ಗರ್ಭಕೋಶ, ಸ್ತನ ಕ್ಯಾನ್ಸರ್‌ ತಡೆಗೆ ಶೀಘ್ರ ಲಸಿಕೆ: ಡಾ.ನಾಗೇಶ

KannadaprabhaNewsNetwork |  
Published : Feb 08, 2024, 01:31 AM IST
ಚಿತ್ರ 7ಬಿಡಿಆರ್‌2ಬೀದರ್‌ನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಎಫ್‌ಪಿಎಐ ಬೀದರ್‌ ಶಾಖೆಯ ಅಧ್ಯಕ್ಷ ಡಾ. ನಾಗೇಶ ಪಾಟೀಲ್‌ ಮಾತನಾಡಿದರು. | Kannada Prabha

ಸಾರಾಂಶ

ವಿಶ್ವದಾದ್ಯಂತ ಪ್ರತಿ 2 ನಿಮಿಷಕ್ಕೆ ಒಬ್ಬ ಮಹಿಳೆ ನಿಧನ ಹೊಂದುತ್ತಿದ್ದಾರೆ. 9 ರಿಂದ 14 ವರ್ಷ ವಯಸ್ಸಿನವರಿಗೆ ಎಚ್‌ಪಿವಿ ಲಸಿಕೆ ನೀಡಿ ರೋಗ ತಡೆಯಬಹುದು ಎಂದು ಭಾರತೀಯ ಕುಟುಂಬ ಯೋಜನಾ ಸಂಘದ ಶಾಖೆಯ ಅಧ್ಯಕ್ಷ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಬೀದರ್‌

ದೇಶಾದ್ಯಂತ ಮಹಿಳೆಯರಿಗೆ ಮಾರಕವಾಗಿ ಕಾಡುತ್ತಿರುವ ಗರ್ಭಕೋಶದ ಕ್ಯಾನ್ಸರ್‌ ಹಾಗೂ ಸ್ತನ ಕ್ಯಾನ್ಸರ್‌ ಪತ್ತೆಗೆ ಭಾರತೀಯ ಕುಟುಂಬ ಯೋಜನಾ ಸಂಘದ ಬೀದರ್‌ ಶಾಖೆಯಲ್ಲಿ ಅತ್ಯಾಧುನಿತ ಯಂತ್ರೋಪಕರಣ ಗಳಿಂದ ಪತ್ತೆ ಹಚ್ಚಲಾಗುತ್ತಿದೆ. ಅಲ್ಲದೆ ಶೀಘ್ರದಲ್ಲಿ ರೋಗ ಬಾರದಂತೆ ತಡೆಯಲು ಲಸಿಕೆ ನೀಡುವ ಕಾರ್ಯ ಆರಂಭಿಸಲಾಗುತ್ತಿದೆ. ಇದರ ಸದುಪಯೋಗವನ್ನು ಜಿಲ್ಲೆಯ ಜನತೆ ಪಡೆದುಕೊಳ್ಳಬೇಕೆಂದು ಭಾರತೀಯ ಕುಟುಂಬ ಯೋಜನಾ ಸಂಘದ ಶಾಖೆಯ ಅಧ್ಯಕ್ಷ ಡಾ. ನಾಗೇಶ ಪಾಟೀಲ್‌ ಕರೆ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಗರ್ಭಕೋಶದ ಕೊರಳಿನ ಕ್ಯಾನ್ಸರ್‌ ಅತಿ ಹೆಚ್ಚು ಮಹಿಳೆಯರಿಗೆ ಕಾಡುತ್ತಿರುವ ರೋಗವಾಗಿದೆ. ವಿಶ್ವದಾದ್ಯಂತ ಪ್ರತಿ ಎರಡು ನಿಮಿಷಕ್ಕೆ ಒಬ್ಬ ಮಹಿಳೆ ನಿಧನ ಹೊಂದುತ್ತಿದ್ದಾಳೆ. ಪ್ರತಿ ವರ್ಷ ಮೂರು 3 ಲಕ್ಷ ಮಹಿಳೆಯರು ಈ ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಿದ್ದಾರೆ ಎಂದರು.

