ಪುತ್ತೂರು : ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2023- 2027 ರ ಅವಧಿಯಲ್ಲಿ ಒಟ್ಟು 4,02,07,950 ಫಲಾನುಭವಿಗಳಿಗೆ ರು. 640.87 ಕೋಟಿ ಅನುದಾನ ಬಿಡುಗಡೆಯಾಗಿದೆ. ಶಕ್ತಿ ಯೋಜನೆಯಡಿಯಲ್ಲಿ ಈಗಾಗಲೇ 39963277 ಫಲಾನುಭವಿಗಳಿಗೆ ರು. 99,00,21,441 ಅನುದಾನ ಮಂಜೂರುಗೊಂಡಿದ್ದು, ಅತೀ ಶೀಘ್ರದಲ್ಲಿ ರು. 100 ಕೋಟಿ ಅನುದಾನದತ್ತ ತಲುಪಲಿದೆ ಎಂದು ಪುತ್ತೂರು ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ತಿಳಿಸಿದರು. ಅವರು ಪುತ್ತೂರು ತಾ.ಪಂ.ಸಭಾಂಗಣದಲ್ಲಿ ಗುರುವಾರ ನಡೆದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗೃಹಜ್ಯೋತಿ ಯೋಜನೆಯ ಪರಿಶೀಲನಾ ಕಾರ್ಯದ ಕುರಿತು ಮೆಸ್ಕಾಂ ಎಇಇ ರಾಜೇಶ್ ಅವರು ಸಭೆಗೆ ಮಾಹಿತಿ ನೀಡಿದರು. ಈಗಾಗಲೇ ಪರಿಶೀಲನೆ ಮಾಡಿರುವ ಮನೆಗಳು, ಬಾಕಿ ಇರುವ ಮನೆಗಳ ಮಾಹಿತಿಯನ್ನು ಪಂಚಾಯತ್ ವಾರು ಸಮಿತಿಗೆ ನೀಡುವಂತೆ ಅಧ್ಯಕ್ಷರು ತಿಳಿಸಿದರು. ಪುತ್ತೂರಿನ ನೈತಾಡಿಯ ಮನೆಯೊಂದರ ವಿದ್ಯುತ್ ಸಂಪರ್ಕ ಗೊಂದಲದ ಕುರಿತು ಸಮಿತಿ ಸದಸ್ಯ ಸಂತೋಷ್ ರೈ ಚಿಲ್ಮೆತ್ತಾರ್ ಅವರು ಸಭೆಯ ಗಮನಕ್ಕೆ ತಂದಿದ್ದು, ಅದು ಲೇಔಟ್ ಮಾದರಿಯ ನಿವೇಶನವಾಗಿದ್ದು, ಅದಕ್ಕೆ 1 ಕಿಲೋವ್ಯಾಟ್ ಗೆ 6 ಸಾವಿರ ರು. ಗಳಂತೆ ಮೊತ್ತವನ್ನು ಮೆಸ್ಕಾಂಗೆ ಪಾವತಿಸಬೇಕಾಗುತ್ತದೆ ಎಂದು ಎಇಇ ತಿಳಿಸಿದರು.ಪುತ್ತೂರು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಸ್ವಾಗತಿಸಿ, ಯೋಜನಾ ನಿರ್ದೇಶಕಿ ಶೋಭಾ ವಂದಿಸಿದರು.