ಹಸಿತ್ಯಾಜ್ಯ ಸಿಎನ್‌ಜಿ ಮಾರುಕಟ್ಟೆಗೆ ಶೀಘ್ರ ಅನುಮತಿ: ರಾಜೇಶ್‌ ನಾಯ್ಕ್‌

KannadaprabhaNewsNetwork |  
Published : Dec 19, 2023, 01:45 AM IST
ಶಾಸಕ, ಕೃಷಿ ಸಾಧಕ ರಾಜೇಶ್‌ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಈ ಹಸಿ ತ್ಯಾಜ್ಯದಿಂದ ಅನಿಲದ ಜತೆಗೆ ನಿತ್ಯ 15 ಕೆಜಿಯಷ್ಟುಗೊಬ್ಬರವೂ ಈ ಘಟಕದ ಮೂಲಕ ತಯಾರಾಗುತ್ತಿದೆ. ಸುಮಾರು 60 ಸೆಂಟ್ಸ್‌ ಪ್ರದೇಶದಲ್ಲಿ ಈ ಘಟಕವನ್ನು ರಚಿಸಲಾಗಿದ್ದು, ಸುಮಾರು 4 ಕೋಟಿ ರು.ಗಳಷ್ಟುಹೂಡಿಕೆ ಮಾಡಲಾಗಿದೆ. ಇನ್ನೂ 15 ಟನ್‌ ಹಸಿ ತ್ಯಾಜ್ಯ ವಿಲೇವಾರಿ ಮಾಡಲು ಜಾಗವಿದ್ದು, ಇನ್ನಷ್ಟು ಹಸಿ ತ್ಯಾಜ್ಯ ದೊರೆತದೆ ಇನ್ನೊಂದು ಘಟಕ ರಚನೆಗೆ ಸಿದ್ಧ ಇರುವುದಾಗಿ ರಾಜೇಶ್‌ ನಾಯ್ಕ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರುಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ವಿಲೇವಾರಿಗೆ ತಲೆನೋವಾಗಿದ್ದ ಹಸಿ ತ್ಯಾಜ್ಯವನ್ನು ಉಪಯೋಗಿಸಿಕೊಂಡು ಸಿಎನ್‌ಜಿ (ಕಂಪ್ರೆಸ್ಡ್‌ ನ್ಯಾಚುರಲ್ ಗ್ಯಾಸ್‌) ಉತ್ಪಾದಿಸುವ ರಾಜ್ಯದ ಪ್ರಥಮ ಘಟಕವನ್ನು ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್‌ ಅವರು ತಮ್ಮದೇ ಒಡ್ಡೂರು ಫಾರ್ಮ್ಸ್‌ನಲ್ಲಿ ಸ್ಥಾಪಿಸಿದ್ದು, ಇಲ್ಲಿ ಉತ್ಪಾದನೆಯಾಗುವ ಸಿಎನ್‌ಜಿಯನ್ನು ಮಾರುಕಟ್ಟೆಗೆ ಒದಗಿಸಲು ಭಾರತ ಸರ್ಕಾರದ ಪೆಟ್ರೋಲಿಯಂ ಸಚಿವಾಲಯದಿಂದ ಶೀಘ್ರ ಅನುಮತಿ ದೊರೆಯಲಿದೆ.ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಗೌರವ ಅತಿಥಿಯಾಗಿ ಭಾಗವಹಿಸಿದ ಅವರು ಸಂವಾದ ಕಾರ್ಯಕ್ರಮದಲ್ಲಿ ಈ ವಿಷಯ ತಿಳಿಸಿದರು.ಬಂಟ್ವಾಳ ಪುರಸಭೆಯ ಹಸಿ ತ್ಯಾಜ್ಯ ವಿಲೇವಾರಿಗೆ ಸಮಸ್ಯೆ ಒದಗಿದಾಗ ನನ್ನದೇ ಒಡ್ಡೂರು ಫಾರ್ಮ್ಸ್‌ಗೆ ಅದನ್ನು ಕೊಂಡೊಯ್ದು ವಿಲೇವಾರಿ ಮಾಡುವ ಯೋಜನೆ ರೂಪಿಸಿದೆ. ಈಗ ದಿನವೊಂದಕ್ಕೆ 15 ಟನ್‌ ಹಸಿ ತ್ಯಾಜ್ಯ ಪೂರೈಕೆಯಾಗುತ್ತಿದ್ದು, 700 ಕೆಜಿಯಷ್ಟು ಗ್ಯಾಸ್‌ ಉತ್ಪತ್ತಿ ಮಾಡಲಾಗುತ್ತಿದೆ. ಇದನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಶೀಘ್ರ ಅನುಮತಿ ದೊರೆಯುವ ವಿಶ್ವಾಸವಿದೆ ಎಂದರು.

