‘ಮಕ್ಕಳ ಮನೆ’ ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟ ಶಿಕ್ಷಣ: ಶಾಸಕ ಎ.ಮಂಜು

KannadaprabhaNewsNetwork |  
Published : Jun 23, 2024, 02:04 AM IST
22ಎಚ್ಎಸ್ಎನ್5 : ಮಕ್ಕಳ ಮನೆಗೆ ಆಗಮಿಸಿದ ಮಕ್ಕಳಿಗೆ ಶಾಸಕ ಮಂಜು ಅಕ್ಷರಾಭ್ಯಾಸ ಮಾಡಿಸಿದರು. | Kannada Prabha

ಸಾರಾಂಶ

ಖಾಸಗಿ ಕಾನ್ವೆಂಟ್‌ ಶಾಲೆಗಳಿಗೆ ಮಿಗಿಲಾಗಿ ಸೌಲಭ್ಯಗಳನ್ನು ಒದಗಿಸಿ ಗುಣಮಟ್ಟದ ಶಿಕ್ಷಣ ನೀಡುವ ಸದುದ್ದೇಶದಿಂದ ಪೂರ್ವ ಪ್ರಾಥಮಿಕ ‘ಮಕ್ಕಳ ಮನೆ’ ಶಾಲೆ ಆರಂಭಿಸಿರುವುದಾಗಿ ಶಾಸಕ ಎ.ಮಂಜು ತಿಳಿಸಿದರು. ಅರಕಲಗೂಡಿನಲ್ಲಿ ಮಕ್ಕಳ ಮನೆಗೆ ಚಾಲನೆ ನೀಡಿ ಮಾತನಾಡಿದರು.

ಅಕ್ಷರಾಭ್ಯಾಸ ಮೂಲಕ ಆರಂಭ । ಅರಕಲಗೂಡಿನ ಕೋಟೆಯಲ್ಲಿ ಪೂರ್ವ ಪ್ರಾಥಮಿಕ ಶಾಲೆ । ಕಾನ್ವೆಂಟ್‌ಗಿಂತ ಮಿಗಿಲು

ಕನ್ನಡಪ್ರಭ ವಾರ್ತೆ ಅರಕಲಗೂಡು

ಖಾಸಗಿ ಕಾನ್ವೆಂಟ್‌ ಶಾಲೆಗಳಿಗೆ ಮಿಗಿಲಾಗಿ ಸೌಲಭ್ಯಗಳನ್ನು ಒದಗಿಸಿ ಗುಣಮಟ್ಟದ ಶಿಕ್ಷಣ ನೀಡುವ ಸದುದ್ದೇಶದಿಂದ ಪೂರ್ವ ಪ್ರಾಥಮಿಕ ‘ಮಕ್ಕಳ ಮನೆ’ ಶಾಲೆ ಆರಂಭಿಸಿರುವುದಾಗಿ ಶಾಸಕ ಎ.ಮಂಜು ತಿಳಿಸಿದರು.

ಪಟ್ಟಣದ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಎಲ್‌ಕೆಜಿ, ಯುಕೆಜಿಯ ‘ಮಕ್ಕಳ ಮನೆ’ ಶಾಲೆಗೆ ಚಾಲನೆ ನೀಡಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿ ಮಾತನಾಡಿದ ಅವರು, ‘ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕಾಗಿದೆ. ಈ ನಿಟ್ಟಿನಲ್ಲಿ ತಾಲೂಕಿನಲ್ಲಿ ಎಲ್‌ಕೆಜಿ, ಯುಕೆಜಿ ಮಾದರಿಯಲ್ಲಿ ‘ಮಕ್ಕಳ ಮನೆ’ ಎಂಬ ಪ್ರೀ–ಸ್ಕೂಲ್ ಪ್ರಾರಂಭಿಸುವ ಯೋಜನೆ ಕಾರ್ಯಗತ ಮಾಡಲಾಗುತ್ತಿದೆ. ನನ್ನ ಸ್ವಗ್ರಾಮ ಹನ್ಯಾಳುವಿನಲ್ಲಿ ಕಳೆದ ವರ್ಷ ಪ್ರಾಯೋಗಿಕವಾಗಿ ‘ಮಕ್ಕಳ ಮನೆ’ ತೆರೆಯಲಾಗಿತ್ತು. ಮೂರು ಮಕ್ಕಳಿದ್ದ ಶಾಲೆಗೆ ಈಗ 25 ಮಕ್ಕಳು ಸೇರ್ಪಡೆಯಾಗಿದ್ದಾರೆ. ಉತ್ತಮ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ ಅರಕಲಗೂಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಟ್ಟಣದ ಕೋಟೆ, ಸಂತೆಮರೂರು, ಬೈಚನಹಳ್ಳಿ, ಮಲ್ಲಿಪಟ್ಟಣ, ಹುಲಿಕಲ್, ಹಂಡ್ರಂಗಿ, ರಾಮನಾಥಪುರ, ಮಧುರನಹಳ್ಳಿ, ಕೇರಳಾಪುರ ಹಾಗೂ ಹಳ್ಳಿ ಮೈಸೂರು ಹೋಬಳಿಯ ಬಿದರಕ್ಕ, ಓಡನಹಳ್ಳಿ ಗ್ರಾಮಗಳಲ್ಲಿ ಮೊದಲ ಹಂತದಲ್ಲಿ ಈ ಶಾಲೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದರು.

