ಕನ್ನಡಪ್ರಭವಾರ್ತೆ ಪುತ್ತೂರುಮಕ್ಕಳಲ್ಲಿನ ಆತ್ಮಸ್ಥೈರ್ಯ, ವಿಶ್ವಾಸವನ್ನು ದೃಢಪಡಿಸುವ ನಿಟ್ಟಿನಲ್ಲಿ ಕ್ರೀಡಾಕೂಟ ಬಹಳ ಸಹಕಾರಿಯಾಗಿದೆ. ಪ್ರಸ್ತುತ ಬಹಳಷ್ಟು ಪ್ರತಿಭೆಗಳು ಗ್ರಾಮೀಣ ಪ್ರದೇಶದಲ್ಲಿ ಕಣ್ಣಿಗೆ ಕಾಣದ ರೀತಿಯಲ್ಲಿವೆ. ಅಂತಹ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಿ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಬೆಳೆಸುವ ಕೆಲಸವನ್ನು ಸಂಘಟನೆಗಳು ಮಾಡಬೇಕು. ಇದರಿಂದಾಗಿ ಅವರ ಜೊತೆಗೆ ಸಮುದಾಯದ ಕೀರ್ತಿಯೂ ಹೆಚ್ಚಾಗಲಿದೆ ಎಂದು ಆದಿಚುಂಚನಗಿರಿ ಶ್ರೀ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.
ಅವರು ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಸಹಯೋಗದೊಂದಿಗೆ ಯುವ ಒಕ್ಕಲಿಗ ಗೌಡ ಸೇವಾ ಸಂಘ ಬನ್ನೂರು ವಲಯದ ಆತಿಥ್ಯದಲ್ಲಿ ಒಕ್ಕಲಿಗ ಗೌಡ ಮಹಿಳಾ ಸೇವಾ ಸಂಘ, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಪುತ್ತೂರು ಇದರ ಸಹಕಾರದೊಂದಿಗೆ ತೆಂಕಿಲ ವಿವೇಕಾನಂದ ಶಾಲೆಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಯುವ ಒಕ್ಕಲಿಗ ಗೌಡರ ತಾಲೂಕು ಮಟ್ಟದ ಯುವ ಕ್ರೀಡಾ ಸಂಭ್ರಮ - 2024 ಇದರ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.ಕ್ರೀಡಾಜ್ಯೋತಿ ಪ್ರಜ್ವಲನೆ ಮಾಡಿದ ಸಂಘದ ಗೌರವ ಸಲಹೆಗಾರರಾದ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಕ್ರೀಡೆಗೆ ಗೌಡ ಸಮುದಾಯ ಉತ್ತಮ ಕೊಡುಗೆ ನೀಡಿದೆ. ಸಜ್ಜನ ಸಮಾಜ ಯಾವ ರೀತಿಯಾಗಿ ಮೂಡಿ ಬಂದಿದೆ ಎಂಬುದನ್ನು ಇತರರಿಗೆ ತೋರಿಸಿ ಕೊಡುವ ಕೆಲಸ ಆಗಿದೆ. ಇವತ್ತು ಈ ಸಮಾಜ ಕೃಷಿ ಮತ್ತು ಋಷಿ ಪರಂಪರೆಯನ್ನು ಜೊತೆಯಲ್ಲಿ ಕೊಂಡು ಹೋಗುವ ಕೆಲಸ ಮಾಡುತ್ತಿದೆ. ಶೈಕ್ಷಣಿಕವಾಗಿ ಸಾಧಕರಾಗಿದ್ದೇವೆ. ಅದೇ ರೀತಿ ನಾಯಕತ್ವವನ್ನು ಕೂಡಾ ಬೆಳೆಸುವ ಅನಿವಾರ್ಯತೆ ಇದೆ. ಸಮಾಜದಲ್ಲಿ ನಾಯಕತ್ವ ಬೆಳೆಸಿದಾಗ ನಮ್ಮತನವನ್ನು ಉಳಿಸಲು ಮತ್ತು ಗೌರವವನ್ನು ಹೆಚ್ಚಿಸಲು ಸಾಧ್ಯ. ಇದು ಆದಾಗ ಆ ಸಮಾಜಕ್ಕೆ ಇತರ ಸಮಾಜ ಗೌರವ ಕೊಡುವ ಕೆಲಸ ಆಗುತ್ತದೆ. ಈ ಕೆಲಸವನ್ನು ಸಮುದಾಯದ ಯುವಕ, ಯುವತಿಯರು ಮಾಡಬೇಕು ಎಂದರು.
