ಕನ್ನಡಪ್ರಭ ವಾರ್ತೆ ತಿಪಟೂರು
ತಿಪಟೂರು ಉಪ ವಿಭಾಗದ ವ್ಯಾಪ್ತಿಯಲ್ಲಿ ಎತ್ತಿನಹೊಳೆ ಯೋಜನೆಗಾಗಿ ರೈತರು ಭೂಮಿಯನ್ನು ಬಿಟ್ಟುಕೊಟ್ಟಿದ್ದರು. ಕೆಲ ರೈತರು ಭೂ ಸ್ವಾಧೀನವಾಗಿರುವ ತಮ್ಮ ಜಮೀನುಗಳ ಅವಶ್ಯಕ ದಾಖಲಾತಿಗಳ ನೀಡದ ಕಾರಣ ಅವರಿಗೆ ಪರಿಹಾರ ನೀಡಲಾಗಿಲ್ಲ. ಆದ್ದರಿಂದ ನ.14 ಮತ್ತು 15ರಂದು ನಗರದ ತಾಲೂಕು ಆಡಳಿದ ಸೌಧದಲ್ಲಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಭಿಯಾನ ಹಮ್ಮಿಕೊಂಡಿದ್ದು ಅರ್ಹ ರೈತರು ತಮ್ಮ ದಾಖಲಾತಿ ನೀಡಿದರೆ ಅವರ ಖಾತೆಗೆ ಹಣ ವರ್ಗಾವಣೆಯಾಗಲಿದೆ ಎಂದು ಉಪವಿಭಾಗಾಧಿಕಾರಿ ಸಪ್ತಶ್ರೀ ತಿಳಿಸಿದರು.ನಗರದ ತಾಲೂಕು ಆಡಳಿತದ ಸೌಧದಲ್ಲಿ ಬುಧವಾರ ಎತ್ತಿನಹೊಳೆ ಭೂಸ್ವಾಧೀನ ಸಂಬಂಧ ಪರಿಹಾರ ಹಣ ಪಾವತಿ ಬಗ್ಗೆ ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಒಟ್ಟು 43 ಕಿ.ಮೀ ಎತ್ತಿನಹೊಳೆ ನಾಲೆ ಹಾದುಹೋಗಿದ್ದು 921 ಎಕರೆ ಭೂ ಸ್ವಾಧೀನವಾಗಿದೆ. 31 ಹಳ್ಳಿಗಳು ಈ ಯೋಜನೆಗೆ ಸೇರಿದ್ದು ಈಗಾಗಲೇ 29 ಹಳ್ಳಿಗಳ ಕೆಲಸ ಮುಗಿದಿದ್ದು ಎರಡು ಹಳ್ಳಿಗಳು ಬಾಕಿ ಉಳಿದಿವೆ. 1046 ಖಾತೆದಾರರಿದ್ದು ತಾಲೂಕಿನಲ್ಲಿ 126ಕೋಟಿ ರು. ಹಣ ಬಿಡುಗಡೆಯಾಗಿದೆ. ಅದರಲ್ಲಿ ಅಗತ್ಯ ದಾಖಲಾತಿ ಒದಗಿಸಿರುವ ಭೂಸ್ವಾಧೀನ ರೈತರಿಗೆ ಈಗಾಗಲೇ ಹಣ ವರ್ಗಾವಣೆಯಾಗಿದೆ. 78ಕೋಟಿರು. ಬಾಕಿಯಿದ್ದು 425 ಖಾತೆದಾರರು ಅಗತ್ಯ ದಾಖಲಾತಿ ನೀಡಿಲ್ಲ. ಕಳೆದ 15ದಿನಗಳ ಹಿಂದೆ ಸಂಬಂಧಪಟ್ಟ ಗ್ರಾಮಗಳಿಗೆ ತೆರಳಿ ರೈತರಿಗೆ ದಾಖಲಾತಿ ನೀಡುವಂತೆ ಸೂಚನೆ ಕೊಟ್ಟಿದ್ದರೂ ಸರಿಯಾದ ದಾಖಲಾತಿ ನೀಡಿಲ್ಲ ಎಂದರು. ತುರುವೇಕೆರೆ ತಾಲೂಕಿನಲ್ಲಿ 48 ಎಕರೆ ಭೂಸ್ವಾಧೀನವಾಗಿದ್ದು 61 ಖಾತೆದಾರರಿದ್ದು 7ಕೋಟಿರು. ಹಣ ಬಿಡುಗಡೆಯಾಗಿದೆ. 