ಕೃಷ್ಣ ಎನ್. ಲಮಾಣಿ
ವಿಜಯ ವಿಠಲ ದೇವಾಲಯದಲ್ಲಿ ಸಪ್ತಸ್ವರ ಹೊರಡಿಸುವ 56 ಕಂಬಗಳನ್ನು ನಿರ್ಮಿಸಲಾಗಿತ್ತು. ಈಗ 42 ಕಂಬಗಳಿವೆ. ಈ ಕಂಬಗಳಿಂದ ಹೊರಹೊಮ್ಮುವ ಪಂಚವಾದ್ಯ, ಜಲ ತರಂಗ, ಗಂಟೆನಾದ, ಘಟವಾದ್ಯ, ಡಮರುಗ, ಮೃದಂಗ, ವೀಣೆ ನಾದ ಆಲಿಸಲು ಈಗ ಕ್ಯುಆರ್ ಕೋಡ್ ವ್ಯವಸ್ಥೆ ಮಾಡಲಾಗಿದೆ. ಇದು ಪ್ರಾಯೋಗಿಕ ಹಂತದಲ್ಲಿದ್ದು, ಇನ್ನಷ್ಟು ಅಭಿವೃದ್ಧಿಪಡಿಸಿ ದೇಶ, ವಿದೇಶಿ ಪ್ರವಾಸಿಗರ ಬಹುದಿನದ ಬೇಡಿಕೆ ಈಡೇರಿಸಿದಂತಾಗಲಿದೆ ಎಂದು ಹೇಳುತ್ತಾರೆ ಪುರಾತತ್ವ ಇಲಾಖೆಯ ಅಧಿಕಾರಿಗಳು.
ಏಕೆ ಕ್ಯುಆರ್ ಕೋಡ್?: ವಿಜಯ ವಿಠಲ ದೇವಾಲಯದ ಸಪ್ತಸ್ವರ ಮಂಟಪದ ನಾದ ಆಲಿಸಲು ಪ್ರವಾಸಿಗರು ಕಂಬಗಳನ್ನು ಮುಟ್ಟಲಾರಂಭಿಸಿದ್ದು, ಇದರಿಂದ ಕಂಬಗಳು ನೈಜ ಸ್ವರೂಪ ಕಳೆದುಕೊಳ್ಳಲಾರಂಭಿಸಿದ ಹಿನ್ನೆಲೆಯಲ್ಲಿ ಕಂಬಗಳನ್ನು ಮುಟ್ಟುವುದನ್ನು ಪುರಾತತ್ವ ಇಲಾಖೆ ನಿರ್ಬಂಧಿಸಿದೆ. ಈ ಕಾರ್ಯ ಮಾಡಿದರೂ ಪ್ರವಾಸಿಗರು ಸಪ್ತಸ್ವರ ನಾದ ಆಲಿಸುವ ಬೇಡಿಕೆ ಈಡುತ್ತಲೇ ಬಂದಿದ್ದರು. ಇನ್ನು ಪ್ರವಾಸಿಗರು ಭದ್ರತಾ ಸಿಬ್ಬಂದಿ ಕಣ್ಣುತಪ್ಪಿಸಿ ಕಂಬಗಳನ್ನು ಮುಟ್ಟುವುದು ನಡದೇ ಇತ್ತು. ಇದನ್ನು ತಪ್ಪಿಸಲು ಈಗ ಕ್ಯುಆರ್ ಕೋಡ್ ಮೊರೆ ಹೋಗಲಾಗಿದೆ. ಇದರಿಂದ ಪ್ರವಾಸಿಗರ ಬೇಡಿಕೆ ಈಡೇರಿಸಿದಂತಾಗಲಿದೆ. ಜೊತೆಗೆ ಕಂಬಗಳನ್ನು ರಕ್ಷಿಸಿದಂತಾಗಲಿದೆ ಎಂದು ಈ ಐಡಿಯಾವನ್ನು ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿಗಳು ಮಾಡಿದ್ದಾರೆ.ವಿಜಯ ವಿಠಲ ದೇವಾಲಯದ ಆವರಣದಲ್ಲೇ ಕಲ್ಲಿನ ತೇರು ಇದೆ. ಈ ಸ್ಮಾರಕಕ್ಕೂ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಸಪ್ತಸ್ವರ ನಾದ ಹೊರಡಿಸುವ ಕಂಬಗಳ ಸಂರಕ್ಷಣೆಗೂ ಒತ್ತು ನೀಡಲಾಗಿದೆ. ಸ್ಮಾರಕಗಳನ್ನು ಮುಂದಿನ ಪೀಳಿಗೆಗೆ ಕಾಪಾಡಲು ಈ ಕಾರ್ಯವನ್ನು ಅಧಿಕಾರಿಗಳು ಮಾಡಿದ್ದಾರೆ.
ಹಂಪಿಗೆ ವಾರ್ಷಿಕ 30 ಲಕ್ಷಕ್ಕೂ ಅಧಿಕ ದೇಶಿ ಪ್ರವಾಸಿಗರು ಹಾಗೂ 3 ಲಕ್ಷಕ್ಕೂ ಅಧಿಕ ವಿದೇಶಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಹಂಪಿಗೆ ಆಗಮಿಸುವ ಪ್ರವಾಸಿಗರಿಗೆ ಈಗಾಗಲೇ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಈಗ ಸಪ್ತಸ್ವರ ಹೊರಡಿಸುವ ನಾದವನ್ನು ಆಲಿಸಲು ಕ್ಯುಆರ್ ಕೋಡ್ ಮೂಲಕ ವ್ಯವಸ್ಥೆ ಮಾಡಲಾಗಿದ್ದು, ಇನ್ನಷ್ಟು ಅಭಿವೃದ್ಧಿಪಡಿಸಿ, ಹಂಪಿಗೆ ಪ್ರವಾಸಿಗರನ್ನು ಸೆಳೆಯುವ ಕಾರ್ಯವನ್ನು ಪುರಾತತ್ವ ಇಲಾಖೆ ಮಾಡುತ್ತಿದೆ.
ಹಂಪಿಗೆ ಅತಿ ಹೆಚ್ಚು ಪ್ರವಾಸಿಗರು ಬರುತ್ತಿದ್ದು, ಇಷ್ಟು ದಿನ ಪ್ರವಾಸಿಗರು ಸಂಗೀತವನ್ನು ಕೇಳದೇ ನಿರಾಸೆಯಿಂದ ಹೋಗುತ್ತಿದ್ದರು. ಈಗ ಕೇಂದ್ರ ಪುರಾತತ್ವ ಇಲಾಖೆಯಿಂದ ಕ್ಯುಆರ್ ಕೋಡ್ ಅಳವಡಿಸಿದ್ದು, ಮೊಬೈಲ್‌ನಲ್ಲಿ ಸ್ಕ್ಯಾನ್ ಮಾಡುವ ಮೂಲಕ ಪ್ರವಾಸಿಗರು ಸಂಗೀತ ಆಲಿಸಬಹುದು ಎನ್ನುತ್ತಾರೆ ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷಿ ವಿ. ಹಂಪಿ.