ಉದ್ಯಮಿ ಪಿ ಕೇಶವ ಗೌಡ ಅಮೈ ಅವರು ತೆಂಗಿನ ಹಿಂಗಾರವನ್ನು ಅರಳಿಸುವ ಮೂಲಕ ವೇದಿಕೆಯನ್ನು ಉದ್ಘಾಟಿಸಿದರು. ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಅಧ್ಯಕ್ಷತೆ ವಹಿಸಿದ್ದರು. ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಅಧ್ಯಕ್ಷ ಮೋಹನ್ ಗೌಡ ಇಡ್ಯಡ್ಕ ಧ್ವಜಾರೋಹಣ ನೆರವೇರಿಸಿದರು. ಕ್ರೀಡಾ ಪಟು ಕಾರ್ತಿಕ್ ಅವರು ಕ್ರೀಡಾ ಪ್ರತಿಜ್ಞೆ ನೆರವೇರಿಸಿದರು. ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಚಿದಾನಂದ ಬೈಲಾಡಿ ಮಾತನಾಡಿದರು.ಯುವ ಒಕ್ಕಲಿಗ ಗೌಡ ಸೇವಾ ಸಂಘದ ಬನ್ನೂರು ವಲಯದ ಅಧ್ಯಕ್ಷ ಮೋಹನ್ ಗೌಡ ಕಬಕ, ಒಕ್ಕಲಿಗ ಗೌಡ ಸೇವಾ ಸಂಘದ ಮಾಜಿ ಅಧ್ಯಕ್ಷ ವಿಶ್ವನಾಥ ಗೌಡ, ಬೆಳ್ಳಾರೆ ಡಾ.ಕೆ.ಶಿವರಾಮ ಕಾರಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ರಾಮಚಂದ್ರ ಕೆ, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಅಧ್ಯಕ್ಷ ಮನೋಹರ್ ಡಿ.ವಿ, ಮಹಿಳಾ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷೆ ವಾರಿಜ ಕೆ, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಎ ವಿ ನಾರಾಯಣ, ಒಕ್ಕಲಿಗ ಗೌಡ ಸೇವಾ ಸಂಘದ ಮಾಜಿ ಅಧ್ಯಕ್ಷ ಕೆಮ್ಮಾರ ಗಂಗಾಧರ ಗೌಡ, ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿಜಯಲಕ್ಷ್ಮೀ , ಯುವ ಗೌಡ ಸೇವಾ ಸಂಘದ ಬನ್ನೂರು ವಲಯದ ಗೌರವಾಧ್ಯಕ್ಷ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಯುವ ಗೌಡ ಸೇವಾ ಸಂಘದ ಮಾಜಿ ಅಧ್ಯಕ್ ನಾಗೇಶ್ ಗೌಡ ಕೆಡೆಂಜಿ, ಸತೀಶ್ ಪಾಂಬಾರು, ತೀರ್ಥಾನಂದ ದುಗ್ಗಳ, ಬೆಳ್ಳಪ್ಪಾಡಿ ಚಂದ್ರಶೇಖರ್ ಉಪಸ್ಥಿತರಿದ್ದರು.
ಯುವ ಒಕ್ಕಲಿಗ ಗೌಡ ಸೇವಾ ಸಂಘದ ತಾಲೂಕು ಅಧ್ಯಕ್ಷ ಅಮರನಾಥ ಗೌಡ ಬಪ್ಪಳಿಗೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಯುವರಾಜ್ ಪೆರಿಯತ್ತೋಡಿ ವಂದಿಸಿದರು. ದಾಮೋದರ್ ನಂದಿಲ, ವಿಶ್ವನಾಥ ಕುಂಬ್ರ, ರಾಜೇಶ್ ಕಲ್ಲಬೆಟ್ಟು ಮತ್ತು ಸುಲೋಚನಾ ಕಾರ್ಯಕ್ರಮ ನಿರೂಪಿಸಿದರು.