ಕನ್ನಡಪ್ರಭ ವಾರ್ತೆ ಪಾಂಡವಪುರ
ಜ್ಞಾನಬಂಧು ವಿದ್ಯಾಸಂಸ್ಥೆಯೂ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ.ಆರ್.ಕುಮಾರಸ್ವಾಮಿ ಹೇಳಿದರು.
ತಾಲೂಕಿನ ದೇವೇಗೌಡನಕೊಪ್ಪಲು ಸಮೀಪದ ಜ್ಞಾನಬಂಧು ಶಿಕ್ಷಣ ಸಂಸ್ಥೆಯಲ್ಲಿ ನಡೆದ ಮುಸ್ಸಂಜೆ ಸಂಭ್ರಮ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, 2007ರಲ್ಲಿ ಕೇವಲ 90 ಮಕ್ಕಳಿಂದ ಆರಂಭಗೊಂಡ ಶಿಕ್ಷಣ ಸಂಸ್ಥೆಗೆ ನಂತರದ 4 ವರ್ಷಕ್ಕೆ 1137 ಮಕ್ಕಳು ದಾಖಲಾದರು.
ಗುಣಮಟ್ಟದ ಶಿಕ್ಷಣ ಒದಗಿಸಿಕೊಡುವ ಉದ್ದೇಶದಿಂದ ಎಲ್‌ಕೆಜಿಯಿಂದಲೇ ಸಿಬಿಎಸ್‌ಇ ಶಿಕ್ಷಣವನ್ನು ಆರಂಭಿಸಿ ಅನುಕೂಲ ಮಾಡಿಕೊಟ್ಟಿದ್ದೇನೆ. ಆ ಕಾಲದಲ್ಲಿಯೇ ಸ್ಮಾಟ್‌ಕ್ಲಾಸ್ ಆರಂಭಿಸಿದ ಜಿಲ್ಲೆಯ ಮೊದಲ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಗೆ ಪಡೆದುಕೊಂಡಿದ್ದವು ಎಂದರು.
ರೈತ ಕುಟುಂಬದಲ್ಲಿ ಶಿಕ್ಷಕರ ಮಗನಾಗಿ ಜನಿಸಿದ ನನಗೆ ಅಮೇರಿಕದಲ್ಲಿ ಉದ್ಯೋಗ ಅರಿಸಿಬಂದಿತ್ತು. ನನ್ನ ಸ್ವದೇಶಿ ಮಕ್ಕಳಿಗೆ ಸೇವೆ ಮಾಡಬೇಕೆಂಬ ಆಸೆಯಿಂದ ಉದ್ಯೋಗವನ್ನು ಬಿಟ್ಟು ಶಿಕ್ಷಣ ಸಂಸ್ಥೆಯನ್ನು ನಡೆಸಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದೇನೆ ಎಂದು ತಿಳಿಸಿದರು.
ಬಿಜೆಪಿ ರೈತಮೋರ್ಚಾ ರಾಜ್ಯಾಧ್ಯಕ್ಷ ನಡಹಳ್ಳಿ ಎಸ್.ಪಾಟೀಲ್ ಅವರು ನನಗೆ ರೈತಮೋರ್ಚಾದ ರಾಜ್ಯ ಉಪಾಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ. ರೈತನ ಮಗನಾಗಿ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಕಾಳೇಗೌಡ ಮಾತನಾಡಿ, ಜ್ಞಾನಬಂಧು ಶಿಕ್ಷಣ ಸಂಸ್ಥೆಯೂ ಉತ್ತಮ ಪರಿಸರದಿಂದ ಕೂಡಿದೆ. ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ತೆರೆದಿರುವ ಈ ಸಂಸ್ಥೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.
ಇದೇ ವೇಳೆ ಶಾಲೆ ಮಕ್ಕಳಿಂದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು. ಮಕ್ಕಳ ನೃತ್ಯ ಪ್ರದರ್ಶನವನ್ನು ಕಂಡ ಪೋಷಕರು ಶಿಳ್ಳೆ, ಚಪ್ಪಾಳೆಗಳನ್ನು ತಟ್ಟಿ ಸಂಭ್ರಮಿಸಿದರು.
ಕೆನ್ನಾಳು ಗ್ರಾಪಂ ಅಧ್ಯಕ್ಷ ವಿ.ಪ್ರಕಾಶ್, ಮಾಜಿ ಅಧ್ಯಕ್ಷ ಆರ್.ರುದ್ರೇಶ್, ಲಿಂಗಾಯಿತ ಮಹಾಸಭಾ ಅಧ್ಯಕ್ಷ ಮಂಜುನಾಥ್ ಬೆಟ್ಟಹಳ್ಳಿ, ಪುಷ್ಪಗಿರಿ ವಿದ್ಯಾಸಂಸ್ಥೆ ಅಧ್ಯಕ್ಷ ಸೋಮಶೇಖರ್, ವಕೀಲರ ಸಂಘದ ಕಾರ್ಯುದರ್ಶಿ ನಾಗರಾಜು, ಪುಷ್ಪಾ ಕುಮಾರಸ್ವಾಮಿ ಸೇರಿ ಅನೇಕ ಗಣ್ಯರು ಪಾಲ್ಗೊಂಡಿದ್ದರು.