ಪ್ರವೀಣ ಹೆಗಡೆ ಕರ್ಜಗಿಶಿರಸಿ: ನಗರ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಬೀದಿನಾಯಿಗಳ ಹಾವಳಿ ಹೆಚ್ಚುತ್ತಿದ್ದು, ಇದರ ನಿಯಂತ್ರಣಕ್ಕೆ ನಗರಸಭೆಯು ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಆರೋಪ ಕಳೆದೆರಡು ವರ್ಷಗಳಿಂದ ಕೇಳಿ ಬರುತ್ತಿದೆ. ಇದೀಗ ಬೀದಿನಾಯಿಗಳ ನಿಯಂತ್ರಣಕ್ಕೆ ಮುಹೂರ್ತ ನಿಗದಿಯಾಗಿದ್ದು, ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ. ವಾರದಲ್ಲಿ ಆಪರೇಶನ್ ಆರಂಭಗೊಳ್ಳಲಿದೆ.
ನಗರಸಭೆಯ ೨೧ ವಾರ್ಡ್‌ಗಳಲ್ಲಿ ವರ್ಷದಿಂದ ವರ್ಷಕ್ಕೆ ನಾಯಿಗಳ ಸಂತತಿ ಹೆಚ್ಚುತ್ತಿದೆ. ಕೆಲ ವಾರ್ಡ್‌ಗಳಲ್ಲಿ ಮಹಿಳೆಯರು, ಮಕ್ಕಳು, ವೃದ್ಧರು ತಿರುಗಾಡುವುದಕ್ಕೆ ಭಯಪಡುವಂಥ ವಾತಾವರಣ ಸೃಷ್ಟಿಯಾಗಿದೆ ಅಲ್ಲದೇ, ಹೆಚ್ಚಾಗಿ ರಸ್ತೆಯ ಮೇಲೆಯೇ ಕಚ್ಚಾಡುತ್ತ, ಏಕಾಏಕಿ ನುಗ್ಗುವ ಇವುಗಳಿಂದ ಬೈಕ್ ಸವಾರರು ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ.ಪ್ರತಿವರ್ಷ ನಗರದಲ್ಲಿ ಅಂದಾಜು ೭೦೦ಕ್ಕೂ ಹೆಚ್ಚು ನಾಯಿ ಕಚ್ಚಿದ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಈ ಕಾರಣದಿಂದ ಬೀದಿನಾಯಿಗಳನ್ನು ನಿಯಂತ್ರಣ ಮಾಡಬೇಕೆಂದು ಸಾರ್ವಜನಿಕರು ಅಧಿಕಾರಿಗಳನ್ನು ಆಗ್ರಹಿಸುತ್ತಿರುವುದರ ಜತೆ ನಗರಸಭೆಯ ಪ್ರತಿ ಸಭೆಗಳಲ್ಲಿಯೂ ಸದಸ್ಯರು ಒತ್ತಾಯ ಮಾಡುತ್ತ ಬಂದಿದ್ದಾರೆ. ಇದೀಗ ಎಚ್ಚೆತ್ತ ನಗರಸಭೆಯು ಮುಂದಿನ ವಾರದಿಂದ ಬೀದಿನಾಯಿಗಳ ಸಂತಾನಶಕ್ತಿ ಹರಣ ಚಿಕಿತ್ಸೆ ನಡೆಸಲು ಕ್ರಮ ಕೈಗೊಂಡಿದೆ.ಕಳೆದ ಒಂದು ವರ್ಷದಿಂದ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡುವುದಕ್ಕೆ ಟೆಂಡರ್ ಕರೆಯಲಾಗಿತ್ತು. ಎನಿಮಲ್ ವೆಲ್‌ಫೇರ್ ಬೋರ್ಡ್‌ನಲ್ಲಿ ನೋಂದಾಯಿತ ಎನ್‌ಜಿಒ ಸಂಸ್ಥೆಗಳು ಮಾತ್ರ ಟೆಂಡರ್ ಹಾಕುವುದಕ್ಕೆ ಅರ್ಹರಾಗಿರುತ್ತವೆ. ಅದರೆ ಈ ಟೆಂಡರ್‌ನಲ್ಲಿ ಯಾರೂ ಭಾಗವಹಿಸದೇ ಹಿನ್ನಡೆಯಾಗಿತ್ತು.
