ಕನ್ನಡಪ್ರಭ ವಾರ್ತೆ ಕೊಲ್ಹಾರ
ಘಟನೆಯಲ್ಲಿ ಇಬ್ಬರು ಈಜುಕೊಂಡು ದಡ ಸೇರಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಕೊಲ್ಹಾರದ ಪುಂಡಲೀಕ ಮಲ್ಲಪ್ಪ ಯಂಕಂಚಿ (36) ಮೃತದೇಹ ಪತ್ತೆಯಾಗಿದೆ. ನಾಪತ್ತೆಯಾದ ಇನ್ನುಳಿದ ಐವರಿಗಾಗಿ ಮೀನಿನ ಬಲೆ ಹಾಕಿ ಅಗ್ನಿಶಾಮಕದಳ ಹಾಗೂ ಪೊಲೀಸರು ಸ್ಥಳೀಯ ಮೀನುಗಾರರ ಸಹಾಯದಿಂದ ಕಾರ್ಯಾಚರಣೆ ನಡೆಸಿದ್ದಾರೆ. ಕೊಲ್ಹಾರ ಪಟ್ಟಣದ ನಿವಾಸಿಗಳಾದ ಮಹಿಬೂಬ್ ವಾಲಿಕಾರ (30), ತಯ್ಯಬ್ ಚೌಧರಿ (42), ರಫೀಕ್ ಜಾಲಗಾರ ಅಲಿಯಾಸ್ ಬಾಂದೆ (55), ದಶರಥ ಗೌಡರ ಸೂಳಿಬಾವಿ (66) ನೀರಿನಲ್ಲಿ ನಾಪತ್ತೆಯಾದವರು ಎಂದು ಹೇಳಲಾಗುತ್ತಿದೆ. ಆದರೆ, ಮೃತದೇಹಗಳು ಹೊರಗೆ ಬಂದ ನಂತರವೇ ಮೃತಪಟ್ಟವರ ಖಚಿತತೆ ಸಿಗಲಿದೆ ಎಂದು ಹೇಳಲಾಗುತ್ತಿದೆ. ಮೃತ ಪುಂಡಲೀಕ ಮಲ್ಲಪ್ಪ ಯಂಕಂಚಿ ಅವರ ಮೃತ ದೇಹವನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ರಾತ್ರಿ ಆಗಿದ್ದ ಕಾರಣಕ್ಕೆ ಕಾರ್ಯಾಚರಣೆಯನ್ನು ಬುಧವಾರ 5 ಗಂಟೆಯಿಂದ ನಡೆಸಲಾಗುವುದು ಎಂದು ಎಸ್ಪಿ ಮಾಹಿತಿ ನೀಡಿದರು.ಬದುಕಿದ ಇಬ್ಬರು:
ಎಂಟು ಜನರು ಇದ್ದ ತೆಪ್ಪ ಮುಗುಚಿದ ವೇಳೆ ಆರು ಜನರು ನೀರು ಪಾಲಾದರು. ಆದರೆ, ಕೂಡಗಿ ಪಾರುಖ್ ಪಟ್ಟೆ ಅಹ್ಮದ್ ಕೊಳ್ಳಿ, ಕೊಲ್ಹಾರದ ಸಚಿನ್ ಕಟಬರ ಇವರು ಈಜಿ ತಡ ಸೇರಿದ್ದಾರೆ. ದಡದಲ್ಲಿ ನಿಂತು ಬಳೂತಿ ಗ್ರಾಮದ ಮುತ್ತು ಬಾನಿ ಇವರನ್ನು ರಕ್ಷಣೆ ಮಾಡಿದ್ದಾನೆ.ಸ್ಥಳಕ್ಕೆಎಸ್ಪಿ ಭೇಟಿ:
ದುರ್ಘಟನೆ ಬಗ್ಗೆ ಮಾಹಿತಿ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಘಟನಾ ಸ್ಥಳಕ್ಕೆ ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಘಟನೆ ನಡೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಮೃತರ ಸಂಬಂಧಿಕರನ್ನು ಮಾತನಾಡಿಸಿ ಸಾಂತ್ವನ ಹೇಳಿದರು. ಎಡಿಷನ್ ಎಸ್ಪಿಪಿ ಹೃಷಕೇಶ್ ಭೇಟಿ ಕೂಡಾ ಭೇಟಿ ನೀಡಿದರು.ಏನಿದು ಘಟನೆ?:
ಸುಮಾರು ಎಂಟು ಜನರ ಗುಂಪು ನದಿ ತೀರದಲ್ಲಿ ಜೂಜು ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಕೊಲ್ಹಾರ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಆರೋಪಿಗಳು ಅಲ್ಲಿಯೇ ಇದ್ದ ತೆಪ್ಪ ಏರಿದ್ದಾರೆ. ನದಿಯಲ್ಲಿ ಸ್ಪಲ್ಪ ದೂರ ಹೋಗುತ್ತಿರುವಂತೆ ಸುಳಿಗೆ ಸಿಲುಕಿ ತೆಪ್ಪ ನೀರಿನಲ್ಲಿ ಮಗುಚಿದೆ. ಈ ವೇಳೆ ಇಬ್ಬರು ಈಜಿ ದಡ ಸೇರಿದ್ದಾರೆ. ಉಳಿದ ಆರು ಜನರು ನೀರು ಪಾಲಾಗಿದ್ದಾರೆ. ಈ ವೇಳೆ ಒಬ್ಬನ ಮೃತದೇಹ ಸಿಕ್ಕಿದೆ. ಇನ್ನುಳಿದವರಿಗಾಗಿಗ ಶೋಧ ಕಾರ್ಯ ಮುಂದುವರಿದಿದೆ. ಈ ವೇಳೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ರಾತ್ರಿ ಆಗಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಕೊಲ್ಹಾರ ಪೊಲೀಸ್ ಠಾಣೆಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.--
ಕೋಟ್ತೆಪ್ಪದಲ್ಲಿ ಎಂಟು ಜನ ಹೋಗುತ್ತಿದ್ದ ವೇಳೆ ತೆಪ್ಪ(ಬುಟ್ಟಿ) ಮುಳುಗಿ ಕೃಷ್ಣಾ ನದಿಯಲ್ಲಿ ಆರು ಜನ ನೀರುಪಾಲು ಆಗಿದ್ದಾರೆ. ಇಬ್ಬರು ಈಜಿ ದಡ ಸೇರಿದ್ದಾರೆ. ನೀರು ಪಾಲಾದವರಲ್ಲಿ ಓರ್ವನ ಮೃತದೇಹ ಸಿಕ್ಕಿದೆ. ಉಳಿದ ಐವರಿಗಾಗಿ ಹುಡುಕಾಟ ನಡೆದಿದೆ. ಐವರು ಮೃತಪಟ್ಟಿದ್ದಾರೋ ಅಥವಾ ಈಜಿ ಬೇರೆಡೆ ದಡ ಸೇರಿದ್ದಾರೋ ಗೊತ್ತಿಲ್ಲ. ಇವರೆಲ್ಲ ತೆಪ್ಪದಲ್ಲಿ ಯಾಕೆ ಕೃಷ್ಣಾ ನದಿಯಲ್ಲಿ ಹೋಗಿದ್ದರು ಎಂಬುವುದರ ಬಗ್ಗೆ ನಿಖರ ಕಾರಣ ತಿಳಿದುಬಂದಿಲ್ಲ.
-ಋಷಿಕೇಶ ಸೋನಾವಣೆ, ಎಸ್ಪಿ ವಿಜಯಪುರ.