ಮದ್ಲೆಗಾರ ಲಕ್ಷ್ಮೀಶ ಅಮ್ಮಣ್ಣಾಯರಿಗೆ ‘ಪುತ್ತೂರು ಗೋಪಣ್ಣ’ ಸ್ಮೃತಿ ಗೌರವ ಪ್ರದಾನ

KannadaprabhaNewsNetwork | Published : Jul 6, 2024 12:50 AM

ಸಾರಾಂಶ

ಹಿರಿಯ ಮದ್ಲೆಗಾರ ಲಕ್ಷ್ಮೀಶ ಅಮ್ಮಣ್ಣಾಯ- ಗೀತಾ ದಂಪತಿಗೆ ‘ಗೋಪಣ್ಣ ಸ್ಮೃತಿ’ ಗೌರವವನ್ನು ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ತಾನು ಕಲಿತ ವಿದ್ಯೆಯ ಪ್ರತಿಫಲನವು ಸಮಾಜದಲ್ಲಿ ಹೇಗೆ ಪ್ರಕಟವಾಗುತ್ತದೆ ಎನ್ನುವುದರ ಮೇಲೆ ಆತನ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಬದುಕಿನಲ್ಲಿ ಶೀಲ, ಗುಣ, ಸ್ವಭಾವವನ್ನು ಹೊಂದಿದವರು ಸೋಲುವುದಿಲ್ಲ. ಭಾರತೀಯ ಕಲೆಗಳು ಇದನ್ನೇ ಬಯಸುತ್ತವೆ. ಕಲಾ ಬದುಕಿನಲ್ಲಿ ಉತ್ತಮ ಶೀಲ, ನಡತೆಯ ಮೂಲಕ ಕಲೆಯನ್ನು ಎತ್ತರೇಕ್ಕೇರಿಸಿದ ಲಕ್ಷ್ಮೀಶ ಅಮ್ಮಣ್ಣಾಯರು ಸದಾ ವಂದ್ಯರು ಎಂದು ಶ್ರೀ ಕಟೀಲು ಮೇಳದ ಕಲಾವಿದ, ಮೇಳದ ಪ್ರಬಂಧಕ ಸುಣ್ಣಂಬಳ ವಿಶ್ವೇಶ್ವರ ಭಟ್ ಹೇಳಿದರು.

ಅವರು ಪುತ್ತೂರಿನ ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ ರಾವ್ ಅವರ ‘ಅಗ್ರಹಾರ’ ಮನೆಯಲ್ಲಿ ಶುಕ್ರವಾರ ಜರುಗಿದ ‘ಪುತ್ತೂರು ಗೋಪಣ್ಣ ಸ್ಮೃತಿ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಹಿರಿಯ ಮದ್ಲೆಗಾರ ಲಕ್ಷ್ಮೀಶ ಅಮ್ಮಣ್ಣಾಯ- ಗೀತಾ ದಂಪತಿಗೆ ‘ಗೋಪಣ್ಣ ಸ್ಮೃತಿ’ ಗೌರವವನ್ನು ಪ್ರದಾನ ಮಾಡಲಾಯಿತು. ಸುಳ್ಯದ ವೇದಮೂರ್ತಿ ನಾಗರಾಜ ಭಟ್ಟರು ಸನ್ಮಾನಿತರಿಗೆ ಶುಭ ಹಾರೈಸಿದರು. ಭಾಗವತ ರಮೇಶ್ ಭಟ್ ಪುತ್ತೂರು ಆಭಿವಂದನಾ ನುಡಿಗಳನ್ನಾಡಿದರು. ಶ್ರೀವಿದ್ಯಾ ಜೆ. ರಾವ್, ವೈಷ್ಣವಿ ರಾವ್, ಶ್ರೀಕೃಷ್ಣ ರಾವ್ ಹಾಗೂ ಮನೆಯವರು ಲಕ್ಷ್ಮೀಶ ಅಮ್ಮಣ್ಣಾಯರನ್ನು ಗೌರವಿಸಿದರು. ಪಿ.ಜಿ. ಜಗನ್ನಿವಾಸ ರಾವ್ ಸ್ವಾಗತಿಸಿದರು. ಕಲಾವಿದ ನಾ. ಕಾರಂತ ಪೆರಾಜೆ ನಿರ್ವಹಿಸಿ, ವಂದಿಸಿದರು. ಬಳಿಕ ‘ಪಂಚವಟಿ’ ಪ್ರಸಂಗದ ತಾಳಮದ್ದಳೆ ಜರುಗಿತು. ನಾರಾಯಣ ಶಬರಾಯ, ರಮೇಶ ಭಟ್ ಪುತ್ತೂರು, ಮಹೇಶ್ ಕನ್ಯಾಡಿ (ಭಾಗವತರು); ಪದ್ಯಾಣ ಶಂಕರನಾರಾಯಣ ಭಟ್, ಲಕ್ಷ್ಮೀಶ ಅಮ್ಮಣ್ಣಾಯ, ಪದ್ಯಾಣ ಜಯರಾಮ ಭಟ್, ಕೃಷ್ಣಪ್ರಕಾಶ್ ಉಳಿತ್ತಾಯ, ರಾಜಗೋಪಾಲ ಜೋಷಿ, ರಾಮಪ್ರಸಾದ್, ಶಿತಿಕಂಠ ಭಟ್ (ಚೆಂಡೆ, ಮದ್ದಳೆ), ಸುಣ್ಣಂಬಳ ವಿಶ್ವೇಶ್ವರ ಭಟ್, ಅಶೋಕ ಭಟ್ ಉಜಿರೆ, ರಾಧಾಕೃಷ್ಣ ಕಲ್ಚಾರ್, ಡಾ.ವಿನಾಯಕ ಭಟ್ ಗಾಳಿಮನೆ, ಗುಂಡ್ಯಡ್ಕ ಈಶ್ವರ ಭಟ್, ಹರೀಶ ಬೊಳಂತಿಮೊಗರು, ರಮಾನಂದ ನೆಲ್ಲಿತ್ತಾಯ, ಶಶಿಧರ ರಾವ್ ಕನ್ಯಾಡಿ, ರಾಮ ಜೋಯಿಸ ಬೆಳ್ಳಾರೆ, ಜಯಲಕ್ಷ್ಮೀ ವಿ. ಭಟ್ (ಅರ್ಥದಾರಿಗಳು) ಭಾಗವಹಿಸಿದ್ದರು.

Share this article