ಶಶಿಹುಲಿಕುಂಟೆ ಗೆಲುವಿಗೆ ಶ್ರಮಿಸಲು ರಘುಮೂರ್ತಿ ಮನವಿ

KannadaprabhaNewsNetwork |  
Published : Oct 19, 2026, 02:00 AM IST
ಬಾಟಂ | Kannada Prabha

ಸಾರಾಂಶ

ಚಳ್ಳಕೆರೆ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ಸಚಿವ ಟಿ.ರಘುಮೂರ್ತಿ ಮಾತನಾಡಿದರು.

ಕನ್ನಡಪ್ರಭವಾರ್ತೆ ಚಳ್ಳಕೆರೆ

ಮುಂಬರುವ ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾದ ಶಶಿಹುಲಿ ಕುಂಟೆಮಠ್ ಅವರು ಅತ್ಯಧಿಕ ಮತಗಳ ಅಂತರದಿಂದ ಜಯಗಳಿಸುವುದು ನಿಶ್ಚಿತ ಎಂದು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ಟಿ.ರಘುಮೂರ್ತಿ ವಿಶ್ವಾಸ ವ್ಯಕ್ತಪಡಿಸಿದರು.

ಚಳ್ಳಕೆರೆ ನಗರದ ಡಿ.ವೀರಣ್ಣ ಲೇಔಟ್‌ನಲ್ಲಿರುವ ಖಾಸಗಿ ನಿವಾಸದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಪೂರ್ವ ಮತದಾರರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಕಾರ್ಯಕರ್ತರು ಮತ್ತು ಮುಖಂಡರು ಇಂದಿನಿಂದಲೇ ತಳಮಟ್ಟದಲ್ಲಿ ಸಕ್ರಿಯವಾಗಿ ಶ್ರಮಿಸಬೇಕು.

ರಾಜ್ಯದ ಶೈಕ್ಷಣಿಕ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಪ್ರಸ್ತುತ ಕಾಂಗ್ರೆಸ್ ಸರ್ಕಾರ ಅಭೂತಪೂರ್ವ ಕೊಡುಗೆಗಳನ್ನು ನೀಡಿದೆ. ಪದವೀಧರ ನಿರುದ್ಯೋಗಿ ಯುವಕರಿಗೆ ಆಸರೆಯಾಗಲು ಜಾರಿಗೆ ತಂದಿರುವ ಯುವನಿಧಿ ಯೋಜನೆ ಸಾವಿರಾರು ಯುವಕರ ಕೈ ಹಿಡಿದಿದೆ. ಕಾಂಗ್ರೆಸ್ ಪಕ್ಷವು ಸದಾಕಾಲ ಯುವಜನರ ಮತ್ತು ವಿದ್ಯಾವಂತರ ಪರವಾಗಿ ಧ್ವನಿಯೆತ್ತುತ್ತಾ ಬಂದಿದೆ ಎಂದು ಶ್ಲಾಘಿಸಿದರು.

ಚುನಾವಣಾ ಕಾರ್ಯತಂತ್ರದ ಕುರಿತು ಮಾಹಿತಿ ನೀಡಿದ ಸಚಿವರು, ಆಗ್ನೇಯ ಪದವೀಧರ ಕ್ಷೇತ್ರ ವ್ಯಾಪ್ತಿಯ ಚಿತ್ರದುರ್ಗ ಜಿಲ್ಲೆಯಾದ್ಯಂತ ಒಟ್ಟು 30 ಸಾವಿರ ಮತದಾರರಿದ್ದಾರೆ. ಈ ಪೈಕಿ ಚಳ್ಳಕೆರೆ ತಾಲೂಕೊಂದರಲ್ಲೇ 10 ಸಾವಿರದಷ್ಟು ನಿರ್ಣಾಯಕ ಮತಗಳಿವೆ. ಇದರಲ್ಲಿ ಗ್ರಾಮೀಣ ಭಾಗದಲ್ಲಿ 5,500 ಮತಗಳಿದ್ದರೆ, ನಗರ ಪ್ರದೇಶದಲ್ಲಿ 4,500 ಮತಗಳಿವೆ. ಹೀಗಾಗಿ ಬ್ಲಾಕ್ ಕಾಂಗ್ರೆಸ್ ಮುಖಂಡರು ಮತ್ತು ಪ್ರಚಾರಕರು ಪ್ರತಿಯೊಬ್ಬ ಪದವೀಧರ ಮತದಾರರನ್ನು ವೈಯಕ್ತಿಕವಾಗಿ ಭೇಟಿ ಮಾಡಿ, ಶಶಿಹುಲಿಕುಂಟೆಮಠ್ ಅವರ ಪರವಾಗಿ ಮೊದಲ ಪ್ರಾಶಸ್ತ್ಯದ ಮತವನ್ನು ನೀಡುವಂತೆ ಜಾಗೃತಿ ಮೂಡಿಸಬೇಕು ಎಂದು ವಿನಂತಿಸಿದರು.