8 ಖಾತೆದಾರರು ದಾಖಲಾತಿ ಸಲ್ಲಿಸಿಲ್ಲ. 3-4ಕೋಟಿರು. ಬಾಕಿಯಿದೆ. ಹಾಗೆಯೇ ಚಿಕ್ಕನಾಯಕನಹಳ್ಳಿಯಲ್ಲಿ 166ಎಕರೆ ಭೂ ಸ್ವಾಧೀನವಾಗಿದ್ದು 64 ಖಾತೆದಾರರಿದ್ದು 25.37ಕೋಟಿ ರು. ಹಣ ಬಿಡುಗಡೆಯಾಗಿದ್ದು 31 ಜನ ಖಾತೆದಾರು ದಾಖಲಾತಿ ನೀಡದ ಕಾರಣ 12 ಕೋಟಿ ರು. ಪಾವತಿ ಬಾಕಿಯಿದೆ ಎಂದರು. ಭೂಮಿ ಬಿಟ್ಟುಕೊಟ್ಟ ರೈತರಲ್ಲಿ ಕೆಲ ರೈತರು ಯಾವ ಕಾರಣಕ್ಕೆ ದಾಖಲಾತಿ ನೀಡಿಲ್ಲ ಎಂಬುದು ತಿಳಿದು ಬಂದಿಲ್ಲ. ವಂಶವೃಕ್ಷ, ಅಫಿಡೆವಿಟ್, ಒಪ್ಪಿಗೆ ಪ್ರಮಾಣ ಪತ್ರದೊಂದಿಗೆ ಪಹಣಿ, ಎಂ.ಆರ್, ವಿಎಲ್‌ಇಗಳ ಸಹಿಯ ರಶೀದಿ, ಕಂದಾಯ ರಶೀದಿಯನ್ನು ನೀಡಬೇಕು. ಆದ್ದರಿಂದ ಭೂಮಿ ಬಿಟ್ಟುಕೊಟ್ಟಿರುವ ರೈತರು ಅಭಿಯಾನಗಳಂದು ತಪ್ಪದೇ ತಾಲೂಕು ಕಚೇರಿಗೆ ಬಂದು ಅಗತ್ಯ ದಾಖಲಾತಿಗಳನ್ನು ನೀಡಿದರೆ ಪರಿಶೀಲನೆ ಮಾಡಿ ಅವರ ಖಾತೆ ಹಣ ಜಮೆ ಮಾಡಲಾಗುವುದು. ಈಗಾಗಲೇ ಗ್ರಾಮಗಳಲ್ಲಿ ಆಟೋಗಳ ಮೂಲಕ ಪ್ರಚಾರ ನಡೆಸಲಾಗುತ್ತಿದೆ ಎಂದರು. ಎತ್ತಿನಹೊಳೆ ವಿಶೇಷ ಭೂಸ್ವಾಧೀನಾಧಿಕಾರಿ ಮಂಜುನಾಥ್ ಮಾತನಾಡಿ, ತಾಲೂಕಿನಲ್ಲಿ 43 ಕಿ.ಮೀವರೆಗೂ ಎತ್ತಿನಹೊಳೆ ನಾಲೆ ಹೋಗಲಿದ್ದು ಈಗಾಗಲೇ 30 ಕಿ.ಮಿ. ಕೆಲಸವಾಗಿದ್ದು ಉಳಿದ 13 ಕಿ.ಮೀ ಕೆಲಸವನ್ನು ಶೀಘ್ರವಾಗಿ ಪ್ರಾರಂಭಿಸಲಾಗುವುದು. ಈ ಯೋಜನೆಯಿಂದ ತಾಲೂಕಿಗೆ 0.5 ಟಿಎಂಸಿ ನೀರು ಸಿಗಲಿದೆ. ಆರ್‌ಎಫ್‌ಟಿಎಲ್‌ಆರ್ ಕಾಯ್ದೆಯಡಿ ಪರಿಹಾರ ಕೊಡಲಾಗುತ್ತಿದೆ. ಪರಿಹಾರ ಕೊಡುವಲ್ಲಿ ಸರ್ಕಾರದ ತೀರ್ಮಾನವೇ ಅಂತಿಮವಾಗಿದ್ದು 2025 ಆಗಸ್ಟ್ 25ರೊಳಗೆ ಎತ್ತಿನಹೊಳೆ ಯೋಜನೆ ಕಾಮಗಾರಿಯನ್ನು ಮುಗಿಸುವ ಗುರಿ ನಿಗದಿಪಡಿಸಿಕೊಳ್ಳಲಾಗಿದೆ ಎಂದರು.ಈ ವೇಳೆ ತಹಸೀಲ್ದಾರ್ ಪವನ್‌ಕುಮಾರ್, ಎಇಇ ಶಶಾಂಕ್ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.