ಈ ಹಸಿ ತ್ಯಾಜ್ಯದಿಂದ ಅನಿಲದ ಜತೆಗೆ ನಿತ್ಯ 15 ಕೆಜಿಯಷ್ಟುಗೊಬ್ಬರವೂ ಈ ಘಟಕದ ಮೂಲಕ ತಯಾರಾಗುತ್ತಿದೆ. ಸುಮಾರು 60 ಸೆಂಟ್ಸ್‌ ಪ್ರದೇಶದಲ್ಲಿ ಈ ಘಟಕವನ್ನು ರಚಿಸಲಾಗಿದ್ದು, ಸುಮಾರು 4 ಕೋಟಿ ರು.ಗಳಷ್ಟುಹೂಡಿಕೆ ಮಾಡಲಾಗಿದೆ. ಇನ್ನೂ 15 ಟನ್‌ ಹಸಿ ತ್ಯಾಜ್ಯ ವಿಲೇವಾರಿ ಮಾಡಲು ಜಾಗವಿದ್ದು, ಇನ್ನಷ್ಟು ಹಸಿ ತ್ಯಾಜ್ಯ ದೊರೆತದೆ ಇನ್ನೊಂದು ಘಟಕ ರಚನೆಗೆ ಸಿದ್ಧ ಇರುವುದಾಗಿ ರಾಜೇಶ್‌ ನಾಯ್ಕ್‌ ತಿಳಿಸಿದರು.ನದಿಮುಖಜ ಭೂಮಿಯಲ್ಲಿ ಕೃಷಿಗೆ ಸಲಹೆ:ದ.ಕ. ಜಿಲ್ಲೆಯಾದ್ಯಂತ ನದಿಗಳ ಸುತ್ತಮುತ್ತಲಿನ ಭೂಮಿಯನ್ನು ಮಳೆಗಾಲದ ಮೂರು ತಿಂಗಳು ಹೊರತುಪಡಿಸಿ ಇತರ ಅವಧಿಯಲ್ಲಿ ಕೃಷಿಗೆ ಬಳಸಿಕೊಳ್ಳುವ ಮೂಲಕ ಅಂತರ್ಜಲವನ್ನು ಕೂಡ ಕಾಯ್ದುಕೊಳ್ಳಬಹುದು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಗಮನ ಹರಿಸಬೇಕಾಗಿದೆ, ಈ ನಿಟ್ಟಿನಲ್ಲಿ ಭೂಮಿ ಗುರುತಿಸಲು ಸರ್ವೇ ಕಾರ್ಯವೂ ಆರಂಭವಾಗಿದೆ ಎಂದು ರಾಜೇಶ್‌ ನಾಯ್ಕ್‌ ಸಲಹೆ ನೀಡಿದರು.

