ಫುಡ್‌ಕೋರ್ಟ್‌ಗಳಲ್ಲಿ ಗುಣಮಟ್ಟ ಮತ್ತು ಸ್ವಚ್ಛತೆ ಪರಿಶೀಲನೆ

KannadaprabhaNewsNetwork |  
Published : Sep 12, 2025, 12:06 AM IST
11ಎಚ್ಎಸ್ಎನ್17 :  | Kannada Prabha

ಸಾರಾಂಶ

ಮಹಾರಾಜ ಪಾರ್ಕ್ ಬಳಿ ಇರುವ ಫುಡ್‌ಕೋರ್ಟ್‌ಗೆ ಹಾಸನ ಮಹಾನಗರ ಪಾಲಿಕೆ ಮೇಯರ್ ಹೇಮಲತಾ ಕಮಲ್ ಕುಮಾರ್ ಹಾಗೂ ಪರಿಸರ ಪ್ರಭಾರಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕವಿತಾ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಆಹಾರ ಗುಣಮಟ್ಟ ಹಾಗೂ ಸ್ವಚ್ಛತೆ ಪರಿಶೀಲನೆ ನಡೆಸಿದರು. ಸ್ವಚ್ಛತೆ ಕಾಪಾಡದೆ ಬೇಕಾಬಿಟ್ಟಿಯಾಗಿ ಕಳಪೆ ಆಹಾರ ಮಾರಾಟ ಮಾಡುವ ವ್ಯಾಪಾರಿಗಳಿಗೆ ಕಠಿಣ ಎಚ್ಚರಿಕೆ ನೀಡಿದ ಮೇಯರ್‌, ಮುಂದಿನ ದಿನಗಳಲ್ಲಿ ಇಂಥವರ ವ್ಯಾಪಾರದ ಅನುಮತಿ ರದ್ದು ಮಾಡಲಾಗುವುದು ಎಂದು ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಮಹಾರಾಜ ಪಾರ್ಕ್ ಬಳಿ ಇರುವ ಫುಡ್‌ಕೋರ್ಟ್‌ಗೆ ಹಾಸನ ಮಹಾನಗರ ಪಾಲಿಕೆ ಮೇಯರ್ ಹೇಮಲತಾ ಕಮಲ್ ಕುಮಾರ್ ಹಾಗೂ ಪರಿಸರ ಪ್ರಭಾರಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕವಿತಾ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಆಹಾರ ಗುಣಮಟ್ಟ ಹಾಗೂ ಸ್ವಚ್ಛತೆ ಪರಿಶೀಲನೆ ನಡೆಸಿದರು. ಸ್ವಚ್ಛತೆ ಕಾಪಾಡದೆ ಬೇಕಾಬಿಟ್ಟಿಯಾಗಿ ಕಳಪೆ ಆಹಾರ ಮಾರಾಟ ಮಾಡುವ ವ್ಯಾಪಾರಿಗಳಿಗೆ ಕಠಿಣ ಎಚ್ಚರಿಕೆ ನೀಡಿದ ಮೇಯರ್‌, ಮುಂದಿನ ದಿನಗಳಲ್ಲಿ ಇಂಥವರ ವ್ಯಾಪಾರದ ಅನುಮತಿ ರದ್ದು ಮಾಡಲಾಗುವುದು ಎಂದು ಎಚ್ಚರಿಸಿದರು. ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಇತ್ತೀಚೆಗಷ್ಟೇ ಎಂ.ಜಿ. ರಸ್ತೆಯ ಫುಡ್‌ಕೋರ್ಟ್‌ನಲ್ಲಿ ಪರಿಶೀಲನೆ ಮಾಡಿದಾಗ ಸ್ವಚ್ಛತೆ ಇರಲಿಲ್ಲ. ಆದರೆ ಮಹಾರಾಜ ಪಾರ್ಕ್ ಬಳಿಯ ಫುಡ್ ಕೋರ್ಟ್‌ನಲ್ಲಿ ಸ್ವಲ್ಪ ಮಟ್ಟಿಗೆ ಸ್ವಚ್ಛತೆ ಕಾಪಾಡಿರುವುದು ಕಂಡುಬಂದಿದೆ. ಕೆಲವರು ಪದಾರ್ಥಗಳನ್ನು ಮನೆಯಲ್ಲಿ ತಯಾರಿಸುತ್ತೇವೆ ಎಂದು ಹೇಳಿರುವುದರಿಂದ ಅವರ ಮನೆ ವಿಳಾಸ ಪಡೆದುಕೊಂಡಿದ್ದೇವೆ. ಮುಂದಿನ ಬಾರಿ ಅವರ ಮನೆಯಲ್ಲಿ ಸಹ ಪರಿಶೀಲನೆ ನಡೆಯಲಿದೆ ಎಂದು ತಿಳಿಸಿದರು.

