ಕನ್ನಡಪ್ರಭ ವಾರ್ತೆ, ತುಮಕೂರುಬ್ರಿಟಿಷರ ವಿರುದ್ಧ ರಾಷ್ಟ್ರಪಿತ ಮಹಾತ್ಮಗಾಂಧಿ 1942 ರ ಆಗಸ್ಟ್ 9 ರಂದು ಕರೆ ನೀಡಿದ ಕ್ವಿಟ್ ಇಂಡಿಯಾ ಚಳುವಳಿ ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರ ಗೌಡ ಅಭಿಪ್ರಾಯ ಪಟ್ಟರು.ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದ ಗಾಂಧಿ ಸ್ಮಾರಕ ಭವನದ ಮುಂಭಾಗದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕ್ವಿಟ್ ಇಂಡಿಯಾ ನೆನಪಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಕ್ವಿಟ್ ಇಂಡಿಯಾ ಚಳವಳಿ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಪಾಲಿಗೆ ಮಾಡು ಇಲ್ಲವೇ ಮಡಿ ಹೋರಾಟವಾಗಿತ್ತು. ಸುಮಾರು 200 ವರ್ಷಗಳ ಕಾಲ ಭಾರತವನ್ನು ತಮ್ಮ ವಸಾಹತುವನ್ನಾಗಿ ಮಾಡಿಕೊಂಡು ಆಡಳಿತ ನಡೆಸಿದ ಬ್ರಿಟಿಷ್ ಅಧಿಕಾರಿಗಳಿಗೆ ಭಾರತ ಬಿಟ್ಟು ತೊಲಗಿ ಎಂದು ಅಂತಿಮ ಎಚ್ಚರಿಕೆ ನೀಡಿದ ದಿನ ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಹೆಮ್ಮೆ ಪಡುವ ವಿಚಾರ ಇದಾಗಿದೆ ಎಂದು ತಿಳಿಸಿದರು.ಭಾರತದ ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷದ ಇತಿಹಾಸ ವಿಲೀನವಾಗಿದೆ. ಕಾಂಗ್ರೆಸ್ ಹೊರತಾಗಿ ಭಾರತದ ರಾಜಕೀಯ, ಸಾಮಾಜಿಕ,ಅರ್ಥಿಕ ಚರಿತ್ರೆಯನ್ನು ಕಟ್ಟಿಕೊಡಲು ಸಾಧ್ಯವೇ ಇಲ್ಲ. ಇದನ್ನು ನೆನಪು ಮಾಡಿಕೊಡುವ ಸಲುವಾಗಿ ಹಾಗೂಯುವಜನರಿಗೆ ಕಾಂಗ್ರೆಸ್ ಪಕ್ಷ ಭವ್ಯ ಚರಿತ್ರೆಯನ್ನು ಮನದಟ್ಟು ಮಾಡಿಕೊಡುವ ಉದ್ದೇಶದಿಂದ ಪ್ರತಿವರ್ಷ ಕಾಂಗ್ರೆಸ್ ಪಕ್ಷದಿಂದ ಸ್ವಾತಂತ್ರ್ಯ ಹೋರಾಟದ ಪ್ರತಿ ಹೆಜ್ಜೆ ಗಳನ್ನು ಸ್ಮರಿಸುವ ಕೆಲಸ ಮಾಡಲಾಗುತ್ತಿದೆ. ತುಮಕೂರು ಜಿಲ್ಲೆಯಲ್ಲಿ ಪ್ರತಿವರ್ಷ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ನುಡಿದರು.ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ರಾಮಕೃಷ್ಣ ಮಾತನಾಡಿ, 1942 ರ ಆಗಸ್ಟ್ 8 ರಂದು ಅಖಿಲಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಐವತ್ತು ಜನ ಪದಾಧಿಕಾರಿಗಳು ಸೇರಿ ತೆಗೆದುಕೊಂಡು ನಿರ್ಣಯದ ಪ್ರಕಾರ 1942 ಆಗಸ್ಟ್ 9 ರಿಂದ ಕ್ವಿಟ್ ಇಂಡಿಯಾ ಚಳುವಳಿಯನ್ನು ಆರಂಭಿಸಲಾಯಿತು. ಚಳವಳಿಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಬ್ರಿಟಿಷರು ತೆಗೆದುಕೊಂಡು ಕಠಿಣ ನಿಲುವುಗಳಿಂದ ಸಾವಿರಾರು ಜನ ಮುಖಂಡರು ಬಂಧನಕ್ಕೆ ಒಳಗಾಗಿ ಸೆರೆವಾಸ ಅನುಭವಿಸಿದರು,ಆದರೆ ಈ ಐತಿಹಾಸಿಜ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವಲ್ಲಿ ಗಾಂಧಿಜೀ ಅವರು ಯಶಸ್ವಿಯಾದರು. ಇದನ್ನು ನೆನಪು ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ರಾಷ್ಟçದಾದ್ಯಂತ ಕ್ವಿಟ್ ಇಂಡಿಯಾ ಚಳವಳಿಯನ್ನು ನೆನಪಿಸಿಕೊಳ್ಳುವ ಕೆಲಸ ಮಾಡುತ್ತಾ ಬಂದಿದೆ ಎಂದರು.ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಮಾತನಾಡಿ, ಭಾರತೀಯರ ಪಾಲಿಗೆ ಇದು ಮಾಡು ಇಲ್ಲವೇ ಮಡಿ ಹೋರಾಟ. ಗಾಂಧೀಜಿಯವರ ಒಂದು ಕರೆಗೆ ದೇಶದಾದ್ಯಂತ ಲಕ್ಷಾಂತರ ಜನ ಬೀದಿಗಿಳಿದು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆಯನ್ಬು ಕೂಗಿದರು. ಮಹಿಳೆಯರು, ಯುವಜನರು, ವಿದ್ಯಾರ್ಥಿಗಳು, ಹಿರಿಯರು ಈ ಐತಿಹಾಸಿಕ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ಭಾರತ ಸ್ವಾತಂತ್ರ್ಯ ಗಳಿಸಲು ಮುನ್ನುಡಿ ಬರೆದರು ಎಂದರು.ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಷಣ್ಮುಖಪ್ಪ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹೇಶ್, ಫಯಾಜ್, ಒಬಿಸಿ ಘಟಕದ ಅಧ್ಯಕ್ಷ ಅನಿಲ್ ಕುಮಾರ್, ಮುಖಂಡರಾದ ಮೆಹಬೂಬ್ ಪಾಷ, ನಟರಾಜಶೆಟ್ಟಿ, ಸಂಜೀವ್ ಕುಮಾರ್, ಪಿ.ಶಿವಾಜಿ, ಸುಜಾತ,ವಸುಂಧರ, ವೈ.ಟಿ.ನಾಗರಾಜು, ಸೇವಾದಳದ ಶಿವಾನಂದ್,ವಿವಿಧ ಮುಂಚೂಣಿ ಘಟಕಗಳ ಮುಖಂಡರು,ಕಾರ್ಯಕರ್ತರು ಉಪಸ್ಥಿತರಿದ್ದರು.