ಮೇವಿನ ಕೊರತೆಯಿಂದ ಜಿಲ್ಲೆಯಲ್ಲಿ ದನ ಸಾಕಲು ಕೃಷಿಕರು ಹಿಂದೇಟು ಹಾಕುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಲಭ್ಯವಿರುವ ನದಿ ಮುಖಜ ಭೂಮಿಯಲ್ಲಿ ಜೋಳದ ಗಿಡಗಳನ್ನು ಬೆಳೆಸಿ ಸೂಕ್ತ ರೀತಿಯಲ್ಲಿ ದಾಸ್ತಾನು ಮಾಡಿದರೆ ಪಶು ಆಹಾರವಾಗಿ ವರ್ಷವಿಡೀ ಬಳಕೆ ಮಾಡಬಹುದು. ತಾನು ಹಲವು ವರ್ಷಗಳಿಂದ ಈ ಪದ್ಧತಿಯನ್ನು ಅಳವಡಿಸಿಕೊಂಡಿದ್ದೇನೆ ಎಂದರು.ಬರಡು ಭೂಮಿಯಲ್ಲಿ ಕೃಷಿ: ಕೃಷಿಯಲ್ಲಿ ನನ್ನ ಸಾಧನೆ ದೊಡ್ಡದಲ್ಲ. ಆದರೆ ಕಲ್ಲು ಕ್ವಾರಿಯ ಶುದ್ಧ ಬರಡು ಭೂಮಿಯ ಮೇಲೆ ವಿಶ್ವಾಸ ಇಟ್ಟು ಕೃಷಿ ಮಾಡಿ ಯಶಸ್ವಿಯಾದೆ. ಕೃಷಿ ಕ್ಷೇತ್ರ ಕೈಗೆತ್ತಿಕೊಂಡಾಗ ಇದೆಲ್ಲ ಬೇಕಾ ಎನ್ನುವ ನೆಗೆಟಿವ್‌ ಮಾತುಗಳು ಬಂದವು. ನಾನು ಜಾಗ ಖರೀದಿಸಿದಾಗ ಅಲ್ಲಿ ಒಂದು ಗಿಡವೂ ಇರಲಿಲ್ಲ. ಅಲ್ಲಿ ಎರಡೆಕರೆಯ ಕೆರೆ ಮಾಡಿ ಎಲ್ಲ ಬಗೆಯ ಕೃಷಿ, ಹೈನುಗಾರಿಕೆ, ಸಾವಯವ ಮಾದರಿಯಲ್ಲಿ ಹೊಸ ಬಗೆಯ ಕೃಷಿ ಚಟುವಟಿಕೆ ನಡೆಸಿ ಈಗ ಇಷ್ಟು ದೊಡ್ಡ ಮಟ್ಟದಲ್ಲಿ ಕೃಷಿ ಕಾಯಕ ನಡೆಸುವಂತಾಗಿದೆ ಎಂದು ರಾಜೇಶ್‌ ನಾಯ್ಕ್‌ ತಮ್ಮ ಯಶಸ್ಸಿನ ಮೆಲುಕು ಹಾಕಿದರು.ರಾಜಕೀಯ ನನ್ನ ಸಬ್ಜೆಕ್ಟ್‌ ಆಗಿರಲಿಲ್ಲ. ಈಗಲೂ ರಾಜಕೀಯ ಇಲ್ಲದಿದ್ದರೂ ಜೀವನಕ್ಕೆ ದಾರಿಗಳಿವೆ. 1989ರಿಂದಲೇ ಚುನಾವಣೆಗೆ ನಿಲ್ಲಲು ಒತ್ತಡವಿತ್ತು. ಈಗಲೂ ನನಗೆ ಬೆಳಗ್ಗೆದ್ದು ತರಕಾರಿ ಕೊಯ್ದರೆ ಅದೇ ಖುಷಿ ಎಂದ ಅವರು, ೫ ಸೆಂಟ್ಸ್‌ ಜಾಗವಿದ್ದರೂ ಕೃಷಿ ಮಾಡಿ ಬದುಕುವ ದಾರಿ ಕಂಡುಕೊಳ್ಳಬಹುದು. 2 ತಿಂಗಳು ಕೆಲಸ ಮಾಡಿ ಇಡೀ ವರ್ಷ ಕುಟುಂಬಕ್ಕೆ ಊಟ ಕೊಡುವ ಕ್ಷೇತ್ರ ಇದ್ದರೆ ಅದು ಕೃಷಿ ಮಾತ್ರ ಎಂದು ಹೇಳಿದರು.ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಪ್ರೊ. ಬಾಲಕೃಷ್ಣ ಗಟ್ಟಿ ಉದ್ಘಾಟಿಸಿದರು. ಪ್ರೆಸ್‌ ಕ್ಲಬ್‌ ಅಧ್ಯಕ್ಷ ಪಿ.ಬಿ. ಹರೀಶ್‌ ರೈ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್‌ನ ಅಧ್ಯಕ್ಷ ರಾಮಕೃಷ್ಣ ಆರ್‌., ಪ್ರಧಾನ ಕಾರ್ಯದರ್ಶಿ ಮುಹಮ್ಮದ್‌ ಆರಿಫ್‌, ಇಬ್ರಾಹಿಂ ಅಡ್ಕಸ್ಥಳ ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