ಕನ್ನಡಪ್ರಭ ವಾರ್ತೆ ಬೇಲೂರು
ಕಾಡಾನೆಗಳ ಪತ್ತೆ ಹಾಗೂ ಅವುಗಳ ಚಲನವಲನದ ಮಾಹಿತಿ ಪಡೆಯಲು ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಕೆಗೆ ಅರಣ್ಯ ಇಲಾಖೆ ಮುಂದಾಗಿದ್ದು ಬೇಲೂರು ತಾಲೂಕಿನ ಬ್ಯಾದನೆ ಗ್ರಾಮದಲ್ಲಿ ಭುವನೇಶ್ವರಿ ಗುಂಪಿನ ಗಂಡಾನೆಗೆ ರೇಡಿಯೋ ಕಾಲರ್ ಅಳವಡಿಕೆ ಯಶಸ್ವಿಯಾಗಿದೆ.
ಬುಧವಾರ ಕಾರ್ಯಾಚರಣೆ ನಡೆಸಿದ್ದು ಗಂಡಾನೆ ಗುಂಪಿನಿಂದ ಬೇರ್ಪಡದೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ರೇಡಿಯೋ ಕಾಲರ್ ಅಳವಡಿಸಲು ಸಾಧ್ಯವಾಗಿರಲಿಲ್ಲ. ಗುರುವಾರ ಎರಡನೇ ದಿನದ ಕಾರ್ಯಾಚರಣೆಯಲ್ಲಿ ಏಳು ಕುಮ್ಕಿ ಕಾಡಾನೆಗಳನ್ನು ಬಳಸಿಕೊಂಡು ರೇಡಿಯೋ ಕಾಲರ್ ಅಳವಡಿಕೆ ಮಾಡಲಾಗಿದೆ.ಡಾ.ರಮೇಶ್ ನೇತೃತ್ವದ ತಂಡ ಕಾಡಾನೆಗೆ ಅರವಳಿಕೆ ಮದ್ದು ನೀಡಿ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಈಟಿಎಫ್ ಸಿಬ್ಬಂದಿಯ ಸಹಯೋಗದಲ್ಲಿ ರೇಡಿಯೋ ಕಾಲರ್ ಅಳವಡಿಸಲಾಯಿತು.
ಇನ್ನುಳಿದಂತೆ ಬೀಟಮ್ಮ ಗುಂಪಿನ ಹಾಗೂ ಓಲ್ಡ್ ಬೆಲ್ಟ್ ಗುಂಪಿನ ಕಾಡಾನೆಗಳಲ್ಲಿ ಗಂಡಾನೆಗಳನ್ನು ಬೇರ್ಪಡಿಸಿ ರೇಡಿಯೋ ಕಾಲರ್ ಹಾಕಬೇಕಿದೆ. ಅರಣ್ಯ ಇಲಾಖೆಯ ಕಾರ್ಯಾಚರಣೆ ಮುಂದುವರೆದಿದ್ದು ಸುತ್ತಮುತ್ತಲಿನ ಬೆಳೆಗಾರರು ಹಾಗೂ ರೈತರು ಮತ್ತು ಗ್ರಾಮಸ್ಥರು ಆದಷ್ಟು ಬೇಗ ನಮಗೆ ಶಾಶ್ವತ ನೆಮ್ಮದಿ ದೊರಕುವಂತಾಗಲಿ ಎಂದು ಎದುರು ನೋಡುತ್ತಿದ್ದಾರೆ.ಫೋಟೋ : ಎಚ್‌ಎಸ್‌ಎನ್ 1, 2 ಫೊಟೋ