ಇದೀಗ ಮೂರನೇ ಬಾರಿಗೆ ಕರೆದ ಟೆಂಡರ್‌ನಲ್ಲಿ ಬೆಂಗಳೂರಿನ ವಾಯ್ಸ್ ಕೇರ್ ಎನಿಮಲ್ ಟ್ರಸ್ಟ್‌ನವರು ಭಾಗವಹಿಸಿ, ಟೆಂಡರ್ ಪಡೆದಿದ್ದಾರೆ. ಸುಮಾರು ₹೨೬ ಲಕ್ಷ ವೆಚ್ಚದಲ್ಲಿ ಈ ಕಾರ್ಯ ನಡೆಯಲಿದೆ. ಈ ಹಿಂದೆಯೂ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆದರೆ ಅದು ಪೂರ್ಣಗೊಂಡಿರಲಿಲ್ಲ. ಈ ಬಾರಿ ನಡೆಸುವ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯನ್ನು ಕ್ರಮಬದ್ಧವಾಗಿ ಕೈಗೊಳ್ಳಲಾಗುವುದು ಎಂದು ನಗರಸಭೆಯ ಅಧಿಕಾರಿಗಳು ತಿಳಿಸಿದರು.ಪಶು ಸಂಗೋಪನಾ ಇಲಾಖೆಯ ಸಂಖ್ಯೆಯ ಪ್ರಕಾರ ನಗರದಲ್ಲಿ ೧,೫೮೦ ಬೀದಿ ನಾಯಿಗಳಿವೆ. ಅದರಲ್ಲಿ ಗಂಡು ಮತ್ತು ಹೆಣ್ಣು ಎರಡಕ್ಕೂ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಅದರಲ್ಲಿ ಗರ್ಭಿಣಿಯಿರುವ ಹಾಗೂ ಸಧ್ಯ ಮರಿ ಹಾಕಿರುವ ನಾಯಿಗಳನ್ನು ಹೊರತುಪಡಿಸಿ ಇನ್ನುಳಿದ ನಾಯಿಗಳಿಗೆ ಈ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ ಎಂದು ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವರಾಜ ಬಿ.ಕೆ. ತಿಳಿಸಿದರು.
ವಾರದಲ್ಲಿ ಆಪರೇಶನ್: ನಗರಸಭೆ ಕಚೇರಿಯ ಹಿಂಬದಿಯಲ್ಲಿ ಹಿಡಿದ ನಾಯಿಗಳನ್ನು ತಂದು ಶಸ್ತ್ರಚಿಕಿತ್ಸೆ ಮಾಡುವುದಕ್ಕೆ ಶಸ್ತ್ರಚಿಕಿತ್ಸಾ ಕೊಠಡಿ ಸಿದ್ಧಪಡಿಸಲಾಗುತ್ತಿದೆ. ಇದಕ್ಕಾಗಿ ಹಳೆಯ ಶೆಡ್‌ನ್ನು ದುರಸ್ತಿ ಮಾಡಲಾಗುತ್ತಿದೆ. ಇನ್ನೊಂದು ವಾರದಲ್ಲಿ ಆಪರೇಶನ್ ಆರಂಭಗೊಳ್ಳಲಿದೆ ಎಂದು ಶಿರಸಿ ನಗರಸಭೆ ಪೌರಾಯುಕ್ತ ಎಚ್. ಕಾಂತರಾಜು ತಿಳಿಸಿದರು.