ಪುತ್ತೂರು : ಹಿಂದೂ ಧರ್ಮದ ದೇವರಾಗಿರುವ ಪ್ರಭು ಶ್ರೀರಾಮಚಂದ್ರನ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿರುವ ಪ್ರೊ. ಭಗವಾನ್‌ರನ್ನು ತಕ್ಷಣ ಬಂಧಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸುವಂತೆ ಆಗ್ರಹಿಸಿ ಶ್ರೀರಾಮ ಭಕ್ತರು ಪುತ್ತೂರು ನಗರ ಪೊಲೀಸ್ ಠಾಣೆಗೆ ಶನಿವಾರ ದೂರು ನೀಡಿದ್ದಾರೆ. ಆರಂಭದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಪ್ರೊ. ಭಗವಾನ್ ಪ್ರಭು ಶ್ರೀ ರಾಮನ ಬಗ್ಗೆ ಮಾಡಿದ ಅವಹೇಳನಕ್ಕೆ ದೇವರು ಶಿಕ್ಷೆ ನೀಡಬೇಕು ಎಂದು ಪ್ರಾರ್ಥಿಸಿದರು. ಪ್ರಧಾನ ಅರ್ಚಕ ವೇದಮೂರ್ತಿ ವಿ.ಎಸ್. ಭಟ್ ಪ್ರಾರ್ಥನೆ ನೆರವೇರಿಸಿದರು.ಬಳಿಕ ಅಲ್ಲಿಂದ ಪುತ್ತೂರು ನಗರ ಠಾಣೆಯವರಿಗೆ ಕಾಲ್ನಡಿಗೆಯಲ್ಲಿ ತೆರಳಿದ ಭಕ್ತರು ಠಾಣೆಯಲ್ಲಿ ದೂರು ಸಲ್ಲಿಸಿದರು. ಹಿಂದೂ ಧರ್ಮದ ದೇವರಾದ ಶ್ರೀರಾಮಚಂದ್ರನ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡುವ ಪ್ರೊ. ಭಗವಾನ್ ಸಮಾಜದಲ್ಲಿ ಶಾಂತಿಯನ್ನ ಕೆದಡುವ ಯೋಚನೆಯಲ್ಲಿದ್ದಾರೆ. ಪ್ರಭು ಶ್ರೀರಾಮಚಂದ್ರ ದಶರಥನಿಗೆ ಹುಟ್ಟಿರುವವನಲ್ಲ. ರಾಣಿ ಪುರೋಹಿತರ ಜೊತೆ ಮಲಗುತ್ತಾಳೆ ಎಂಬ ಅಸಂಬದ್ಧ ಹೇಳಿಕೆಯನ್ನು ನೀಡಿ ಸಮಾಜದ ಅಶಾಂತಿಗೆ ಕಾರಣವಾಗಿದ್ದಾರೆ. ಹಿಂದೂ ಧರ್ಮವನ್ನು ತುಚ್ಛವಾಗಿ ಬಿಂಬಿಸಿ ಬೇರೊಂದು ಧರ್ಮವನ್ನು ಹೊಗಳುವ ಧರ್ಮ ದ್ರೋಹಿಯಾಗಿದ್ದಾರೆ. ೨೦೨೪ ರಲ್ಲೂ ಪ್ರೊ. ಭಗವಾನ್ ಶ್ರೀರಾಮಚಂದ್ರನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಆ ಸಂದರ್ಭದಲ್ಲೂ ಪುತ್ತೂರು ನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮಕೈಗೊಳ್ಳಲಿಲ್ಲ. ಇದೀಗ ಮತ್ತೆ ಮತ್ತೆ ಇಂತಹ ಅವಹೇಳನಕಾರಿ ಹೇಳಿಕೆ ನೀಡಿ ಪ್ರೊ. ಭಗವಾನ್ ಸಮಾಜದ ಶಾಂತಿಯನ್ನ ಕೆದಡುತ್ತಿದ್ದಾರೆ. ಅವರ ವಿರುದ್ಧ ಕೂಡಲೇ ಕಾನೂನು ಕ್ರಮಕೈಗೊಳ್ಳಬೇಕು ಎಂದು ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಪುತ್ತೂರಿನ ವೈದ್ಯ ಡಾ. ಸುರೇಶ್ ಪುತ್ತೂರಾಯ ಅವರು ಹಿಂದೂಗಳ ಆರಾಧ್ಯಮೂರ್ತಿ ಶ್ರೀರಾಮನ ಬಗ್ಗೆ ಕೇವಲ ಅವಹೇಳನ ಅಲ್ಲ, ನಾವೆಲ್ಲರೂ ಕೇಳಲಾಗದ ಅವಾಚ್ಯ ಶಬ್ದಗಳಲ್ಲಿ ಪ್ರೊ. ಭಗವಾನ್ ನಿರಂತರ ಮಾತನಾಡುತ್ತಿದ್ದಾರೆ. ಇದು ಶ್ರೀರಾಮನ ಭಕ್ತರಿಗೆ ನೋವನ್ನು, ಅಕ್ರೋಶವನ್ನು ಉಂಟುಮಾಡಿದೆ. ಆದರೆ ಇಲಾಖೆ, ಸರ್ಕಾರ ಯಾವುದೇ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ. ಈ ಅಕ್ರೋಶ ಸಾಮುದಾಯಿಕವಾಗಿ ವ್ಯಾಪಿಸುವ ಮೊದಲು ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.