ಇನ್ನು ಕಬಾಬ್, ಗೋಬಿ, ಮಸಾಲ ಪುರಿ, ಐಸ್ಕ್ರೀಮ್ ಮಾರಾಟ ಮಾಡುವವರ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ದೋಸೆ ಹಿಟ್ಟನ್ನು ಕೈಲಿ ಮಾಡದೆ, ಸ್ವಚ್ಛತೆಯೊಂದಿಗೆ ತಯಾರಿಸುವುದಾಗಿ ವ್ಯಾಪಾರಿಗಳು ಒಪ್ಪಿಕೊಂಡಿದ್ದಾರೆ. ಪಾಮಾಯಿಲ್ ಬಳಸಿ ಬೇಯಿಸದೇ ರಿಫೈನ್ಡ್ ಆಯಿಲ್ ಬಳಕೆ ಮಾಡುವಂತೆ ಸೂಚಿಸಲಾಗಿದೆ. ಪ್ಲಾಸ್ಟಿಕ್ ಉಪಯೋಗಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ಬಾರಿ ದಂಡ ವಿಧಿಸದೆ ಎಚ್ಚರಿಕೆ ನೀಡಿದ್ದೇವೆ. ಮುಂದಿನ ಹಂತದಲ್ಲಿ ದೊಡ್ಡ ಹೋಟೆಲ್‌ಗಳಿಗೂ ಪರಿಶೀಲನೆ ವಿಸ್ತರಿಸಲಾಗುವುದು ಎಂದು ಎಚ್ಚರಿಸಿದರು.

ಪರಿಸರ ಪ್ರಭಾರಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕವಿತಾ ಮಾತನಾಡಿ, ಮೊದಲ ಬಾರಿ ಎಚ್ಚರಿಕೆ ನೀಡುತ್ತಿದ್ದೇವೆ. ಆದರೆ ಮುಂದಿನ ಬಾರಿ ಸ್ವಚ್ಛತೆ ಇಲ್ಲದಿರುವುದು ಕಂಡುಬಂದರೆ ನೇರವಾಗಿ ದಂಡ ವಿಧಿಸಲಾಗುವುದು. ಎಂ.ಜಿ. ರಸ್ತೆಯ ಫುಡ್‌ಕೋರ್ಟ್‌ನಲ್ಲಿ ಎಚ್ಚರಿಕೆ ನೀಡಿದ ನಂತರ ಅಲ್ಲಿನ ವ್ಯಾಪಾರಿಗಳು ಸ್ವಚ್ಛತೆಗೆ ಆದ್ಯತೆ ನೀಡಿರುವುದು ಕಂಡುಬಂದಿದೆ. ಆದರೆ ಇನ್ನೂ ನಿಷೇಧಿತ ಪ್ಲಾಸ್ಟಿಕ್ ಬಾಟಲಿಗಳನ್ನು, ನ್ಯೂಸ್ ಪೇಪರ್‌ ಬಳಸಿ ಪ್ಯಾಕ್ ಮಾಡುವ ಪದ್ಧತಿ ಮುಂದುವರಿದಿದೆ. ಜನರು ಸಹ ತಿನ್ನುವ ಸ್ಥಳದಲ್ಲಿ ಸ್ವಚ್ಛತೆ ಇದೆಯೇ ಎಂದು ಗಮನಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಡಿಕೆ ಎಲೆ ಮತ್ತು ಬಾಳೆ ಎಲೆಯಲ್ಲಿ ಸಿದ್ಧಪಡಿಸಿದ ಪ್ಲೇಟುಗಳನ್ನು ಉಪಯೋಗಿಸಬೇಕು. ಹಾಸನದಲ್ಲಿ ಕಳಪೆ ಆಹಾರ ಸೇವನೆಯಿಂದಾಗಿ ಅನೇಕರು ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ. ಆದ್ದರಿಂದ ಸೋಮಾರಿತನ ಮಾಡದೇ ಗೃಹಿಣಿಯರು ಮನೆಯಲ್ಲಿ ತಯಾರಿಸಿದ ಆಹಾರ ಸೇವನೆ ಮಾಡುವುದು ಉತ್ತಮ ಎಂದು ಒತ್ತಿ ಹೇಳಿದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