ಮೈಮುಲ್ ಅಧ್ಯಕ್ಷರಾಗಿ ಆರ್. ಚಲುವರಾಜು ಅವಿರೋಧ ಆಯ್ಕೆ

KannadaprabhaNewsNetwork | Published : Aug 8, 2024 1:40 AM

ಸಾರಾಂಶ

ವ್ಯವಸ್ಥಾಪಕ ನಿರ್ದೇಶಕ ಸುರೇಶ್ ನಾಯಕ್ ಅವರು ಹೂಗುಚ್ಛ

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ( ಮೈಮುಲ್) ಅಧ್ಯಕ್ಷರಾಗಿ ಆರ್. ಚಲುವರಾಜು ಅವಿರೋಧವಾಗಿ ಆಯ್ಕೆಯಾದರು.

ಪಿರಿಯಾಪಟ್ಟಣ ಮಾಜಿ ಶಾಸಕ ಕೆ. ಮಹದೇವ್ ಅವರ ಪುತ್ರ ಪಿ.ಎಂ. ಪ್ರಸನ್ನ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಗರದ ಆಲನಹಳ್ಳಿಯಲ್ಲಿನ ಮೆಗಾ ಡೈರಿಯಲ್ಲಿ ಬುಧವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಟಿ. ನರಸೀಪುರ ತಾಲೂರು ಪ್ರತಿನಿಧಿಸುವ ಆರ್. ಚಲುವರಾಜು ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರು.

12 ಗಂಟೆಯೊಳಗೆ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿ ಪಾಲ್ಗೊಂಡಿದ್ದ ಉಪ ವಿಭಾಗಾಧಿಕಾರಿ ಕೆ.ಆರ್. ರಕ್ಷಿತ್ ನಾಮಪತ್ರ ಪರಿಶೀಲನೆ ನಡೆಸಿ ಕ್ರಮಬದ್ಧವಾಗಿದ್ದ ಹಿನ್ನೆಲೆಯಲ್ಲಿ ಆರ್. ಚಲುವರಾಜು ಅವರನ್ನು ಅಧಿಕೃತವಾಗಿ ಅಧ್ಯಕ್ಷರಾಗಿ ಆಯ್ಕೆ ಆಗಿರುವುದನ್ನು ಘೋಷಿಸಿದರು.

ಬಳಿಕ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ನಾಯಕ್ ಅವರು ಹೂಗುಚ್ಛ ನೀಡಿ ಅಭಿನಂದಿಸಿದರು. ನಿರ್ದೇಶಕರಾದ

ಎ.ಟಿ. ಸೋಮಶೇಖರ್, ಕೆ.ಜಿ. ಮಹೇಶ್, ಕೆ. ಈರೇಗೌಡ, ಕೆ.ಎಸ್. ಕುಮಾರ್, ಸಿ. ಓಂಪ್ರಕಾಶ್, ಕೆ. ಉಮಾಶಂಕರ್, ದ್ರಾಕ್ಷಾಯಿಣಿ ಬಸವರಾಜಪ್ಪ, ಲೀಲಾ ಬಿ.ಕೆ. ನಾಗರಾಜ್, ಬಿ. ನೀಲಾಂಬಿಕೆ, ಮಹೇಶ್ ಕುರಹಟ್ಟಿ, ಎ. ಶಿವಗಾಮಿ ಷಣ್ಮುಗಂ, ಬಿ.ಎನ್. ಸದಾನಂದ, ನಾಮ ನಿರ್ದೇಶಿತ ಸದಸ್ಯರಾದ ಬಿ. ಗುರುಸ್ವಾಮಿ, ಜಿ.ಎ. ಪ್ರಕಾಶ್, ಎ.ಬಿ. ಮಲ್ಲಿಕಾ ರವಿಕುವಾರ್ ಚುನಾವಣಾ ಪ್ರಕ್ರಿಯಲ್ಲಿ ಪಾಲ್ಗೊಂಡಿದ್ದರು.

ವಿಜಯೋತ್ಸವ

ಅಧ್ಯಕ್ಷರಾಗಿ ಆರ್. ಚೆಲುವರಾಜು ಹೆಸರು ಪ್ರಕಟವಾಗುತ್ತಿದ್ದಂತೆ ಹೊರಗಡೆ ನಿಂತಿದ್ದ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.

ಬನ್ನೂರು, ಟಿ. ನರಸೀಪುರ, ಎಚ್.ಡಿ. ಕೋಟೆ, ವರುಣ, ನಂಜನಗೂಡು ಭಾಗದಿಂದ ಬಂದಿದ್ದ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಸದಸ್ಯರು, ಬೆಂಬಲಿಗರು ಬೃಹತ್ ಗಾತ್ರದ ಹೂವಿನ ಹಾರ ಹಾಗಿ ಅಭಿನಂದಿಸಿ ಶುಭ ಕೋರಿದರು. ಕೆಲವರು ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಿದರು.

ಅಧಿಕಾರ ಹಂಚಿಕೆ

ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತರಾಗಿದ್ದ ಮೂವರನ್ನು ಸಿಎಂ ಸಿದ್ದರಾಮಯ್ಯ ಸಮಾಧಾನಪಡಿಸಿದ್ದಾರೆ.

ತಮ್ಮ ನಿವಾಸದಲ್ಲಿ ಸಭೆ ನಡೆಸಿದ ಅವರು, ಮೈಮುಲ್ ನ 5 ವರ್ಷಗಳ ಅವಧಿಯಲ್ಲಿ ಉಳಿದ 17 ತಿಂಗಳ ಪೈಕಿ ಮೊದಲ 8 ತಿಂಗಳು ಆರ್. ಚಲುವರಾಜು, ಉಳಿದ ಒಂಬತ್ತು ತಿಂಗಳ ಅವಧಿಗೆ ಕೆ. ಈರೇಗೌಡರಿಗೆ ಬಿಟ್ಟು ಕೊಡಲು ತೀರ್ಮಾನಿಸಲಾಗಿದೆ. ಮೈಮುಲ್ ನಿಂದ ಕೆಎಂಎಫ್ ಗೆ ನಾಮ ನಿರ್ದೇಶನ ಸ್ಥಾನಕ್ಕೆ ಬಿ. ನೀಲಾಂಬಿಕೆ ಮಹೇಶ್ ಅವರನ್ನು ಆಯ್ಕೆ ಮಾಡಿಕೊಡಲು ತೀರ್ಮಾನಿಸಲಾಗಿದೆ.

ಎಲ್ಲರಿಗೂ ಅಭಾರಿ

ನನ್ನ ಅವಿರೋಧ ಆಯ್ಕೆಗೆ ಕಾರಣರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು, ಶಾಸಕರಾದ ಜಿ.ಟಿ. ದೇವೇಗೌಡ, ಜಿ.ಡಿ. ಹರೀಶ್ ಗೌಡ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಹಾಗೂ ಹಾಲು ಉತ್ಪಾದಕರ ಹಿತ ಕಾಪಾಡುವುದಾಗಿ ಚಲುವರಾಜು ತಿಳಿಸಿದ್ದಾರೆ.

Share this article