ಎಸ್.ಪಿ.ಮಹದೇವ್ ಮಾಹಿತಿ । ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕ್ರಮ
ಕನ್ನಡಪ್ರಭ ವಾರ್ತೆ ಅರಕಲಗೂಡುತಾಲೂಕಿನ ಮುದಗನೂರು ಕಾವಲ್ ಮತ್ತು ಅರಸೀಕಟ್ಟೆ ಕಾವಲ್ ಡೀಮ್ಡ್ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದ್ದ ಕಲ್ಲು ಗಣಿಕಾರಿಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಕಲೇಶಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪಿ.ಮಹದೇವ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕಲ್ಲುಗಣಿಕಾರಿಕೆ ನಡೆಸಬಾರದು ಎಂಬ ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಹಾಗೂ ಹಿರಿಯ ಅಧಿಕಾರಿಗಳ ಸೂಚನೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ, ಎರಡು ಕ್ರಷರ್‌ಗಳನ್ನು ವಲಯ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಬಂದ್ ಮಾಡಿಸಿದ್ದು ಯಾವುದೇ ಚಟುವಟಿಕೆ ನಡೆಸದಂತೆ ಹಾಗೂ ವಾಹನಗಳು ಸಂಚರಿಸದಂತೆ ಟ್ರಂಚ್ ತೆಗೆಸಲಾಗಿದೆ. ಎರಡು ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದರು.ಮುದಗನೂರು ಕಾವಲ್‌ನಲ್ಲಿ 158 ಎಕರೆ ಸಂರಕ್ಷಿತ ಅರಣ್ಯವಿದ್ದು ಇದರಲ್ಲಿ ರಂಗಸ್ವಾಮಿ ಎಂಬುವವರು 4 ಎಕರೆ, ಕೃಷ್ಣೇಗೌಡ ಅವರು 15 ಎಕರೆ ಹಾಗೂ ಶಿರೀನ್ 10 ಎಕರೆ ಪ್ರದೇಶದಲ್ಲಿ ಜಿಲ್ಲಾಧಿಕಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ಪಡೆದು ಕಳೆದ ಎಂಟು ವರ್ಷಗಳಿಂದ ಕಲ್ಲು ಗಣಿಕಾರಿಕೆ ನಡೆಸುತ್ತಿದ್ದರು. ಅದೇ ರೀತಿ ಅರಸೀಕಟ್ಟೆ ಕಾವಲ್‌ನ ಸರ್ವೆ ನಂ 116ರಲ್ಲಿ ಸುರೇಶ್ ಎಂಬುವವರು 9 ಎಕರೆ ಮತ್ತು ಮಲ್ಲಮ್ಮ ಎಂಬುವರು 5 ಎಕರೆ ಪ್ರದೆಶದಲ್ಲಿ ಗಣಿಗಾರಿಕೆ ನಡೆಸುತ್ತಿದ್ದರು. ಇದನ್ನು ಸಹ ಬಂದ್ ಮಾಡಿಸಲಾಗಿದೆ. ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಬಾರದು ಎಂಬ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಕಂದಾಯ ಇಲಾಖೆ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳಿಗೂ ಈ ಕುರಿತು ಸೂಚನೆ ಹೋಗಿದೆ ಎಂದು ತಿಳಿಸಿದರು.
ಸದ್ಯ ಎರಡೂ ಕ್ರಷರ್‌ಗಳನ್ನು ಬಂದ್ ಮಾಡಿಸಿದ್ದು ಯಾವುದೇ ಚಟುವಟಿಕೆ ನಡೆಸದಂತೆ ಕ್ರಮ ಕೈಗೊಳ್ಳಲಾಗಿದೆ. ಹಾಸನ ಅರಣ್ಯ ವಿಭಾಗದ ಅರಸೀಕೆರೆ, ಚನ್ನರಾಯಪಟ್ಟಣ ಸೇರಿದಂತೆ ಎಲ್ಲ ಕಡೆಗಳಲ್ಲಿ ಈ ಕುರಿತು ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದರು.ಗಿಡಗಳ ವಿತರಣೆ:
ಅರಣ್ಯ ಇಲಾಖೆ ಕೃಷಿ ಪ್ರೋತ್ಸಾಹ ಯೋಜನೆಯಡಿ ಜಿಲ್ಲೆಯಲ್ಲಿ 1.5 ಲಕ್ಷ ಗಿಡಗಳನ್ನು ಬೆಳೆಸಿ ರೈತರು ಮತ್ತು ಸಾರ್ವಜನಿಕರಿಗೆ ಸಬ್ಸಿಡಿ ದರದಲ್ಲಿ ವಿತರಿಸುವ ಕಾರ್ಯ ಕೈಗೊಂಡಿದೆ. ವಿವಿಧ ಜಾತಿಯ ಗಿಡಗಳನ್ನು ಬೆಳೆಸಿದ್ದು ಇದಕ್ಕೆ ದರ ನಿಗದಿ ಪಡಿಸಲಾಗಿದೆ. ಇಲಾಖೆ ಮೂಲಕವೇ ರೈತರ ಜಮೀನಿನಲ್ಲೆ ಗಿಡಗಳನ್ನು ನೆಡಸಲಾಗುವುದು. ಇದನ್ನು ಬೆಳೆಸಲು ಗಿಡವೊಂದಕ್ಕೆ ಮೊದಲ ವರ್ಷ 35 ರು., ಎರಡನೇ ವರ್ಷ 45 ರು. ಹಾಗೂ ಮೂರನೇ ವರ್ಷ 50 ರು. ರಂತೆ ಒಟ್ಟು 125 ರು. ಅನ್ನು ಬದುಕುಳಿದಿರುವ ಗಿಡಗಳಿಗೆ ಪ್ರೋತ್ಸಾಹ ಧನ ರೀತಿಯಲ್ಲಿ ನೀಡಲಾಗುವುದು ಎಂದರು.ಪಟ್ಟಣದ ಅರಣ್ಯ ಇಲಾಖೆ ಕಚೇರಿಯನ್ನು ಸದ್ಯದಲ್ಲೆ ಹೊಳೆನರಸೀಪುರ ರಸ್ತೆ ತಿಮ್ಮಕ್ಕ ಪಾರ್ಕ್ ಸಮೀಪ ನಿರ್ಮಿಸಿರುವ ನೂತನ ಕಟ್ಟಡಕ್ಕೆ ಸ್ಥಳಾಂತರಿಸುತ್ತಿರುವುದಾಗಿ ಹೇಳಿದರು.
ವಲಯ ಅರಣ್ಯಾಧಿಕಾರಿ ಯಶ್ಮ, ಮಾಚಮ್ಮ ಇದ್ದರು.