ಅಭ್ಯರ್ಥಿ ಶಶಿಹುಲಿಕುಂಟೆಮಠ್ ಅವರ ಪರವಾಗಿ ಮತಯಾಚನೆ ಮಾಡಲು ಆಗಮಿಸಿದ್ದ ಅವರ ಪತ್ನಿ ಅಮೂಲ್ಯ ಶಶಿಹುಲಿಕುಂಟೆಮಠ್ ಮಾತನಾಡಿ, ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಪರವಾಗಿ ವ್ಯಾಪಕವಾದ ಜನಾಭಿಪ್ರಾಯ ಮತ್ತು ಸಕಾರಾತ್ಮಕ ಅಲೆ ಇರುವುದು ಪ್ರಚಾರದ ವೇಳೆ ಕಂಡುಬಂದಿದೆ. ಚಳ್ಳಕೆರೆ ಕ್ಷೇತ್ರವು ನಮಗೆ ಅತ್ಯಂತ ಚಿರಪರಿಚಿತವಾಗಿದ್ದು, ಈ ಭಾಗದ ಪಕ್ಷದ ಹಿರಿಯ ನಾಯಕರ ಹಾಗೂ ಕಾರ್ಯಕರ್ತರ ಅಪೇಕ್ಷೆಯ ಮೇರೆಗೇ ನನ್ನ ಪತಿ ಚುನಾವಣಾ ಕಣಕ್ಕಿಳಿದಿದ್ದಾರೆ. ಸಚಿವ ರಘುಮೂರ್ತಿ ಹಾಗೂ ಸ್ಥಳೀಯ ಮುಖಂಡರು ಗೆಲುವಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ. ಗೆಲುವು ಸಾಧಿಸಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಕೆಡಿಪಿ ಸದಸ್ಯ ಕೆ.ಸಿ. ನಾಗರಾಜು, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ವೀರಭದ್ರಯ್ಯ, ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಟಿ. ಶಶಿಧರ, ಕಾಂಗ್ರೆಸ್ ಪರಿಶಿಷ್ಟ ಪಂಗಡದ ರಾಜ್ಯ ಉಪಾಧ್ಯಕ್ಷ ಸಿ.ಟಿ. ಶ್ರೀನಿವಾಸ್, ನಿವೃತ್ತ ಪ್ರಾಂಶುಪಾಲರಾದ ಡಾ. ಸಿ. ಶಿವಲಿಂಗಪ್ಪ, ಜಿ. ಬಾಲರೆಡ್ಡಿ, ಬಿ.ಟಿ. ರಮೇಶ್ ಗೌಡ, ಸಾಮಾಜಿಕ ಹೋರಾಟಗಾರ ಎಚ್.ಎಸ್. ಸೈಯದ್, ಮಹಿಳಾ ಘಟಕದ ಅಧ್ಯಕ್ಷೆ ಗೀತಾಬಾಯಿ ಸೇರಿದಂತೆ ಪಕ್ಷದ ನೂರಾರು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾರ್ಕೆಟ್‌ಗಳಲ್ಲಿ ದಸರಾ ಖರೀದಿ ಭರಾಟೆ ಜೋರು
ಮನೆಯ ಸಮೀಪ ಹೈಟೆನ್ಷನ್‌ ವೈಯರ್‌ ತಗುಲಿ ಅಕ್ಕ-ತಮ್ಮನಿಗೆ ಗಂಭೀರ ಗಾಯ