ಇನ್ನು ಭಾರತದಲ್ಲಿ ಪ್ರತಿ ವರ್ಷ 77,348 (2023) ಮಹಿಳೆಯರು ಈ ಕ್ಯಾನ್ಸರ್‌ನಿಂದ ಮರಣ ಹೊಂದುತ್ತಿದ್ದಾರೆ. ಭಾರತದಲ್ಲಿ ಇದು ಅತ್ಯಂತ ಸಾಮಾನ್ಯವಾಗಿ ಹರಡುತ್ತಿದ್ದು, ಇದೀಗ ಕಡಿಮೆ ದರದಲ್ಲಿ ಲಸಿಕೆ ಲಭ್ಯವಿದೆ. ಮಹಿಳೆಯರು ಅದರಲ್ಲಿಯೂ ಹದಿಹರೆಯದ ಯುವತಿಯವರು ಪಡೆದುಕೊಳ್ಳುವುದು ಸೂಕ್ತ ಎಂದರು.

ಅಸುರಕ್ಷಿತ ಲೈಂಗಿಕ ಮತ್ತು ಒಬ್ಬರಿಗಿಂತ ಹೆಚ್ಚಿನ ಲೈಂಗಿಕ ಸಂಗಾತಿಗಳಿದ್ದರೆ, ಹೆಚ್ಚಿನ ಮಕ್ಕಳು ಹೆತ್ತವರು, ಎಚ್‌ಐವಿ ಸೋಂಕಿತರು, ಧೂಮಪಾನ, ಮಧ್ಯಪಾನ ಇತರೆ ಚಟಗಳು ಹೊಂದಿದ್ದವರು, ಉತ್ತಮವಲ್ಲದ ಜೀವನಶೈಲಿ, ಆಹಾರದ ಕ್ರಮ ಹಾಗೂ ದುರ್ಬಲ ರೋಗ ನಿರೋಧಕ ಶಕ್ತಿಯುಳ್ಳವರು ಈ ಕ್ಯಾನ್ಸರ್‌ ಬರುವ ಅಪಾಯದ ಅಂಚಿನಲ್ಲಿರುತ್ತಾರೆ ಎಂದು ವಿವರಿಸಿದರು.

ಈ ಕ್ಯಾನ್ಸರ್‌ ಎಚ್‌ಪಿವಿ ಹ್ಯುಮನ್ ಪ್ಯಾಪಿಲೋಮ ವೈರಸ್‌ ಲೈಂಗಿಕ ಸಂಪರ್ಕದಿಂದ ಹರಡುತ್ತದೆ ಆದರೆ ಎಲ್ಲ ಎಚ್‌ಪಿವಿ ಕ್ಯಾನ್ಸ‌ರ್‌ ಕಾರಕ ಆಗಿರುವುದಿಲ್ಲ. High Risk Virus ದಿಂದ ಮಾತ್ರ ಈ ಕ್ಯಾನ್ಸರ್‌ ಬರುತ್ತದೆ ಎಂದು ತಿಳಿಸಿದರು.

ಈ ಕ್ಯಾನ್ಸರ್ ಮೊದಲ ಹಂತದಲ್ಲಿ ಯಾವುದೇ ಗುಣಲಕ್ಷಣಗಳು ಗೋಚರಿಸದೆ ಇರಬಹುದು. ಆದರೆ ನಂತರದ ಹಂತದಲ್ಲಿ ವಾಸನೆಯುಕ್ತ ಬಿಳಿ ಮುಟ್ಟು, ಸಂಭೋಗದ ನಂತರ ರಕ್ತಸ್ರಾವ, ಅನಿಯಮಿತ ರಕ್ತಸ್ರಾವ, ರಕ್ತಸ್ರಾವಯುಕ್ತ ಬಿಳಿಮುಟ್ಟು, ಇತ್ಯಾದಿ ಲಕ್ಷಣಗಳು ಕಾಣಿಸಿಕೊಂಡರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸಿ ಪರೀಕ್ಷಿಸಿಕೊಳ್ಳುವುದು ಅತ್ಯವಶ್ಯಕ ಎಂದರು.

ಗರ್ಭಕಂಠ ಕೊರಳಿನ ಕ್ಯಾನ್ಸರ್ ಗುರುತಿಸಲು ಮಹಿಳೆಯರು ನಿಯಮಿತವಾಗಿ ಕಾಲ್ಲೋಸ್ಕೋಪಿ ಸ್ತ್ರೀನಿಂಗ್‌, ಪ್ಯಾಪ್‌ ಸ್ಮಿಯರ್‌ ಪರೀಕ್ಷೆ, ಎಚ್‌ಪಿವಿ ಪರೀಕ್ಷೆಗಳನ್ನು ಮಾಡಿಸಿಕೊಂಡು ಆರಂಭದ ಹಂತದಲ್ಲಿನ ಕ್ಯಾನ್ಸರ್‌ ಪತ್ತೆ ಹಚ್ಚಬಹುದು ಎಂದು ತಿಳಿಸಿದರು.

