ಬಳ್ಳಾರಿಯಲ್ಲಿ ಜೀನ್ಸ್ ಅಪೇರಲ್ ಪಾರ್ಕ್ ಪ್ರಾರಂಭ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಈ ಹಿಂದೆ ಭರವಸೆ ನೀಡಿದರು.
ಹೊಸಪೇಟೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಳ್ಳಾರಿಗೆ ಬಂದರೆ ನನ್ನದೇನೂ ಅಭ್ಯಂತರ ಇಲ್ಲ. ಆದರೆ, ಅವರು ಈ ಹಿಂದೆ ಬಳ್ಳಾರಿ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಲಿ. ರಾಜ್ಯದಲ್ಲಿ ಅವರದೇ ಸರ್ಕಾರ ಬಂದ್ರೂ ಕೊಟ್ಟ ಭರವಸೆ ಈಡೇರಿಸಿಲ್ಲ ಎಂದು ಮಾಜಿ ಸಚಿವ, ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಹೇಳಿದರು.
ನಗರದ ಚಿತ್ತವಾಡ್ಗಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಜೀನ್ಸ್ ಅಪೇರಲ್ ಪಾರ್ಕ್ ಪ್ರಾರಂಭ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಈ ಹಿಂದೆ ಭರವಸೆ ನೀಡಿದರು. ಆದರೆ, ಇನ್ನು ಪ್ರಾರಂಭ ಆಗಿಲ್ಲ. ಬಳ್ಳಾರಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗಿಲ್ಲ. ನಾವು ₹100 ಕೋಟಿ ಹಣ ಇಟ್ಟಿದ್ದೇವು. ಆದರೆ, ಅವರು ಅದನ್ನು ಖರ್ಚು ಮಾಡಿದ್ದಾರೆ. ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿದೆ. ಸಮನಾಂತರ ಜಲಾಶಯದ ಡಿಪಿಆರ್‌ಗಾಗಿ ನಾವು ₹1000 ಕೋಟಿ ಮೀಸಲಿಟ್ಟಿದ್ದೆವು, ಅದು ಏನಾಯಿತು? ಅಂಜನಾದ್ರಿ ಬೆಟ್ಟಕ್ಕೆ ₹100 ಕೋಟಿ ಮೀಸಲಿಡಲಾಗಿತ್ತು. ಏನು ಮಾಡಿದ್ರಿ? ಕೆಕೆಆರ್‌ಡಿಬಿ ಅಭಿವೃದ್ಧಿ ನಿಗಮದ ಹಣ ಏನಾಯ್ತು? ಎಸ್ಸಿ-ಎಸ್ಟಿಗೆ ಮೀಸಲಿಟ್ಟಿದ್ದ ₹11 ಸಾವಿರ ಕೋಟಿ ಏನಾಯ್ತು? ಈ ಬಗ್ಗೆ ನಮಗೆ ಉತ್ತರ ಕೊಡಬೇಕು ಎಂದರು.
ನಾನು ಪಿಎಗಳ ಕೋಟೆ ಕಟ್ಟಿಕೊಂಡಿಲ್ಲ:
ನಾನು ಪಿಎಗಳ ಕೋಟೆ ಕಟ್ಟಿಕೊಂಡಿಲ್ಲ. ಕಳೆದ 35 ವರ್ಷಗಳಿಂದ ರಾಜಕೀಯದಲ್ಲಿರುವೆ. ಜನರ ಸೇವೆ ಮಾಡುತ್ತಾ ಬಂದಿರುವೆ. ಸೋಲುವ ಭೀತಿಯಿಂದ ಹತಾಶರಾಗಿ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ನಾನು ಒಳ್ಳೆಯ ಮನುಷ್ಯ. ನನ್ನ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ. ಒಳ್ಳೆಯ ಮನುಷ್ಯರ ಮೇಲೆ ಆರೋಪಗಳು ಬರುವುದು ಸಹಜ ಎಂದರು.
ಪ್ರಧಾನಿ ಮೋದಿ ಏ.28ರಂದು ಹೊಸಪೇಟೆಯಲ್ಲಿ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ. ಈ ಪ್ರಚಾರ ನಮಗೆ ಶಕ್ತಿ ನೀಡಲಿದೆ. ಈಗಾಗಲೇ ದೇಶಾದ್ಯಂತ ಮೋದಿ ಅಲೆ ಇದೆ. ಬಳ್ಳಾರಿ, ಕೊಪ್ಪಳ ಲೋಕಸಭೆ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ. ಇದರಲ್ಲಿ ಎರಡು ಮಾತಿಲ್ಲ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.