ಕನ್ನಡಪ್ರಭ ವಾರ್ತೆ ತರೀಕೆರೆ
ಮಕ್ಕಳಿಗೆ ಸ್ಪರ್ಧಾತ್ಮಕ ಮನೋಭಾವ ಅಗತ್ಯ, ಆದುದರಿಂದ ಕೌಶಲ್ಯಾಭಿವೃದ್ದಿ ಪಡಿಸಿ ಉತ್ತಮ ಗುಣಮಟ್ಟದ ಶಿಕ್ಷಣದ ಮೂಲಕ ಮಕ್ಕಳಿಗೆ ಹೆಚ್ಚು ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ನಿರ್ವಹಿಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.ತಾಲೂಕಿನ ಬಾವಿಕೆರೆಯಲ್ಲಿ ಮಂಗಳವಾರ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಸರ್ಕಾರಿ ಪಾಲಿಟೆಕ್ನಿಕ್ ತರೀಕೆರೆ ಹಾಗೂ ರೈಟ್ಸ್ ಲಿಮಿಟೆಡ್ ಬೆಂಗಳೂರು ವತಿಯಿಂದ ನೂತನ ಸರ್ಕಾರಿ ಪಾಲಿಟೆಕ್ನಿಕ್ ಕಟ್ಟಡದ ಉದ್ಘಾಟನೆ, ಹೆಚ್ಚುವರಿ ಕೊಠಡಿಗಳು ಮತ್ತು ವರ್ಕ್‌ಶಾಪ್ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳ ಶೈಕ್ಷಣಿಕ ಬೆಳವಣಿಗೆ, ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಲು ತಾಲೂಕು ಮಟ್ಟದ ಕಾಲೇಜುಗಳನ್ನು ಬಲಗೊಳಿಸಬೇಕು. ಈ ಎರಡೂವರೆ ವರ್ಷಗಳಲ್ಲಿ ಡಿಗ್ರಿ ಕಾಲೇಜು, ಪಾಲಿಟೆಕ್ನಿಕ್ ಕಾಲೇಜು, ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ ಶಾಸಕರಿಂದ ಬಹಳಷ್ಟು ಬೇಡಿಕೆ ಇದೆ. ಕೆಲವು ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಕೇವಲ 2, 3 ಕೋರ್ಸ್‌ಗಳು ಮಾತ್ರ ಇವೆ. ಆದರೆ ಸಮಾನಾಂತರವಾಗಿ ಎಲ್ಲ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಹೆಚ್ಚುವರಿ ಕೋರ್ಸ್‌ಗಳನ್ನು ಪ್ರಾರಂಭಿಸಬೇಕು. ರಾಜ್ಯದ ಎಲ್ಲಾ ಪಾಲಿಟೆಕ್ನಿಕ್ ಕಾಲೇಜುಗಳಿಗೆ ಕಾಂಪೌಂಡುಗಳನ್ನು ಒದಗಿಸಬೇಕು, ಎಲ್ಲಾ ಕಾಲೇಜುಗಳಿಗೆ ಮೂಲಬೂತ ಸೌಲಭ್ಯಗಳನ್ನು ಒದಗಿಸಬೇಕು ಎಂಬುದು ಸರ್ಕಾರದ ಆಶಯ ಎಂದು ಹೇಳಿದರು.ಹೆಣ್ಣುಮಕ್ಕಳು ಸಬಲೀಕರಣವಾಗಬೇಕು ಎಂದು ಶೈಕ್ಷಣಿಕ ಕ್ಷೇತ್ರದಲ್ಲಿ ಸರ್ಕಾರ ಬಹಳ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುತ್ತಿದೆ, ಸರ್ಕಾರಿ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾಬ್ಯಾಸದಲ್ಲಿ ಉತ್ತೀರ್ಣರಾಗಿರುವ ಹೆಣ್ಣುಮಕ್ಕಳಿಗೆ ಉನ್ನತ ವ್ಯಾಸಂಗಕ್ಕೆ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ರಾಜ್ಯದಲ್ಲಿ 107 ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳು ಇವೆ. ತರೀಕೆರೆ ಸರ್ಕಾರಿ ಪಾಲಿಟೆಕ್ನಿಕ್ ನಾಲ್ಕು ಕೋರ್ಸ್‌ಗಳನ್ನು ಹೊಂದಿದೆ. ಶಾಸಕ ಜಿ.ಎಚ್.ಶ್ರೀನಿವಾಸ್ ಅವರ ಸತತ ಪ್ರಯತ್ನದಿಂದ ನೂತನ ಸರ್ಕಾರಿ ಪಾಲಿಟೆಕ್ನಿಕ್ ಕಟ್ಟದ ಉದ್ಘಾಟನೆ ಎಲ್ಲರಿಗೂ ಸಂತಸ ತಂದಿದೆ ಎಂದು ಹೇಳಿದರು.
ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆಗೆ ನಾನೆ ಶಂಕುಸ್ಥಾಪನೆ ನೆರವೇರಿಸಿದ್ದು ಇದೀಗ ಉದ್ಘಾಟನೆ ಅಗುತ್ತಿದೆ, ತರೀಕೆರೆ ಪಟ್ಟಣದಲ್ಲಿ ಪದವಿ ಕಾಲೇಜು ಕೂಡ ಆಗಿದೆ, ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಂಪ್ಯೂಟರ್ ಕೊಠಡಿ ಆಗಬೇಕು, ಕಾಲೇಜಿಗೆ ಕಾಂಪೌಂಡ್ ಆಗಬೇಕು, ಪಾಲಿಟೆಕ್ನಿಕ್ ಕಾಲೇಜಿಗೆ ಕಂಪ್ಯೂಟರ್ ಲ್ಯಾಬ್ ಆಗಬೇಕು, ಇದಕ್ಕಾಗಿ ಹತ್ತು ಕೋಟಿ ರು. ಮಂಜೂರು ಮಾಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.ತರೀಕೆರೆ ಪಟ್ಟಣದಲ್ಲಿ ರಸ್ತೆ ಅಭಿವೃದ್ದಿ, ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ, ಪುರಸಭೆ ನೂತನ ಕಟ್ಟಡ ಇತ್ಯಾದಿ ಅನೇಕ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಶಿವಮೊಗ್ಗ ಭದ್ರಾ ಕಾಡಾ ಅಧ್ಯಕ್ಷ ಡಾ.ಅಂಶುಮಂತ್, ಭಾವಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಂತಿ ಮಧುಸೂದನ್ ಗೌಡ ಬಿ.ವಿ., ಪ್ರಾಂಶುಪಾಲ ಮಂಜುನಾಥ್ ಮಾತನಾಡಿದರು.ತರೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಯು.ಫಾರೂಕ್, ಅಜ್ಜಂಪುರ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರು ದಯಾನಂದ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಉಸ್ತುವಾರಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಉಪಾಧ್ಯಕ್ಷ ಸಮೀವುಲ್ಲಾ ಷರೀಫ್, ಜಿಲ್ಲಾ ಕೆ.ಡಿ.ಪಿ.ಸದಸ್ಯ ಸಿರಾಜ್, ಕೆಡಿಪಿ ಸದಸ್ಯರಾದ ರಚನಾ ಶ್ರೀನಿವಾಸ್, ಎಚ್.ಎನ್. ಮಂಜುನಾಥ್ ಲಾಡ್, ಗಂಗಾಧರ್, ತಾಪಂ ಮಾಜಿ ಸದಸ್ಯ ಸೀತಾರಾಮ್, ಸೆನೆಟ್ ಸದಸ್ಯ ಅರವಿಂದ್, ಬಗರ್ ಹುಕುಂ ಸಮಿತಿ ಸದಸ್ಯ ಜಗದೀಶ್, ತಹಸೀಲ್ದಾರ್ ವಿಶ್ವಜಿತ್ ಮೆಹತಾ ಭಾಗವಹಿಸಿದ್ದರು.