ಪುತ್ತೂರು: ೨೪ರಂದು ಆದರ್ಶ ಸೊಸೈಟಿ ವಿದ್ಯಾನಿಧಿ ವಿತರಣಾ ಸಮಾರಂಭ

KannadaprabhaNewsNetwork | Published : Aug 21, 2024 12:33 AM

ಸಾರಾಂಶ

ಆ.೨೪ರಂದು ನಡೆಯುವ ಸಂಘದ ಮಹಾಸಭೆಯ ಬಳಿಕ ಈ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣಾ ಕಾರ್ಯಕ್ರಮ ಆ. ೨೪ರಂದು ದರ್ಬೆ ಪ್ರಶಾಂತ್ ಮಹಲ್ ಸನ್ನಿಧಿ ಹಾಲ್‌ನಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು ತಿಳಿಸಿದ್ದಾರೆ.

ಅವರು ಮಂಗಳವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ವಿದ್ಯಾರಶ್ಮಿ ವಿದ್ಯಾಲಯ ಸವಣೂರು ಇಲ್ಲಿನ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್. ಲೋಕೇಶ್, ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್.ಎಂ. ರಘು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಂಘವು ತನ್ನ ಸಾಮಾಜಿಕ ಕಾರ್ಯದ ಮೂಲಕ ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ ಮತ್ತು ಕಡಬ ತಾಲೂಕಿನ ಸಂಘದ ಶಾಖೆಗಳ ವ್ಯಾಪ್ತಿಯಲ್ಲಿ ಬರುವ ಆಯ್ದ ಸರ್ಕಾರಿ ಶಾಲೆಗಳಲ್ಲಿ ೮ನೇ ಮತ್ತು ೯ನೇ ತರಗತಿಯಲ್ಲಿ ಕಲಿಯುತ್ತಿರುವ ಆರ್ಥಿಕವಾಗಿ ಹಿಂದುಳಿದ ಮತ್ತು ಪ್ರತಿಭಾವಂತ ಶಾಲಾ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ೨೫೦ ವಿದ್ಯಾರ್ಥಿಗಳಿಗೆ ತಲಾ ೨ ಸಾವಿರ ರು. ನೀಡಲಾಗುವುದು. ಈ ತನಕ ಒಟ್ಟು ೨೧,೭೩,೦೦೦ ರು. ಮೊತ್ತವನ್ನು ಒಟ್ಟು ೧,೦೬೭ ವಿದ್ಯಾರ್ಥಿಗಳಿಗೆ ವಿತರಿಸುತ್ತೇವೆ. ಮಾತ್ರವಲ್ಲದೆ ಹಲವಾರು ಸಂಘ ಸಂಸ್ಥೆಗಳಿಗೆ ಆರ್ಥಿಕ ನೆರವನ್ನು ಕೂಡಾ ನೀಡಿರುತ್ತೇವೆ. ಆ.೨೪ರಂದು ನಡೆಯುವ ಸಂಘದ ಮಹಾಸಭೆಯ ಬಳಿಕ ಈ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ನಡೆಯಲಿದೆ.

ಪುತ್ತೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘವು ೨೨ ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ತನ್ನ ಸೇವೆಯನ್ನು ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ಮತ್ತು ಕಡಬ ತಾಲೂಕಿನಲ್ಲಿರುವ ೧೪ ಶಾಖೆಗಳ ಮೂಲಕ ನೀಡಿಕೊಂಡು ಬರುತ್ತಿದ್ದು, ಸದಸ್ಯರಿಗೆ ಶೇ.೧೬ ಡಿವಿಡೆಂಡ್ ಘೋಷಣೆ ಮಾಡಲಾಗುವುದು ಎಂದು ಸೀತಾರಾಮ ರೈ ತಿಳಿಸಿದರು. ಸಂಘದ ಕೇಂದ್ರ ಕಚೇರಿಗೆ ಸ್ವಂತ ಕಟ್ಟಡವನ್ನು ಹೊಂದುವ ಉದ್ದೇಶದಿಂದ ಕಡಬ ತಾಲೂಕಿನ ಸವಣೂರು ಗ್ರಾಮದಲ್ಲಿ ೦.೭೫ ಸೆಂಟ್ಸ್ ನಿವೇಶನವನ್ನು ಸಂಘದ ಹೆಸರಿನಲ್ಲಿ ಖರೀದಿಸಿದ್ದು, ಸಂಘ ೨೫ ವರ್ಷ ಪೂರೈಸುವುದರೊಳಗೆ ಕಟ್ಟಡ ನಿರ್ಮಾಣದ ಕೆಲಸ ಪೂರ್ತಿಗೊಳಿಸಿ ಲೋಕಾರ್ಪಣೆ ಮಾಡಲಾಗುವುದು. ಅಲ್ಲದೆ ೨೦೨೪-೨೫ ನೇ ಸಾಲಿನಲ್ಲಿ ಮಂಗಳೂರಿನಲ್ಲಿ ಹೊಸ ಶಾಖೆಯನ್ನು ತೆರೆಯುವ ಯೋಜನೆಯನ್ನು ರೂಪಿಸಲಾಗಿದೆ. ಸಂಘದ ಪ್ರಗತಿಯನ್ನು ಪರಿಗಣಿಸಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ೫ನೇ ಬಾರಿ ಪ್ರಶಸ್ತಿಗೆ ಭಾಜನವಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎನ್. ಸುಂದರ್ ರೈ, ನಿರ್ದೇಶಕರಾದ ಅರಿಯಡ್ಕ ಚಿಕ್ಕಪ್ಪ ನಾಕ್, ಅಶ್ವಿನ್ ಎಲ್.ಶೆಟ್ಟಿ, ಮಹಾಪ್ರಬಂಧಕ ವಸಂತ ಜಾಲಾಡಿ ಮತ್ತು ಎಜಿಎಮ್ ಸುನಾದ್‌ರಾಜ್ ಶೆಟ್ಟಿ ಹಾಜರಿದ್ದರು.

Share this article