ಬೀದರ್‌ ಎಪ್‌ಪಿಎಐ ಶಾಖೆಯಲ್ಲಿ ಗರ್ಭಕಂಠ ಕೊರಳಿನ ಹಾಗೂ ಸ್ತನ ಕ್ಯಾನ್ಸರ್‌ ಸ್ಕ್ರೀನಿಂಗ್‌ ಸೇವೆ ಉಚಿತವಾಗಿ ಲಭ್ಯವಿದ್ದು, ಇಲ್ಲಿಯ ವರೆಗೆ ಸುಮಾರು 721 ಮಹಿಳೆಯರ ಗರ್ಭಕಂಠ ಕೊರಳಿನ ಕ್ಯಾನ್ಸರ್ ಹಾಗೂ 131 ಮಹಿಳೆಯರ ಸ್ತನ ಕ್ಯಾನ್ಸರ್‌ ತಪಾಸಣೆ ಮಾಡಲಾಗಿದ್ದು, ಈ ವರ್ಷ ಸುಮಾರು 14 ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ ಈ ಕುರಿತು ಮಾಹಿತಿ ನೀಡಲಾಗುತ್ತಿದೆ. ಅಲ್ಲದೇ ಶೀಘ್ರದಲ್ಲಿ ಲಸಿಕೆ ನೀಡುವ ಯೋಜನೆ ರೂಪಿಸಿದೆ ಎಂದು ವಿವರಿಸಿದರು.

ಶಾಖೆಯ ಉಪಾಧ್ಯಕ್ಷೆ ಡಾ. ಸವಿತಾ ಚಕೋತೆ, ಶಾಖೆಯ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ, ಇತರೆ ವೈದ್ಯಾಧಿಕಾರಿಗಳಾದ ಡಾ. ಆರತಿ ರಘು, ಡಾ. ಬಿ.ಸಿ ಲಲಿತಮ್ಮ, ಆಪ್ತಸಮಾಲೋಚಕ ವಿನಾಯಕ ಕುಲಕರ್ಣಿ, ಸಹಾರ್ದಾ ರುಡಸೆಟ್‌ನ ಸುಬ್ರಮಣ್ಯ ಪ್ರಭು ಹಾಗೂ ವಿಜಯಲಕ್ಷ್ಮೀ ಹುಡಗಿ ಸೇರಿದಂತೆ ಇತರರಿದ್ದರು.9 ವರ್ಷದಿಂದ 16 ವರ್ಷದೊಳಗಿನ ಯುವತಿಯರಿಗೆ ಎರಡು ಹಾಗೂ 16 ವರ್ಷದಿಂದ 26 ವರ್ಷದ ವರೆಗೆ ಮೂರು ಲಸಿಕೆಗಳನ್ನು ನೀಡಬಹುದಾಗಿದೆ. ಒಂದು ಲಸಿಕೆ ನೀಡಿದ ಬಳಿಕ ಮತ್ತೆ ಆರು ತಿಂಗಳಿಗೆ ಮತ್ತೊಂದು ಲಸಿಕೆ ನೀಡಬಹುದಾಗಿದೆ. ಮೂರು ಲಸಿಕೆಗಳನ್ನ ಪಡೆಯುವವರು ಒಂದು ಲಸಿಕೆ ಆದ ನಂತರ ಎರಡು ತಿಂಗಳ ನಂತರ ಮತ್ತೊಂದು ಲಸಿಕೆ, ಆ ನಂತರ ಆರು ತಿಂಗಳ ನಂತರ ಮತ್ತೊಂದು ಲಸಿಕೆ ಹೀಗೆ ಮೂರು ಲಸಿಕೆಗಳನ್ನ ಪಡೆಯುವ ಮೂಲಕ ಎಚ್‌ಪಿವಿ ವೈರಾಣುವನ್ನು ನಾಶಪಡಿಸಬಹುದಾಗಿದೆ.

- ಡಾ. ಆರತಿ ರಘು, ಭಾರತೀಯ ಕುಟುಂಬ ಯೋಜನಾ ಸಂಘದ ಶಾಖೆಯ ಮಾಜಿ ಖಜಾಂಚಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!