ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ವ್ಯವಸ್ಥೆ: ಬಸವರಾಜ ಖೋತ

KannadaprabhaNewsNetwork | Published : Feb 19, 2025 12:47 AM

ಸಾರಾಂಶ

ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದು ಅಷ್ಟು ಸುಲಭದ ಮಾತು ಅಲ್ಲ, ಅಂತಹ ಕಷ್ಟದ ಕಾಲದಲ್ಲಿ ಹಿರಿಯರು, ಗ್ರಾಮದ ಜನರ ಸಹಕಾರದಿಂದ ಕುಂದರಗಿ ಗ್ರಾಮದಲ್ಲಿ ಮಕ್ಕಳ ಕಲಿಕೆಗೆ ಪೂರಕವಾಗಿರುವ ಸಂಸ್ಥೆಯನ್ನು ನಿರ್ಮಿಸಿ ಎಲ್ಲ ಮಕ್ಕಳಿಗೂ ಪಠ್ಯ ಮತ್ತು ಪಠ್ಯೇತರ ವಿಷಯಗಳು ಸಿಗುವಂತಹ ಸಂಸ್ಥೆ ಸಿದ್ಧಗೊಂಡಿದೆ ಎಂದು ರಾಮಲಿಂಗೇಶ್ವರ ವಿದ್ಯಾವರ್ಧಕ ಸಂಘದ ಚೇರಮನ್‌ ಬಸವರಾಜ ಖೋತ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದು ಅಷ್ಟು ಸುಲಭದ ಮಾತು ಅಲ್ಲ, ಅಂತಹ ಕಷ್ಟದ ಕಾಲದಲ್ಲಿ ಹಿರಿಯರು, ಗ್ರಾಮದ ಜನರ ಸಹಕಾರದಿಂದ ಕುಂದರಗಿ ಗ್ರಾಮದಲ್ಲಿ ಮಕ್ಕಳ ಕಲಿಕೆಗೆ ಪೂರಕವಾಗಿರುವ ಸಂಸ್ಥೆಯನ್ನು ನಿರ್ಮಿಸಿ ಎಲ್ಲ ಮಕ್ಕಳಿಗೂ ಪಠ್ಯ ಮತ್ತು ಪಠ್ಯೇತರ ವಿಷಯಗಳು ಸಿಗುವಂತಹ ಸಂಸ್ಥೆ ಸಿದ್ಧಗೊಂಡಿದೆ ಎಂದು ರಾಮಲಿಂಗೇಶ್ವರ ವಿದ್ಯಾವರ್ಧಕ ಸಂಘದ ಚೇರಮನ್‌ರಾದ ಬಸವರಾಜ ಖೋತ ತಿಳಿಸಿದರು.

ತಾಲೂಕಿನ ಕುಂದರಗಿ ಗ್ರಾಮದ ರಾಮಲಿಂಗೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ರಾಮಲಿಂಗೇಶ್ವರ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ೨೦೨೪-೨೫ನೇ ಸಾಲಿನ ರಾಮಲಿಂಗೇಶ್ವರ ವೈಭವ, ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೊರೊನಾ ಮಹಾಮಾರಿಯಿಂದ ಸಾಕಷ್ಟು ಸಂಕಷ್ಟ ಅನುಭವಿಸಿದ ಸಂಸ್ಥೆ ಇಂದು ಬೃಹತ್‌ ಶಿಕ್ಷಣ ಸಮೂಹ ಒಳಗೊಂಡು ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ. ಸಂಸ್ಥೆ ಜಿಲ್ಲೆಯಲ್ಲಿಯೇ ಉತ್ತಮ ಹೆಸರು ಪಡೆದು ಎಲ್ಲ ಕ್ಷೇತ್ರಗಳಿಗೂ ಮಕ್ಕಳನ್ನು ಸಿದ್ಧಪಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್‌.ಎಸ್‌. ಆದಾಪೂರ, ಜಗತ್ತಿನಲ್ಲಿಯೇ ಅತ್ಯಂತ ಪವಿತ್ರ ಸ್ಥಳವೆಂದರೆ ಅದು ಶಾಲೆ. ಅಂತಹ ಶಾಲೆಯಲ್ಲಿ ಶಿಕ್ಷಕರು ದೇವರು. ಮಕ್ಕಳಲ್ಲಿನ ನಿಜವಾದ ಪ್ರತಿಭೆ ಗುರುತಿಸಿ ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಪಾಲಕರು, ಶಿಕ್ಷಕರು ಮತ್ತು ಸಮಾಜಗಳ ಮುಖಂಡರು ಸೇರಿ ಮಾಡಬೇಕು. ಸಂಸ್ಕಾರಭರಿತ ಶಿಕ್ಷಣದಲ್ಲಿರುವ ಸಾಧನೆ ಮತ್ಯಾವುದರಲ್ಲಿಯೂ ಇಲ್ಲ. ಉತ್ತಮ ಕಂಡು ಬರುವುದಿಲ್ಲ, ಕೆಟ್ಟದ್ದು ಆಕರ್ಷಿತವಾಗಿ ಕಾಣುತ್ತದೆ. ಅದಕ್ಕಾಗಿ ಕೆಟ್ಟದ್ದನ್ನು ಕಡೆಗಣಿಸಿ ಒಳ್ಳೆಯದನ್ನು ಹುಡುಕುವ ಕೆಲಸ ಎಲ್ಲರಲ್ಲೂ ಬರಬೇಕು. ಅಂದಾಗ ಮಕ್ಕಳ ವಿದ್ಯಾಭ್ಯಾಸದಲ್ಲಿ ಬದಲಾವಣೆ ಕಂಡು ಉತ್ತಮ ಫಲಿತಾಂಶ ಮಗುವಿನಲ್ಲಿ ಕಾಣಲು ಸಾದ್ಯವೆಂದರು.

