ಅಳವಂಡಿ ಬೆಟಗೇರಿ ನೀರಾವರಿಯ ಯೋಜನೆಗೆ ಶೀಘ್ರ ನೀರು- ಶಾಸಕ ರಾಘವೇಂದ್ರ ಹಿಟ್ನಾಳ

KannadaprabhaNewsNetwork | Published : Jan 9, 2024 2:00 AM

ಸಾರಾಂಶ

ಅಳವಂಡಿ-ಬೆಟಗೇರಿ ಭಾಗದ ಬಹುದಿನಗಳ ಹೋರಾಟ ಆಗಿದ್ದ ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯನ್ನು ಹಿಂದಿನ ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಂಜೂರು ಮಾಡಿಸಿ ₹88 ಕೋಟಿ ಅನುದಾನವನ್ನು ಈ ನೀರಾವರಿ ಯೋಜನೆಗೆ ಮೀಸಲಿಟ್ಟೆದ್ದೆವು.

ಕೊಪ್ಪಳ: ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಗೆ ಶೀಘ್ರದಲ್ಲಿ ನೀರು ಹರಿಸುತ್ತೇವೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.

ತಾಲೂಕಿನ ಅಳವಂಡಿ ಜಿಪಂ ವ್ಯಾಪ್ತಿಯ ಕಂಪ್ಲಿ, ಅಳವಂಡಿ, ಕವಲೂರು, ಗುಡುಗೇರಿ, ಮುರ್ಲಾಪುರ, ಘಟ್ಟರಡ್ಡಿಹಾಳ, ಬೆಳಗಟ್ಟಿ, ಹಟ್ಟಿ, ಹೈದರ್ ನಗರ, ಕೇಸಲಾಪುರ, ರಘುನಾಥನಹಳ್ಳಿ ಗ್ರಾಮಗಳಲ್ಲಿ ಅಂದಾಜು ಮೊತ್ತ ₹9.87 ಕೋಟಿ ಮೊತ್ತದಲ್ಲಿ ಸಿಸಿ ರಸ್ತೆ, ಚರಂಡಿ, ಶಾಲಾ ಕೊಠಡಿ ನಿರ್ಮಾಣ ಹಾಗೂ ಸ್ಮಾರ್ಟ್ ಕ್ಲಾಸ್ ನಿರ್ಮಾಣದ ಕಾಮಗಾರಿಗೆ ಅಡಿಗಲ್ಲು ನೆರೆವೇರಿಸಿದರು.

ನಂತರ ಮಾತನಾಡಿದ ಅವರು, ಅಳವಂಡಿ-ಬೆಟಗೇರಿ ಭಾಗದ ಬಹುದಿನಗಳ ಹೋರಾಟ ಆಗಿದ್ದ ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯನ್ನು ಹಿಂದಿನ ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಂಜೂರು ಮಾಡಿಸಿ ₹88 ಕೋಟಿ ಅನುದಾನವನ್ನು ಈ ನೀರಾವರಿ ಯೋಜನೆಗೆ ಮೀಸಲಿಟ್ಟೆದ್ದೆವು ಎಂದರು.ಇನ್ನೇನು ಕಾಮಗಾರಿ ಕೊನೆ ಹಂತದಲ್ಲಿದ್ದು ಲಿಫ್ಟ್ ಇರಿಗೇಷನ್‌ನ ಪ್ರಾರಂಭ ಮಾಡಿ 8-10 ಸಾವಿರ ಎಕರೆ ನೀರಾವರಿ ಪ್ರದೇಶ ಮಾಡಲು ನಾವು ಕಂಕಣಬದ್ಧರಾಗಿ ಶೀಘ್ರದಲ್ಲಿ ನೀರು ಹರಿಸಿಯೇ ಹರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಳವಂಡಿ-ಬೆಟಗೇರಿ ಹೋಬಳಿಯ ಅಚ್ಚುಕಟ್ಟು ಪ್ರದೇಶದಲ್ಲಿ ಬರುವ ಎಲ್ಲ ಬ್ರಿಡ್ಜ್‌ಗಳ ಅಭಿವೃದ್ಧಿ ರಸ್ತೆಗಳ ಅಭಿವೃದ್ಧಿ, ಚೆಕ್ ಡ್ಯಾಂಗಳ ಅಭಿವೃದ್ಧಿಗೆ ಹಾಗೂ ಕ್ಯಾನಲ್‌ಗಳ ಅಭಿವೃದ್ಧಿಗೆ ಈಗಾಗಲೇ ₹350 ಕೋಟಿ ಮೊತ್ತದ ಡಿಪಿಆರ್ ಮಾಡಿಸಿದ್ದೇನೆ. ಶೀಘ್ರದಲ್ಲಿ ಅನುದಾನ ಬಿಡುಗಡೆ ಮಾಡಿಸಿ ಈ ಭಾಗದ ಅಭಿವೃದ್ಧಿ ಕೆಲಸಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತೇವೆ ಎಂದರು.

ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ಕ್ಷೇತ್ರದಲ್ಲಿ 100 ಸ್ಮಾರ್ಟ್ ಕ್ಲಾಸ್‌ಗಳ ನಿರ್ಮಾಣ ಮಾಡಲಿದ್ದೇವೆ. ಮತ್ತೆ ಮುಂದೆ ಮಾರ್ಚ್ ನಂತರ ಮತ್ತೆ 100 ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ನಿರ್ಮಾಣ ಮಾಡಲಾಗುವುದು ಎಂದರು.

ತುಂತುರು ನೀರಾವರಿ ಘಟಕ ವಿತರಣೆ:

ಅಳವಂಡಿ ಗ್ರಾಮದಲ್ಲಿ ಕೃಷಿ ಸಿಂಚಾಯಿ ಯೋಜನೆಯಡಿ ಆಯ್ಕೆಗೊಂಡ ರೈತರಿಗೆ ಪೈಪ್‌, ಸ್ಪಿಂಕ್ಲರ್‌ಗಳನ್ನು ವಿತರಣೆ ಮಾಡಿದರು.

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಳ್ಳೆಯ ಜನಪರ ಆಡಳಿತ ನಡೆಸುತ್ತಿದೆ. ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದ್ದ ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ ಯೋಜನೆ ಹಾಗೂ ಯುವನಿಧಿ ಎಂಬ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ನುಡಿದಂತೆ ನಡೆದಿದ್ದೇವೆ ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ವಿಠ್ಠಲ್ ಚೌಗಲೆ, ತಾಪಂ ಇಓ ದುಂಡೇಶ್ ತುರಾದಿ, ಅಳವಂಡಿ ಪಿಎಸ್ಐ ನಾಗಪ್ಪ, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಲ್ಟಾನ, ಮಾಜಿ ಜಿಪಂ ಅಧ್ಯಕ್ಷ ಕೆ.ರಾಜಶೇಖರ್ ಹಿಟ್ನಾಳ, ಮುಖಂಡರಾದ ಭರಮಪ್ಪ ಹಟ್ಟಿ, ವೆಂಕನಗೌಡ ಹಿರೇಗೌಡ್ರು, ಬಾಲಚಂದ್ರ ಮುನಿರಾಬಾದ್, ಪ್ರಸನ್ನ ಗಡಾದ, ಗಾಳೆಪ್ಪ ಪೂಜಾರ್, ತೋಟಪ್ಪ ಸಿಂಟ್ರ, ಪ್ರಕಾಶ್ ಸ್ವಾಮಿ ಇನಾಮ್ದಾರ್, ಯಲ್ಲಪ್ಪ ಜಿರ್, ಗುರುಬಸವರಾಜ್ ಹಳ್ಳಿಕೇರಿ, ಅನ್ವರ್ ಗಡಾದ, ಮಹಾಂತೇಶ್ ಕವಲೂರು, ಹೊನ್ನಕೆರಪ್ಪ ಕವಲೂರು, ನಜೀರ್ ಅಳವಂಡಿ, ಭೀಮಣ್ಣ ಬೋಚನಹಳ್ಳಿ, ಪರಶುರಾಮ್ ಮೆಕ್ಕಿ, ಜಿಲ್ಲಾ ಕೆಡಿಪಿ ಸದಸ್ಯ ಕುರ್ಗೋಡ್ ರವಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Share this article