‘ಮಕ್ಕಳ ಮನೆ’ಯಲ್ಲಿ ಮೂರು ವರ್ಷದಿಂದ ಆರು ವರ್ಷದ ಮಕ್ಕಳಿಗೆ ಕಾನ್ವೆಂಟ್ ಮಾದರಿಯಲ್ಲಿ ಸಮವಸ್ತ್ರ, ಪಠ್ಯ ಪುಸ್ತಕ, ನುರಿತ ಶಿಕ್ಷಕರಿಂದ ಬೊಧನೆ, ಕ್ರೀಡಾ ಚಟುವಟಿ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು. ಶಾಲೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1ರ ವರೆಗೆ ನಡೆಯಲಿದೆ. ಇಲ್ಲಿ ಕಲಿಸುವ ಶಿಕ್ಷಕರು ಮಧ್ಯಾಹ್ನದ ಬಳಿಕ ಸರ್ಕಾರಿ ಶಾಲೆಗಳ 1ರಿಂದ 4 ನೇ ತರಗತಿಯ ಮಕ್ಕಳಿಗೆ ಆಂಗ್ಲ ಭಾಷಾ ಬೋಧನೆ ಮಾಡುವರು. ಶಾಲೆಗೆ ಅಗತ್ಯವಾದ ಪೀಠೋಪಕರಣ, ಶಿಕ್ಷಕರ ವೇತನ ಮುಂತಾದ ಸೌಲಭ್ಯಗಳನ್ನು ತಮ್ಮ ಶಾಸಕರ ವೇತನದಿಂದ ಭರಿಸಲಾಗುವುದು ಎಂದು ಹೇಳಿದರು.

ಶಿಕ್ಷಣ ಇಲಾಖೆ ಮತ್ತು ಸಿಡಿಪಿಒ ಇಲಾಖೆ ಅನುಮತಿ ಪಡೆದು ಪ್ರಾರಂಭಿಸಿರುವ ಈ ಶಾಲೆ ಸರ್ಕಾರಿ ಶಾಲೆಗಳಿಗೆ ಪೂರಕವಾಗಲಿದೆ. ತಾಲೂಕಿನಲ್ಲಿ ಮೊದಲ ಬಾರಿಗೆ ತಮ್ಮ ಕಲ್ಪನೆಯ ಶಾಲೆ ಪ್ರಾರಂಭವಾಗುತ್ತಿದ್ದು ಸರ್ಕಾರ ಇದನ್ನು ರಾಜ್ಯದಾದ್ಯಂತ ತೆರೆಯಬೇಕು. ರಾಜ್ಯದ ಶಾಸಕ ಮಿತ್ರರು ತಮ್ಮ ಕ್ಷೇತ್ರಗಳಲ್ಲಿ ಇದನ್ನು ಪ್ರಾರಂಭಿಸುವಂತೆ ಮನವಿ ಮಾಡಿದರು.

ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ, ಬಿಇಒ ದೇವರಾಜು, ಸಿಡಿಪಿಒ ವೆಂಕಟೇಶ್, ಮುಖ್ಯ ಶಿಕ್ಷಕ ಬೇಲೂರೇಗೌಡ, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಎನ್.ರವಿಕುಮಾರ್, ಮುಖಂಡರಾದ ರಮೇಶ್ ವಾಟಾಳ್, ಹೂವಣ್ಣ, ಸುಭಾನ ಷರೀಫ್, ವಕ್ತಾರ ರವಿಕುಮಾರ್, ಎ.ಎಂ.ರಘು, ಮಂಜುನಾಥ್, ಯೋಗೇಶ್, ಮುತಾಹೀರ್ ಪಾಷಾ, ರಂಗನಾಥ್, ಲೋಕೇಶ್, ಡಾ.ಅಶೋಕ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