ಕುಂದಗೋಳ: ಮಕ್ಕಳಿಗೆ ಕೊಟ್ಟು ಉಳಿದ ರಾಗಿಮಾಲ್ಟ್‌ನ್ನು ಶಾಲಾ ಮಕ್ಕಳಿಂದ ಚರಂಡಿಯಲ್ಲಿ ಚೆಲ್ಲಿಸಿದ ಘಟನೆ ತಾಲೂಕಿನ ಗುಡೇನಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚಿಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಗ್ರಾಮದಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುಡೇನಕಟ್ಟಿ ಶಾಲೆಯಲ್ಲಿ ಬೆಳಗ್ಗೆ ಮಕ್ಕಳಿಗಾಗಿ ರಾಗಿ ಮಾಲ್ಟ್ ಬಂದಿತ್ತಂತೆ. ಅಂದು ಶಾಲೆಯಲ್ಲಿನ ಮಕ್ಕಳಲ್ಲಿ ಬಹುತೇಕರು ಗೈರಾಗಿದ್ದರಿಂದ ರಾಗಿ ಮಾಲ್ಟ್ ಉಳಿದಿದೆ. ಅದನ್ನು ಕೆಲ ಮಕ್ಕಳು ಮನೆಗೆ ತೆಗೆದುಕೊಂಡು ಹೋಗುತ್ತಿದ್ದರಂತೆ. ಆದರೆ ಅಷ್ಟರೊಳಗೆ ಮಕ್ಕಳನ್ನು ವಾಪಸ್ ಕರೆಯಿಸಿ ತೆಗೆದುಕೊಂಡು ಹೋಗುತ್ತಿದ್ದ ರಾಗಿ ಮಾಲ್ಟ್‌ನ್ನು ಮಕ್ಕಳಿಂದಲೇ ಚರಂಡಿಗೆ ಚೆಲ್ಲಿಸಿದ್ದಾರಂತೆ. ಮಕ್ಕಳನ್ನು ವಾಪಸ್ ಕರೆಯಿಸಿ ಚರಂಡಿಗೆ ಚೆಲ್ಲಿಸಿದ್ದು ಯಾರು ಎಂಬುದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ಗೊತ್ತಿಲ್ಲ. ಚರಂಡಿಗೆ ಯಾರು ಚೆಲ್ಲಿಸಿದರು ಎಂಬದಕ್ಕೆ ಹಾರಿಕೆ ಉತ್ತರ ನೀಡಿದರು. ಮಕ್ಕಳು ಊರಿಗೆ ತೆರಳಿದ್ದರೆ ಅಂದಿನ ಬಿಸಿಯೂಟ ಕೂಡ ಉಳಿದಿರಬೇಕಲ್ಲ ಎಂಬ ಪ್ರಶ್ನೆಗೆ ಇಲ್ಲ, ಊಟ ಉಳಿದಿಲ್ಲ. ರಾಗಿ ಮಾಲ್ಟ್ ಮಾತ್ರ ಉಳಿದಿತ್ತು ಎಂದು ಬಿಇಒ ತಿಳಿಸಿದ್ದಾರೆ.ಶಾಲೆಯಲ್ಲಿದ್ದ ನಾಲ್ಕು ಜನ ಅಡುಗೆ ಬಡಿಸುವ ಮಹಿಳೆಯರೂ ಅಂದು ಯಲ್ಲಮ್ಮನ ಗುಡ್ಡಕ್ಕೆ ಹೋಗಿದ್ದರಂತೆ. ಇಬ್ಬರೇ ಹೋಗಿ ಎಂದು ಮುಖ್ಯೋಪಾಧ್ಯಾಯರು ಹೇಳಿದ್ದರೂ ನಾಲ್ವರೂ ಗೈರಾಗಿದ್ದರಂತೆ. ಇದರಿಂದಾಗಿ ಮಕ್ಕಳೇ ಅವತ್ತಿನ ಪಾತ್ರೆ ಪಗಡೆಗಳನ್ನು ತೊಳೆದಿದ್ದಾರೆ. ಜತೆಗೆ ರಾಗಿ ಮಾಲ್ಟ್ ಅನ್ನು ಚೆಲ್ಲಿದ್ದಾರೆ. ಇದು ಕೂಡ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಇದರ ವಿಡಿಯೋವನ್ನು ಸಾರ್ವಜನಿಕರು ಮಾಡಿದ್ದು ಅದೀಗ ವೈರಲ್ ಆಗಿದೆ.
ಈ ಸುದ್ದಿ ಹಬ್ಬುತ್ತಿದ್ದಂತೆ ಬಿಇಒ ಮಾದೇವಿ ಮಾಡಲಗೇರಿ ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದರು. ಜತೆಗೆ ಶಾಲೆಯ ಮುಖ್ಯೋಪಾಧ್ಯಾಯರಿಗೆ ನೋಟಿಸ್ ಜಾರಿ ಮಾಡಿದ್ದಾರೆ.ನೋಟಿಸ್ ಜಾರಿಗುಡೇನಕಟ್ಟಿ ಶಾಲೆಯ ಮಕ್ಕಳಲ್ಲಿ ಹೆಚ್ಚಿನವರು ಯಲ್ಲಮ್ಮನ ಗುಡ್ಡಕ್ಕೆ ತೆರಳಿದ್ದರು. ಹೀಗಾಗಿ ಶಾಲೆಗೆ ನೀಡಲಾಗಿದ್ದ ರಾಗಿ ಮಾಲ್ಟ್ ಉಳಿದಿತ್ತು. ಅದನ್ನು ಕೆಲ ಮಕ್ಕಳು ಮನೆಗೆ ಒಯ್ಯುತ್ತಿದ್ದರಂತೆ. ಆದರೆ ಯಾರೋ ವಾಪಸ್ ಕರೆಯಿಸಿ ಚೆಲ್ಲಿಸಿದ್ದಾರೆ. ಜತೆಗೆ ಅಡುಗೆಯವರು ಅವತ್ತು ಕೆಲಸಕ್ಕೆ ಗೈರಾಗಿದ್ದರಿಂದ ಮಕ್ಕಳಿಂದ ಕೆಲಸ ಮಾಡಿಸಿದ್ದಾರೆ. ಈ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರಿಗೆ ನೋಟಿಸ್ ನೀಡಲಾಗಿದೆ.
- ಮಾದೇವಿ ಮೂಡಲಗೇರಿ, ಬಿಇಒ, ಕುಂದಗೋಳ