ದಂತಗಳ ಉತ್ತಮ ಪೋಷಣೆಯಿಂದ ಮುಖದಲ್ಲಿ ಕಾಂತಿ

KannadaprabhaNewsNetwork | Published : Nov 29, 2023 1:15 AM

ಸಾರಾಂಶ

ನಗುವಿನ ಗುಟ್ಟು ಅಡಗಿರುವುದೇ ದಂತ ಪಂಕ್ತಿಯಲ್ಲಿ. ಮುಖದ ಸೌಂದರ್ಯಕ್ಕೆ ಹಲ್ಲುಗಳು ಸಹ ಕಾರಣ ಅಗಿವೆ. ಆರೋಗ್ಯದ ವಿಷಯದಲ್ಲಿ ಬಹಳಷ್ಟು ಕಾಳಜಿ ಮಾಡುವ ಮಂದಿಯೂ ಕೆಲವೊಮ್ಮೆ ಬಾಯಿಯ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರುವುದು ಸಾಮಾನ್ಯವಾಗಿದೆ. ಆದರೆ, ದೇಹದ ಸಂಪೂರ್ಣ ಸ್ವಾಸ್ಥ್ಯದಲ್ಲಿ ಬಾಯಿಯ ಆರೋಗ್ಯ ಮುಖ್ಯ ಪಾತ್ರ ವಹಿಸುತ್ತದೆ ಎನ್ನುವ ಅರಿವು ಪ್ರತಿಯೊಬ್ಬರಿಗೂ ಇರಬೇಕು. ಸಣ್ಣ ಕಿರಿಕಿರಿಯಿಂದ ಆರಂಭವಾಗಿ, ತಡೆಯಲಾರದ ನೋವಿನವರೆಗೆ ಹಲವು ರೀತಿಯಲ್ಲಿ ಹಲ್ಲು ಮತ್ತು ಒಸಡುಗಳ ಸಮಸ್ಯೆಗಳು ಕಾಡಬಲ್ಲವು. ಆದ್ದರಿಂದ ದಂತಗಳ ಪೋಷಣೆ ಪ್ರತಿಯೊಬ್ಬರ ಜವಾಬ್ದಾರಿ ಆಗಿದೆ ಎಂದರು.

ಕನ್ನಡಪ್ರಭ ವಾರ್ತೆ ಸೊರಬ

ಮನುಷ್ಯನ ದೇಹದ ಅತ್ಯಂತ ಕಠಿಣ ವಸ್ತುವಾಗಿರುವ ದಂತಗಳ ಪೋಷಣೆ ಮಾಡದೇ ಎಡವಿದರೆ ಮುಖದ ಕಾಂತಿಗೆ ಧಕ್ಕೆ ಬರುವುದಲ್ಲದೇ, ಆಹಾರ ಪಚನಶಕ್ತಿ ಕಳೆದುಕೊಳ್ಳಬೇಕಾಗುತ್ತದೆ ಎಂದು ದಂತವೈದ್ಯ ಡಾ. ಅಮೋಘವರ್ಷ ಹೇಳಿದರು.

ಪಟ್ಟಣದ ಪುರಸಭೆ ವ್ಯಾಪ್ತಿಯ 2 ಮತ್ತು 12ನೇ ವಾರ್ಡಿಗೆ ಹೊಂದಿಕೊಂಡ ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ ಗಣಾಧೀಶ್ವರ ಡ್ರೈವಿಂಗ್ ಸ್ಕೂಲ್ ಮತ್ತು ಎಸ್.ಎಸ್.ಎಲ್.ಆರ್. ಕ್ಲಿನಿಕಲ್ ಲ್ಯಾಬೋರೇಟರಿ ಮತ್ತು ಬಿಂದು ದಂತ ಚಿಕಿತ್ಸಾಲಯ ವತಿಯಿಂದ ಹಮ್ಮಿಕೊಂಡಿದ್ದ ಶಾಲಾ ಮಕ್ಕಳಿಗೆ ದಂತ ತಪಾಸಣೆ ಮತ್ತು ರಕ್ತಪರೀಕ್ಷೆ ಶಿಬಿರದಲ್ಲಿ ಮಕ್ಕಳಿಗೆ ದಂತ ತಪಾಸಣೆ ನಡೆಸಿ ಅವರು ಮಾತನಾಡಿದರು.

