್ಲಿ ಮೊದಲ ಬಾರಿಗೆ ನಮ್ಮ ಕಂಬಳ ಪ್ರದರ್ಶನ ನಡೆಯಲಿದೆ. ಜಗತ್ತಿನ ವಿವಿಧ ದೇಶಗಳಿಂದ ಮೈಸೂರು ದಸರಾಗೆ ಜನ ಆಗಮಿಸುತ್ತಾರೆ. ಇಂಥಹದೊಂದು ಕಾರ್ಯಕ್ರಮದಲ್ಲಿ ಈ ಬಾರಿ ಕಂಬಳ ನಡೆಯಲಿರುವುದು ಸಂತೋಷದ ವಿಚಾರವಾಗಿದೆ. ಕಂಬಳದ ಜಾಗ ವೀಕ್ಷಣೆಗೆ ಮೊದಲು ತಾಯಿ ಚಾಮುಂಡೇಶ್ವರಿಗೆ ಪ್ರಾರ್ಥನೆ ಸಲ್ಲಿಸಿ ಮುಹೂರ್ತ ಇಟ್ಟಿದ್ದೇವೆ. ದೇವಿಯ ಅನುಗ್ರಹದಿಂದ ಕಂಬಳ ಸುಸೂತ್ರವಾಗಿ ನಡೆಯಲಿದೆ. ಎರಡು ಕಡೆ ಜಾಗ ವೀಕ್ಷಣೆ ನಡೆದಿದೆ. ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ.ಅಶೋಕ್ ರೈ ಶಾಸಕರು ಪುತ್ತೂರು