ವಿಶೇಷ ಉಪನ್ಯಾಸ ನೀಡಿದ ವಾಗ್ಮಿ ತಾಳಿಕೋಟೆಯ ಅಶೋಕ ಹಂಚಲಿ ಅವರು, ಶಾಲೆಯಿಂದ ಮನೆಗೆ ಮಕ್ಕಳು ಬಂದಾಗ ಪಾಲಕರು ಟಿವಿ ನೋಡುತ್ತ ಹರಟೆ ಹೊಡೆಯುವುದು ಬಿಟ್ಟು ಮಕ್ಕಳು ಬರುವ ಸಮಯದಲ್ಲಿ ಪುಸ್ತಕ, ವಚನ ಗ್ರಂಥಗಳನ್ನು ಹಿಡಿದು ಓದಿ ಆಗ ಮಕ್ಕಳ ಮನಸ್ಸಿನಲ್ಲಿ ಆಗುವ ಬದಲಾವಣೆ ನಿಮಗೆ ತಿಳಿಯಲಿದೆ. ಪ್ರತಿ ಸಾಧಕರ ಸಾಧನೆಯ ಹಿಂದೆ ತಾಯಿ ಪಾತ್ರ ಪ್ರಮುಖವಾಗಿರುತ್ತದೆ. ಮಕ್ಕಳನ್ನು ಪಠ್ಯಕ್ಕೆ ಮಾತ್ರ ಸೀಮಿತವಾಗಿರದೆ ಇತರ ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

ಜೀ ಕನ್ನಡ ವಾಹಿನಿ ಸರಿಗಮಪ ಖ್ಯಾತಿಯ ದಿಯಾ ಹೆಗಡೆ ಕನ್ನಡ ಸಿನೆಮಾ ಗೀತೆ ಜೊತೆಗೆ ಇತರ ಹಾಡು ಹಾಡಿ ರಂಜಿಸಿದರು. ಕಳೆದ ವರ್ಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಕುಂದರಗಿ ಚರಂತಿಮಠದ ವೀರಸಂಗಮೇಶ್ವರ ಶಿವಾಚಾರ್ಯರರು, ಚಿತ್ತರಗಿ ಶಿವಯೋಗ ಮತ್ತು ನಿಸರ್ಗ ಚಿಕಿತ್ಸಾ ಕೇಂದ್ರದ ಬಸವಲಿಂಗ ಸ್ವಾಮೀಜಿ ಸಾನ್ನಿದ್ಯ ವಹಿಸಿದ್ದರು. ಕ್ಷೇತ್ರ ಶಿಕ್ಷಣ ಇಲಾಖೆ ಅಧಿಕಾರಿ ಜಗದೀಶ ಖೋತ, ಸಂಘದ ಆಡಳಿತ ಮಂಡಳಿಯ ವಿ.ಎನ್. ಸಂಕನ್ನವರ, ಜಿ.ಕೆ. ಪಾಟೀಲ, ಎ.ಐ. ಅಕ್ಕಿ, ಆರ್.ಎಂ. ಜಡಿಮಠ, ಜಿ.ಎಂ. ಕಟಗಿ, ರಾಮಪ್ಪ ಗಾಜಪ್ಪನವರ, ಎಸ್.ಕೆ. ಮಠಪತಿ, ಎಸ್.ಐ. ನಿರಾಕಾರಿ, ಪ್ರಾಂಶುಪಾಲರಾದ ರಾಜೇಂದ್ರ ಕೆ, ಕಿರಣ ರಾಜಮನಿ, ಜಿ.ಬಿ. ಗುಳೇದ, ಗೋವಿಂದಪ್ಪ ಗಾಜಪ್ಪನವರ, ಎಂ.ಎಂ. ಬಸವನಾಳ, ಬಸವರಾಜ ದಾವಣಗೇರಿ ಇತರರು ಇದ್ದರು.

Share this article