ನಗುವಿನ ಗುಟ್ಟು ಅಡಗಿರುವುದೇ ದಂತ ಪಂಕ್ತಿಯಲ್ಲಿ. ಮುಖದ ಸೌಂದರ್ಯಕ್ಕೆ ಹಲ್ಲುಗಳು ಸಹ ಕಾರಣ ಅಗಿವೆ. ಆರೋಗ್ಯದ ವಿಷಯದಲ್ಲಿ ಬಹಳಷ್ಟು ಕಾಳಜಿ ಮಾಡುವ ಮಂದಿಯೂ ಕೆಲವೊಮ್ಮೆ ಬಾಯಿಯ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರುವುದು ಸಾಮಾನ್ಯವಾಗಿದೆ. ಆದರೆ, ದೇಹದ ಸಂಪೂರ್ಣ ಸ್ವಾಸ್ಥ್ಯದಲ್ಲಿ ಬಾಯಿಯ ಆರೋಗ್ಯ ಮುಖ್ಯ ಪಾತ್ರ ವಹಿಸುತ್ತದೆ ಎನ್ನುವ ಅರಿವು ಪ್ರತಿಯೊಬ್ಬರಿಗೂ ಇರಬೇಕು. ಸಣ್ಣ ಕಿರಿಕಿರಿಯಿಂದ ಆರಂಭವಾಗಿ, ತಡೆಯಲಾರದ ನೋವಿನವರೆಗೆ ಹಲವು ರೀತಿಯಲ್ಲಿ ಹಲ್ಲು ಮತ್ತು ಒಸಡುಗಳ ಸಮಸ್ಯೆಗಳು ಕಾಡಬಲ್ಲವು. ಆದ್ದರಿಂದ ದಂತಗಳ ಪೋಷಣೆ ಪ್ರತಿಯೊಬ್ಬರ ಜವಾಬ್ದಾರಿ ಆಗಿದೆ ಎಂದರು.

ಹಲ್ಲುಗಳ ಮೇಲಿನ ಬ್ಯಾಕ್ಟೀರಿಯಾ ದಾಳಿಯಿಂದಾಗಿ ದಂತಗಳ ಎನಾಮಲ್ ಹೊದಿಕೆ ಹಾಳಾಗಿ ಕುಳಿಗಳು ಉಂಟಾಗುತ್ತವೆ. ಆಗ ಹಲ್ಲು ನೋವಿನಿಂದ ವೈದ್ಯರಲ್ಲಿಗೆ ಹೋಗುವುದು ಅನಿವಾರ್ಯ. ದಿನಕ್ಕೆರಡು ಬಾರಿ ಹಲ್ಲು ಉಜ್ಜುವುದರ ಜೊತೆಗೆ ಹಲ್ಲುಗಳ ನಡುವೆ ಫ್ಲೋಸ್ ಮಾಡುವುದರಿಂದ ದಂತ ಸ್ವಚ್ಛತೆಯಲ್ಲಿ ಒಂದು ಹೆಜ್ಜೆ ಮುಂದಿರಿಸಿದಂತಾಗುತ್ತದೆ. ಫ್ಲೋರೈಡ್ ಇರುವ ಟೂತ್‌ಪೇಸ್ಟ್ ಬಳಕೆಯಿಂದ ಹಲ್ಲುಗಳ ಎನಾಮಲ್ ಕವಚವನ್ನು ರಕ್ಷಿಸಿಕೊಳ್ಳಬಹುದು ಎಂದರು.

ಇದೇ ಸಂದರ್ಭದಲ್ಲಿ ಮಕ್ಕಳಿಗೆ ರಕ್ತ ತಪಾಸಣೆ ನಡೆಸಿ, ವಿವಿಧ ರಕ್ತ ಗುಂಪುಗಳ ಬಗ್ಗೆ ಮಾಹಿತಿ ನೀಡಲಾಯಿತು.

ಸಮಾಜ ಸೇವಕ ರಾಜು ಹಿರಿಯಾವಲಿ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶಂಕರ್ ಶೇಟ್ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಅನೀಶ್ ಅಹ್ಮದ್ ಮತ್ತು ಸರ್ವ ಸದಸ್ಯರು, ಶಾಲೆ ಮುಖ್ಯಶಿಕ್ಷಕರು ಹಾಗೂ ಸಹಶಿಕ್ಷಕಿಯರು, ಪೋಷಕರು ಮಕ್ಕಳು ಪಾಲ್ಗೊಂಡಿದ್ದರು.

- - - -27ಕೆಪಿಸೊರಬ04:

ಸೊರಬ ಪಟ್ಟಣದ ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ ತಜ್ಞ ವೈದ್ಯರಿಂದ ಮಕ್ಕಳಿಗೆ ದಂತ ತಪಾಸಣೆ ಮತ್ತು ರಕ್ತ ಪರೀಕ್ಷೆ ಶಿಬಿರ ನಡೆಯಿತು.

Share this article